ಅನೇಕ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದ ಗ್ರಾಮಕ್ಕೆ ತಮ್ಮ ವಾಸ್ತವ್ಯಕ್ಕೂ ಮುನ್ನವೇ ಸಿಎಂ ಕುಮಾರಸ್ವಾಮಿ ಬಂಪರ್ ಗಿಫ್ಟ್ ನೀಡಿದ್ದಾರೆ.
ಕಲಬುರಗಿ : ಕುಡಿಯುವ ನೀರು, ರಸ್ತೆ ಸೇರಿದಂತೆ ಅನೇಕ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಹೆರೂರು(ಬಿ) ಗ್ರಾಮಸ್ಥರ ಮನವಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ‘ವಾಸ್ತವ್ಯ’ಕ್ಕೂ ಮೊದಲೇ ಸ್ಪಂದಿಸಿದ್ದು ಗ್ರಾಮಕ್ಕೆ ‘ಬಂಪರ್ ಗಿಫ್ಟ್’ ನೀಡಿದ್ದಾರೆ.
ಜೂನ್ 22ರಂದು ಹೆರೂರು(ಬಿ) ಗ್ರಾಮದಲ್ಲಿ ಸಿಎಂ ವಾಸ್ತವ್ಯ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಆ ಊರಿಗೆ ಭೇಟಿ ನೀಡಿ ‘ಕನ್ನಡಪ್ರಭ’ ತನ್ನ ಜೂ.10ರ ಸೋಮವಾರದ ಸಂಚಿಕೆಯಲ್ಲಿನ ‘ಕುಮಾರಣ್ಣ ಕುಡಿಯೋ ನೀರು, ನಡೆಯೋ ರಸ್ತೆ ಕೊಟ್ರೆ ಸಾಕು’ ಎಂಬ ಶೀರ್ಷಿಕೆಯ ‘ವಿಶೇಷ ವರದಿ’ಗೆ ಸ್ಪಂದಿಸಿರುವ ಕುಮಾರಸ್ವಾಮಿ ಊರಿನ ಆಂತರಿಕ ರಸ್ತೆಗಳ ಸುಧಾರಣೆ ಹಾಗೂ ಹೆರೂರು-ಕಲಬುರಗಿ ನಡುವಿನ 40 ಕಿ.ಮೀ. ರಸ್ತೆಗೆ ಕಾಯಕಲ್ಪ ನೀಡಲು .3 ಕೋಟಿ ತಕ್ಷಣ ಬಿಡುಗಡೆ ಮಾಡಿದ್ದಾರೆ.
ಕಳೆದ 8 ವರ್ಷದಿಂದ ಗ್ರಹಣ ಹಿಡಿದಿರುವ ಗ್ರಾಮದ .3.68 ಕೋಟಿ ಮೊತ್ತದ ‘ಜಲ ನಿರ್ಮಲ ಯೋಜನೆ’ಗೂ ಕಾಯಕಲ್ಪ ನೀಡಲು ಅಗತ್ಯ ಆಡಳಿತಾತ್ಮಕ ಕ್ರಮಗಳಿಗೆ ಸಿಎಂ ಸೂಚಿಸಿದ್ದಾರೆ. ಅಲ್ಲದೆ, ಈ ಕುರಿತಂತೆ ಕಲಬುರಗಿ ಜಿಪಂ ಸಿಇಒ ಡಾ.ಪಿ.ರಾಜಾ ಹಾಗೂ ಡಿಸಿ ಆರ್.ವೆಂಕಟೇಶ ಕುಮಾರ್ ಅವರೊಂದಿಗೆ ಚರ್ಚಿಸಿದ್ದು ತಕ್ಷಣ ಹೆರೂರಿಗೆ ಭೇಟಿ ನೀಡಿ ಸದರಿ ಯೋಜನೆಗೆ ಕಾಯಕಲ್ಪ ನೀಡುವಂತೆ ಹೇಳಿದ್ದಾರೆ.
ಊರಲ್ಲಿರುವ ಪ್ರೌಢಶಾಲೆಗೆ ಕಾಡುತ್ತಿರುವ ಕನ್ನಡ, ಹಿಂದಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ನೀಗಿಸಲಿಕ್ಕೂ ಅಗತ್ಯ ಕ್ರಮಗಳಿಗೆ ಮುಖ್ಯಮಂತ್ರಿ ಕಲಬುರಗಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಇದಲ್ಲದೆ ‘ಕನ್ನಡಪ್ರಭ’ ತನ್ನ ವರದಿಯಲ್ಲಿ ಪ್ರಸ್ತಾಪಿಸಿರುವ ಸಮಸ್ಯೆಗಳನ್ನೂ ಜೂ.22ಕ್ಕೂ ಮುಂಚೆಯೇ ಪರಿಹರಿಸುವಂತೆ ಜಿಲ್ಲಾಡಳಿತಕ್ಕೆ ಖಡಕ್ ಸೂಚನೆ ನೀಡಿದ್ದಾರೆ.
‘ಕನ್ನಡಪ್ರಭ’ಕ್ಕೆ ಅಭಿನಂದಿಸಿದ ಸಿಎಂ
ಹೆರೂರು(ಬಿ) ಗ್ರಾಮದ ಕೊರತೆಗಳು, ಅಲ್ಲಿನ ತರಹೇವಾರಿ ಸಮಸ್ಯೆಗಳು, ಹಳ್ಳಿ ಜನರ ನಿರೀಕ್ಷೆಗಳನ್ನೆಲ್ಲ ಕ್ರೂಢೀಕರಿಸಿ ಕನ್ನಡಪ್ರಭ ತನ್ನ ಜೂ.10 ರ ಸಂಚಿಕೆಯಲ್ಲಿ ಪ್ರಕಟಿಸಿರುವ ವರದಿ ಊರಿನ ಸಂಪೂರ್ಣ ಚಿತ್ರಣ ನೀಡಿದೆ. ವರದಿಯಲ್ಲಿ ಪ್ರಸ್ತಾಪಿಸಲಾಗಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಯೇ ಗ್ರಾಮ ವಾಸ್ತವ್ಯಕ್ಕೆ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. ಕನ್ನಡಪ್ರಭ ಜೊತೆ ದೂರವಾಣಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಗ್ರಾಮೀಣ ಸಮಸ್ಯೆಯನ್ನು ರಾಜ್ಯಮಟ್ಟದಲ್ಲಿ ಪ್ರಸ್ತಾಪಿಸಿ, ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿರುವುದಕ್ಕಾಗಿ ಪತ್ರಿಕೆಯ ಸಂಪಾದಕೀಯ ಬಳಗಕ್ಕೆ ಧನ್ಯವಾದ ಹೇಳಿದ್ದಾರೆ.
ತೋರಿಕೆ, ಪ್ರಚಾರಕ್ಕಾಗಿ ಅಲ್ಲ:
ಗ್ರಾಮ ವಾಸ್ತವ್ಯ ತೋರಿಕೆಗಾಗಿ ಅಲ್ಲ, ಇದಕ್ಕೊಂದು ಹೊಸ ಸ್ವರೂಪ ನೀಡಿಯೇ ಹೊರಡುತ್ತಿರುವುದಾಗಿ ಸ್ಪಷ್ಟಪಡಿಸಿದ ಕುಮಾರಸ್ವಾಮಿ ತಾವು 2006ರಲ್ಲಿ ವಾಸ್ತವ್ಯ ಹೂಡಿದ್ದ ಅಫಜಲ್ಪುರ ತಾಲೂಕಿನ ಭೀಮಾತೀರದ ಮಣ್ಣೂರಿನ ನೆನಪುಗಳನ್ನು ಮೆಲಕು ಹಾಕಿದರು. ತಾನು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೂ ಗ್ರಾಮದಲ್ಲೇ ಇರುವೆ. ಹೋದ ಕಡೆಗಳಲ್ಲೆಲ್ಲಾ ಜನರ ಸಮಸ್ಯೆ ಆಲಿಸಿ ಸ್ಥಳದಲ್ಲೇ ಪರಿಹಾರ ಸೂಚಿಸುವ ಕೆಲಸ ಮಾಡುವೆ. ಈ ವೇಳೆ ನನ್ನ ಜೊತೆ ಅಧಿಕಾರಿಗಳೂ ಇರುತ್ತಾರೆ ಎಂದರು.