
ಬೆಂಗಳೂರು(ಜ. 01): ಅಗ್ಗದ ಹಾಗೂ ಉತ್ಕೃಷ್ಟ ವೈದ್ಯಕೀಯ ಚಿಕಿತ್ಸೆಗೆ ಜನಪ್ರಿಯವಾಗಿರುವ ಜಯದೇವ ಆಸ್ಪತ್ರೆಯ ಖ್ಯಾತಿಗೆ ಇನ್ನಷ್ಟು ಮೆರಗು ತರುವಂತಹ ಬೆಳವಣೀಗೆ ನಡೆದಿದೆ. ನಿನ್ನೆ ಶನಿವಾರ ಜಯದೇವ ಆಸ್ಪತ್ರೆಯಲ್ಲಿ 40 ವರ್ಷದ ವ್ಯಕ್ತಿಯೊಬ್ಬರಿಗೆ ಹೃದಯದ ಟ್ರಾನ್ಸ್'ಪ್ಲಾಂಟ್ ಸರ್ಜರಿ ನಡೆದಿದೆ. ರಾಜ್ಯದ ಸರಕಾರಿ ಆಸ್ಪತ್ರೆಯೊಂದರಲ್ಲಿ ಇಂಥದ್ದೊಂದು ಸರ್ಜರಿ ನಡೆದದ್ದು ಇದೇ ಮೊದಲು ಎನ್ನಲಾಗಿದೆ.
ಆಸ್ಪತ್ರೆಯ ಕಾರ್ಡಿಯಾಕ್ ಸರ್ಜನ್ ಸೀತಾರಾಮ ಭಟ್ ನೇತೃತ್ವದ ತಂಡವು ಗಂಗಾಧರ್ ಎಂಬ ಈ ವ್ಯಕ್ತಿಗೆ 4 ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೃದಯದ ಕಸಿ ಮಾಡಲು ಯಶಸ್ವಿಯಾಗಿದ್ದಾರೆ. 30 ವರ್ಷದ ಮಾರಿಯೋ ಹುವಾಂಗ್ ಎಂಬ ವ್ಯಕ್ತಿಯ ಹೃದಯವನ್ನು ತೆಗೆದು ಗಂಗಾಧರ್ ಅವರಿಗೆ ಹಾಕಲಾಯಿತು. ಮಣಿಪಾಲ ಆಸ್ಪತ್ರೆಯಿಂದ ಜಯದೇವದವರೆಗೆ ಗ್ರೀನ್ ಕಾರಿಡಾರ್ ನಿರ್ಮಿಸಿ, ಹೃದಯದ ರವಾನೆಯನ್ನು ಸುಗಮಗೊಳಿಸಲು ಪೊಲೀಸರು ನೆರವಾದರು.
ಮಹಡಿ ಮೇಲಿಂದ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದ ಮಾರಿಯೋ ಹುವಾಂಗ್ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ. ಬ್ರೇನ್ ಡೆಡ್ ಆಗಿದ್ದ ಅವರ ದೇಹದ ವಿವಿಧ ಅಂಗಗಳನ್ನು ದಾನ ಮಾಡಲು ಅವರ ಕುಟುಂಬದವರು ಸಮ್ಮತಿಸಿದ್ದರು. ಹೃದಯ, ಮೂತ್ರಪಿಂಡ, ಯಕೃತ್ತು, ಕಾರ್ನಿಯಾ ಹೀಗೆ ಉಪಯುಕ್ತ ಅಂಗಗಳು ನಗರದ ವಿವಿಧ ಆಸ್ಪತ್ರೆ ಪಾಲಾದವು.
ಇತ್ತ, ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಗಂಗಾಧರ್ ಅವರಿಗೆ ಹೃದಯದ ತೊಂದರೆ ಬಹಳಷ್ಟಿದ್ದು, ಹಾರ್ಟ್ ಟ್ರಾನ್ಸ್'ಪ್ಲಾಂಟ್ ಮಾಡಬೇಕಾದ ಅನಿವಾರ್ಯತೆ ಇತ್ತು. ಖಾಸಗಿ ಆಸ್ಪತ್ರೆಯಲ್ಲಿ ಈ ಸರ್ಜರಿ ತೀರಾ ದುಬಾರಿ ಇರುವುದರಿಂದ ಗಂಗಾಧರ್ ಕುಟುಂಬ ಕಂಗಾಲಾಗಿತ್ತು. ಈ ಸಮಯದಲ್ಲಿ ಸರಕಾರೀ ಸ್ವಾಮ್ಯದ ಜಯದೇವ ಆಸ್ಪತ್ರೆಯು ಶಸ್ತ್ರಚಿಕಿತ್ಸೆ ಮಾಡುವ ಸಾಹಸಕ್ಕೆ ಮುಂದಾಯಿತು. ಅದರಲ್ಲಿ ಯಶಸ್ವಿಯೂ ಆಗಿದ್ದು, ಸರಕಾರಿ ಆಸ್ಪತ್ರೆಗೆ ಇನ್ನಷ್ಟು ಘನತೆ ಮತ್ತು ಸಮ್ಮತಿ ಸಿಕ್ಕಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.