
ಬೆಂಗಳೂರು: ರಾಜ್ಯದಲ್ಲಿ ಗ್ರಾಮೀಣ ಮಟ್ಟದಲ್ಲಿರುವ ಕಚೇರಿಗಳಿಗೆ ಸುಧಾರಿತ ಸಂಪರ್ಕ ಸೌಲಭ್ಯ (ಇಂಟರ್‌ನೆಟ್ ಸಹಿತ) ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಪ್ರತಿಷ್ಠಿತ ಸಾಫ್ಟವೇರ್ ಸಂಸ್ಥೆ ವಿಪ್ರೋ ಜತೆ ಕೈ ಜೋಡಿಸಿದ್ದು, ಸೌಲಭ್ಯಕ್ಕಾಗಿ ರೂ.615.82ಕೋಟಿ ಒದಗಿಸಲು ತೀರ್ಮಾನಿಸಿದೆ. ಹಾಗೆಯೇ ಸಂಪರ್ಕ ಸೌಲಭ್ಯ ಸಹಕಾರಕ್ಕಾಗಿ ಬ್ಯಾಂಡ್ ವಿಡ್ತ್ ಪಡೆಯಲು ಬಿಎಸ್‌ಎನ್‌ಎಲ್‌ಗೆ ರೂ.185.82 ಕೋಟಿ ನೀಡಲು ಮುಂದಾಗಿದೆ. ಈ ಮೂಲಕ ರಾಜ್ಯದಲ್ಲಿ 10,000 ಸರ್ಕಾರಿ ಕಚೇರಿಗಳಲ್ಲಿ ಸಂಪರ್ಕ ವ್ಯವಸ್ಥೆಯನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು ಎಂದು ಕಾನೂನು ಸಚಿವ ಡಿ.ಬಿ.ಜಯಚಂದ್ರ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದಲ್ಲಿ ಇ-ಆಡಳಿತ ಸುಧಾರಣೆಗೊಳಿಸಲು ಕರ್ನಾಟಕ ಸರ್ಕಾರ ವಿಸ್ತೃತ ಜಾಲ 2.0 (ಕೆಎಸ್‌ಡಬ್ಯೂಎಎನ್) ಸ್ಥಾಪಿಸಬೇಕಿದೆ. ರಾಜ್ಯದಲ್ಲಿದ್ದ ಸಂಪರ್ಕ ಜಾಲ ಯೋಜನೆ 2009-14 ಈಗಾಗಲೇ ಮುಗಿದಿದೆ. ಮುಂದಿನ 5 ವರ್ಷಕ್ಕೆ ಸಂಪರ್ಕ ಜಾಲ ಯೋಜನೆ ರೂಪಿಸಲಾಗಿದ್ದು, ಅದಕ್ಕಾಗಿ ವಿಪ್ರೋ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಸದ್ಯ 4000 ಸರ್ಕಾರಿ ಕಚೇರಿಗಳಿಗೆ ಸೀಮಿತವಾಗಿರುವ ಸಂಪರ್ಕ ಜಾಲ 10,000 ಕಚೇರಿಗಳಿಗೆ ವಿಸ್ತರಣೆಯಾಗಲಿದೆ ಎಂದರು.
ಅಂಗನವಾಡಿ ನೌಕರರಾಗಿ ನೇಮಕ: ರಾಜ್ಯದಲ್ಲಿ 40 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆಯರನ್ನು ಅಂಗನವಾಡಿ ನೌಕರರಾಗಿ ಪುನರ್ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಈ ಹಿಂದೆ ಅಂಗನವಾಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಗ್ರಾ.ಪಂ. ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಆದರೆ, ಸರ್ಕಾರ ಆಕ್ಷೇಪಿಸಿದ್ದರಿಂದ ಅವರು ಪಂಚಾಯಿತಿ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಈ ಪ್ರಕ್ರಿಯೆ ತಡವಾಗಿ ನೌಕರರನ್ನು ಸರ್ಕಾರ ವಜಾಗೊಳಿಸಿತ್ತು. ಹೀಗಾಗಿ ಅಂಥವರಲ್ಲಿ ಈಗ 28 ಕಾರ್ಯಕರ್ತೆಯರು, 10 ಸಹಾಯಕಿಯರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ಒಪ್ಪಿಗೆ ನೀಡಲಾಯಿತು.
ಒಳಚರಂಡಿ ವ್ಯವಸ್ಥೆಗೆ ರೂ.275ಕೋಟಿ: ಬೆಂಗಳೂರಿನ ಲ್ಲಿರುವ ನ್ಯಾಯಾಂಗ ಅಕಾಡೆಮಿಯ ಹೊಸ ಕಟ್ಟಡ ನಿರ್ಮಾಣಕ್ಕಾಗಿ ರೂ.84 ಕೋಟಿ ಒದಗಿಸಲು ಸಂಪುಟ ಒಪ್ಪಿಗೆ ನೀಡಿತು. ಅದೇ ರೀತಿ, ರಾಜ್ಯದಲ್ಲಿರುವ 6 ಕ್ರೀಡಾ ವಸತಿ ನಿಲಯಗಳನ್ನು ಕ್ರೀಡಾ ಅಕಾಡೆಮಿಗಳಾಗಿ ಪರಿವರ್ತಿಸಲು ನಿರ್ಧಾರ ಮಾಡಲಾಗಿದ್ದು, ಅದರಂತೆ ಉಡುಪಿ, ಮೈಸೂರು, ಬಳ್ಳಾರಿ, ಬೆಳಗಾವಿ, ವಿಜಯ ಪುರ ಮತ್ತು ಕಲಬುರ್ಗಿಯಲ್ಲಿರುವ ಕ್ರೀಡಾ ವಸತಿ ನಿಲಯಗಳು ಅಕಾಡೆಮಿಗಳಾಗಲಿವೆ ಎಂದರು.
ರಾಜ್ಯದ ವಿವಿಧ ಪಟ್ಟಣಗಳ ಒಳಚರಂಡಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದ್ದು, ಉತ್ತರ ಕರ್ನಾಟಕದ ಭಟ್ಕಳಕ್ಕೆ ರೂ.200 ಕೋಟಿ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ರೂ.57.60 ಕೋಟಿ ಹಾಗೂ ಚಿತ್ರದುರ್ಗದ ಹೊಸದುರ್ಗ, ರೂ.25.65ಕ್ಕೆ ಕೋಟಿ ನೀಡಲು ಸಮ್ಮತಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.