ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಪಾಸ್‌ ವಿತರಣೆ ಮಾಡಲು ಪರಿಶೀಲನೆ: ಸಿಎಂ ಸಿದ್ದರಾಮಯ್ಯ ಘೋಷಣೆ

By Suvarna Web DeskFirst Published Jun 18, 2017, 12:00 PM IST
Highlights

ರಾಜ್ಯದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ವಿದ್ಯಾರ್ಥಿಗಳಿಗೆ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಬಸ್‌ ಪಾಸ್‌ ನೀಡುವ ಯೋಜನೆ ಈಗಾಗಲೇ ಕಾರ್ಯಗತಗೊಂಡಿದ್ದು, ಸಾಮಾನ್ಯ ವಿದ್ಯಾರ್ಥಿ ಗಳಿಗೂ ಈ ಯೋಜನೆ ವಿಸ್ತರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಬೆಂಗಳೂರು: ರಾಜ್ಯದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ವಿದ್ಯಾರ್ಥಿಗಳಿಗೆ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಬಸ್‌ ಪಾಸ್‌ ನೀಡುವ ಯೋಜನೆ ಈಗಾಗಲೇ ಕಾರ್ಯಗತಗೊಂಡಿದ್ದು, ಸಾಮಾನ್ಯ ವಿದ್ಯಾರ್ಥಿ ಗಳಿಗೂ ಈ ಯೋಜನೆ ವಿಸ್ತರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಎಂ ಟಿಸಿ ಸ್ಮಾರ್ಟ್‌ ಕಾರ್ಡ್‌, ಹೊಸ ಬಸ್‌ಗಳು ಹಾಗೂ ನಿಲ್ದಾಣದಲ್ಲಿ ನವೀಕೃತ ಪಾದಚಾರಿ ಮೇಲ್ಸೇತುವೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ.ಜಾತಿ ಮತ್ತು ಪಂಗಡದ ವಿದ್ಯಾ ರ್ಥಿಗಳಿಗೆ ಪ್ರಸಕ್ತ ಸಾಲಿನಿಂದ ಉಚಿತ ಬಸ್‌ ಪಾಸ್‌ ನೀಡಲು ತೀರ್ಮಾನಿಸಲಾಗಿತ್ತು. ಇದೀಗ ರಾಜ್ಯ ರಸ್ತೆ ಸಾರಿಗೆ ನಿಗಮ, ಈಶಾನ್ಯ ಹಾಗೂ ವಾಯವ್ಯ ನಿಗಮದ ಬಸ್‌ಗಳಲ್ಲಿ ಪ್ರಯಾಣಿಸಲು ಉಚಿತ ಬಸ್‌ ನೀಡಲು ನಿರ್ಧರಿಸಲಾಗಿದೆ ಎಂದರು.

ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ದೇಶದಲ್ಲಿ ಮಾದರಿ ಸಾರ್ವಜನಿಕ ಸಾರಿಗೆ ಸಂಸ್ಥೆ ಎಂಬ ಕೀರ್ತಿಗೆ ಭಾಜನವಾಗಿವೆ. ಉತ್ತಮ ಸೇವೆಗೆ ನೂರಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಈ ಯಶಸ್ಸು ಸಾರಿಗೆ ಸಚಿವರು, ನಿಗಮದ ಅಧಿಕಾರಿಗಳು, ನೌಕರರಿಗೆ ಸಲ್ಲಬೇಕು ಎಂದರು.

ಬಿಎಂಟಿಸಿಯ ಬಸ್‌ಗಳಲ್ಲಿ ನಿತ್ಯ 52 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಮೆಟ್ರೋದಲ್ಲಿ ಹಾಲಿ ನಿತ್ಯ 5 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ಸದ್ಯದಲ್ಲಿ ಮೆಟ್ರೋ ರೈಲುಗಳಿಗೆ ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಲಾಗುವುದು. ಇದರಿಂದ ಪ್ರಯಾ ಣಿಕರ ಸಂಖ್ಯೆ 5 ಲಕ್ಷದಿಂದ 10 ಲಕ್ಷಕ್ಕೆ ಏರಲಿದೆ. ಜತೆಗೆ ಮೆಟ್ರೋ 2ನೇ ಹಂತದ ಕಾಮಗಾರಿ ಆರಂಭ ವಾಗಿದ್ದು, 2020ರ ವೇಳೆಗೆ ಮುಕ್ತಾಯವಾಗಲಿದೆ. ಇದರಿಂದ ನಿತ್ಯ 20 ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣಿಸಬಹುದು. ಪ್ರಯಾಣಿಕರ ಅನುಕೂಲ ಕ್ಕಾಗಿ ಬಿಎಂಟಿಸಿ ಬಸ್‌ಗಳ ಫೀಡರ್‌ ಸೇವೆಯನ್ನೂ ನೀಡಲಾಗುವುದು ಎಂದು ಹೇಳಿದರು.

ಸಾರಿಗೆ ಸಚಿವ ಆರ್‌. ರಾಮಲಿಂಗಾರೆಡ್ಡಿ ಮಾತ ನಾಡಿ, ಬಿಎಂಟಿಸಿಯು ಸ್ಮಾರ್ಟ್‌ಕಾರ್ಡ್‌ ಪರಿಚಯಿ ಸುತ್ತಿರುವ ದೇಶದ ಮೊದಲ ಸಾರ್ವಜನಿಕ ಸಾರಿಗೆ ನಿಗಮ ಎಂಬ ಕೀರ್ತಿಗೆ ಪಾತ್ರವಾಗಿದೆ. ಮೊದಲ ಹಂತದಲ್ಲಿ 4 ಲಕ್ಷ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ ನೀಡುತ್ತಿದ್ದೇವೆ. ಅಕ್ಟೋಬರ್‌ 1ರಿಂದ ಎಲ್ಲ ಪ್ರಯಾಣಿಕರಿಗೆ ಸ್ಮಾರ್ಟ್‌ಕಾರ್ಡ್‌ ವಿತರಿಸಲಾಗು ವುದು ಎಂದು ತಿಳಿಸಿದರು.

ಸಚಿವ ಕೆ.ಜೆ.ಜಾಜ್‌ರ್‍, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಬಿಎಂಟಿಸಿ ಅಧ್ಯಕ್ಷ ನಾಗರಾಜ್‌ ಯಾದವ್‌, ವ್ಯವಸ್ಥಾಪಕ ನಿರ್ದೇಶಕಿ ಡಾ.ಏಕ್‌ರೂಪ್‌ ಕೌರ್‌, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜು, ಮೇಯರ್‌ ಜಿ.ಪದ್ಮಾವತಿ ಮತ್ತಿತರರು ಉಪಸ್ಥಿತರಿದ್ದರು.

click me!