ಸಿಎಂ ಗ್ರಾಮ ವಾಸ್ತವ್ಯದ ವೇಳೆ ಅಧಿಕಾರಿಗಳು ಕಾರು ಬಳಸುವಂತಿಲ್ಲ

By Web DeskFirst Published Jun 11, 2019, 10:13 AM IST
Highlights

ಮುಖ್ಯಮಂತ್ರಿ ಕುಮಾರಸ್ವಾಮಿ ಹಲವು ಜಿಲ್ಲೆಗಳಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸುತ್ತಿದ್ದು ಈ ವೇಳೆ ಹಲವು ನಿಯಮಗಳನ್ನು ರೂಪಿಸಿ ಜಿಲ್ಲಾಡಳಿತಕ್ಕೆ ಕಳಿಸಲಾಗಿದೆ. 

ಬೆಂಗಳೂರು :  ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರ ಸುಮಾರು ಹತ್ತಕ್ಕೂ ಹೆಚ್ಚು ಅಂಶಗಳ ಮಾರ್ಗಸೂಚಿಗಳನ್ನು ರೂಪಿಸಿ ಆಯಾ ಜಿಲ್ಲಾಡಳಿತಕ್ಕೆ ಕಳುಹಿಸಿದೆ.

ಗ್ರಾಮ ವಾಸ್ತವ್ಯಕ್ಕೆ ಅಗತ್ಯವಾದ ಅನುಕೂಲಕರವಾದ ಶಾಲೆ ಹಾಗೂ ವಿಶಾಲವಾದ ಸ್ಥಳವನ್ನು ಜಿಲ್ಲಾ ಉಸ್ತುವಾರಿ ಸಚಿವರು-ಶಾಸಕರ ಅಭಿಪ್ರಾಯ ತೆಗೆದುಕೊಂಡು ಗುರುತಿಸಬೇಕು. ಮುಖ್ಯಮಂತ್ರಿಗಳ ಭೇಟಿಗೆ ಆಗಮಿಸುವ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಸಂವಾದ ನಡೆಸಲು ಶಾಲೆಯಿಂದ ದೂರ ಇರುವ ಸ್ಥಳದಲ್ಲಿ ವೇದಿಕೆ ನಿರ್ಮಿಸಬೇಕು. ಸಾರ್ವಜನಿಕರ ಅರ್ಜಿ ಸ್ವೀಕಾರ ಮಾಡಲು ಸ್ಥಳೀಯ ಸಹಾಯಕ ಆಯಕ್ತರ ನೇತೃತ್ವದಲ್ಲಿ ತಂಡ ರಚಿಸಬೇಕು.

ಅರ್ಜಿಗಳ ಸ್ವೀಕೃತಿ ಕೆಲಸವನ್ನು ಜಿಲ್ಲಾಡಳಿತದ ಅಧಿಕಾರಿಗಳು ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿ ಕಾರ್ಯ ನಿರ್ವಹಣೆ ಮಾಡಬೇಕು. ಸ್ಥಳೀಯ ರೈತರಿಗೆ ಮಾಹಿತಿ ನೀಡಬಹುದಾದ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಲು ವ್ಯವಸ್ಥೆ ಮಾಡಬೇಕು. ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವ ತಜ್ಞರನ್ನು ಆಹ್ವಾನಿಸುವುದು. 15-20 ನಿಮಿಷ ತಂತ್ರಜ್ಞಾನದ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಸಂಜೆ 6 ಗಂಟೆಯ ನಂತರ ಮುಖ್ಯಮಂತ್ರಿಗಳ ವಾಸ್ತವ್ಯ ಮಾಡುವ ಸ್ಥಳಗಳಲ್ಲಿ ವಿದ್ಯಾರ್ಥಿಗಳು ಮತ್ತು ಕಲಾವಿದರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು.

ಆದ್ಯತೆ ಮೇಲೆ ಸಮಸ್ಯೆಗೆ ಪರಿಹಾರ:

ಗ್ರಾಮ ವಾಸ್ತವ್ಯದ ಗ್ರಾಮದ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಅಗತ್ಯ ಮೂಲಭೂತ ಸಮಸ್ಯೆ ಪಟ್ಟಿಮಾಡಿ ಆದ್ಯತೆ ಮೇರೆಗೆ ಸಮಸ್ಯೆ ಪರಿಹಾರ ಮಾಡಬೇಕು. ಸ್ಥಳೀಯವಾಗಿ ಕಂಡು ಬರುವ ಕಂದಾಯ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಇಂಧನ ಇಲಾಖೆಯಲ್ಲಿನ ಸಮಸ್ಯೆಗಳನ್ನು ಬೇಡಿಕೆಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಬೇಕು. ಸಾರ್ವಜನಿಕ ಲಘು ಉಪಹಾರ ನೀರು, ಚಹಾ-ಕಾಫಿ ವ್ಯವಸ್ಥೆ ಮಾಡಬೇಕು. ಮುಖ್ಯಮಂತ್ರಿಗಳ ಬೆಂಗಾವಲು ಪಡೆಯಲ್ಲಿ ವಾಹನ ದಟ್ಟಣೆ ಇಲ್ಲದಂತೆ ಕ್ರಮ ವಹಿಸಬೇಕು. ಅಧಿಕಾರಿಗಳು, ಸಿಬ್ಬಂದಿ ಒಂದೇ ಬಸ್‌ನಲ್ಲಿ ಸಂಚಾರ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ.

click me!