ಬಿಪಿಎಲ್‌ ಕಾರ್ಡ್‌ಗೆ ಮುಕ್ತಿ, ಆದ್ಯತಾ ಕಾರ್ಡ್‌ಗೆ ಆದ್ಯತೆ

By Suvarna Web DeskFirst Published Jun 18, 2017, 12:16 PM IST
Highlights

ಪಡಿತರ ಕಾರ್ಡ್‌ ಅವ್ಯವಸ್ಥೆಗೆ ಮುಕ್ತಿ ಹಾಡಲು ಹೊಸ ಪದ್ಧತಿ ಜಾರಿಗೆ ತಂದಿದ್ದು, ಅಂತಿಮ ಹಂತದ ಪ್ರಕ್ರಿಯೆ ನಡೆಯುತ್ತಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ. ಎಪಿಎಲ್‌ ಮತ್ತು ಬಿಪಿಎಲ್ ಪಡಿತರ ಕಾರ್ಡ್‌ ವಿತರಣೆಯಲ್ಲಿ ಹಲವಾರು ಗೊಂದಲಗಳಿದ್ದವು. ಹೀಗಾಗಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ಸಿಗುತ್ತಿರಲಿಲ್ಲ. ಇದನ್ನು ಮನಗಂಡ ಸರ್ಕಾರ ಪ್ರಸ್ತುತ ವ್ಯವಸ್ಥೆಯನ್ನು ಕೈಬಿಟ್ಟು, ಆದ್ಯತೆ ಮತ್ತು ಆದ್ಯತೆ ರಹಿತ ಎಂಬ ಎರಡು ಕಾರ್ಡ್‌ಗಳನ್ನು ನೀಡಲು ನಿರ್ಧರಿಸಿದೆ ಎಂದು ತಿಳಿಸಿದರು.

ಹುಬ್ಬಳ್ಳಿ: ಪಡಿತರ ಕಾರ್ಡ್‌ ಅವ್ಯವಸ್ಥೆಗೆ ಮುಕ್ತಿ ಹಾಡಲು ಹೊಸ ಪದ್ಧತಿ ಜಾರಿಗೆ ತಂದಿದ್ದು, ಅಂತಿಮ ಹಂತದ ಪ್ರಕ್ರಿಯೆ ನಡೆಯುತ್ತಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್‌ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಪಿಎಲ್‌ ಮತ್ತು ಬಿಪಿಎಲ್ ಪಡಿತರ ಕಾರ್ಡ್‌ ವಿತರಣೆಯಲ್ಲಿ ಹಲವಾರು ಗೊಂದಲಗಳಿದ್ದವು. ಹೀಗಾಗಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ಸಿಗುತ್ತಿರಲಿಲ್ಲ. ಇದನ್ನು ಮನಗಂಡ ಸರ್ಕಾರ ಪ್ರಸ್ತುತ ವ್ಯವಸ್ಥೆಯನ್ನು ಕೈಬಿಟ್ಟು, ಆದ್ಯತೆ ಮತ್ತು ಆದ್ಯತೆ ರಹಿತ ಎಂಬ ಎರಡು ಕಾರ್ಡ್‌ಗಳನ್ನು ನೀಡಲು ನಿರ್ಧರಿಸಿದೆ ಎಂದು ತಿಳಿಸಿದರು.

ಕಾರ್ಡ್‌ ಪಡೆಯಲು ಮಾನದಂಡಗಳು: ಆದ್ಯತಾ ಕಾರ್ಡ್‌ ಪಡೆಯಲು ಸರ್ಕಾರಿ ನೌಕರರಾಗಿರಬಾರದು ಹಾಗೂ ವಾರ್ಷಿಕ ಆದಾಯ 1.25 ಲಕ್ಷ ರುಪಾಯಿಗಳನ್ನು ಮೀರಿರಬಾರದು. ಸ್ವಂತ ಕಾರು ಹೊಂದಿರಬಾರದು ನಗರ ಪ್ರದೇಶದಲ್ಲಿ ಒಂದು ಸಾವಿರ ಚದರ ಅಡಿ ವಿಸ್ತೀರ್ಣಕ್ಕೆ ಮೇಲ್ಪಟ್ಟು ಮನೆ ಹೊಂದಿರಬಾರದು ಎಂಬ ನಾಲ್ಕು ಅರ್ಹತೆಗಳನ್ನು ನೀಡಲಾಗಿದೆ ಎಂದು ಹೇಳಿದರು.

ಅರ್ಹರು ತಮ್ಮ ಆಧಾರ್‌ ಕಾರ್ಡ್‌ನೊಂದಿಗೆ ಆನ್‌ಲೈನ್‌ ಅರ್ಜಿ ಸಲ್ಲಿಸಿದರೆ ಆದ್ಯತಾ ಕಾರ್ಡ್‌ ನೀಡುತ್ತೇವೆ. ನಂತರ ಅಧಿಕಾರಿಗಳಿಂದ ತನಿಖೆ ನಡೆಸಿ, ಸುಳ್ಳು ಮಾಹಿತಿ ನೀಡಿ ಕಾರ್ಡ್‌ ಪಡೆದಿದ್ದರೆ ಕ್ರಿಮಿನಲ್‌ ಮೊಕೊದ್ದಮೆ ದಾಖಲಿಸುತ್ತೇವೆ ಎಂದು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದ ಉಜ್ವಲ್‌ ಗ್ಯಾಸ್‌ ಯೋಜನೆಗೆ ನಮ್ಮ ಅನಿಲ ಭಾಗ್ಯ ಯೋಜನೆ ಪರ್ಯಾಯ ವಲ್ಲ. ರಾಜ್ಯದಲ್ಲಿ 21 ಲಕ್ಷ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕವಿಲ್ಲ. ಇವರಿಗೆ ಅನುಕೂಲವಾಗಲು ಅನಿಲಭಾಗ್ಯ ಯೋಜನೆ ಜಾರಿಗೊಳಿಸ ಲಾಗಿದೆ. ಇದಕ್ಕಾಗಿ ಜುಲೈನಲ್ಲಿ ಪ್ರತ್ಯೇಕ ತಂತ್ರಾಂಶ ಸಿದ್ಧವಾಗಲಿದೆ. ಇಲಾಖೆಯಲ್ಲಿ ಶೇ. 25ರಿಂದ 30ರಷ್ಟುಸಿಬ್ಬಂದಿ ಕೊರತೆ ಇದೆ. ಆದಷ್ಟುಬೇಗ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು.

ರಾಜ್ಯದ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಕೊಲೆ ಪ್ರಕರಣದ ನಂತರದ ಬೆಳವಣಿಗೆಗಳು ರಾಜಕೀಯ ಪ್ರೇರಿತವಾಗಿವೆ ಎಂದು ಸಚಿವರು, ನಮ್ಮ ಇಲಾಖೆಯಿಂದ ಅವರಿಗೆ ಯಾವುದೇ ತೊಂದರೆ ಆಗಿಲ್ಲ. ನಾವು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಅವರು ಹೇಳಿದರು.

click me!