ಸರ್ಕಾರದ ಕೋಟ್ಯಂತರ ಹಣ ಖಾಸಗಿ ವ್ಯಕ್ತಿಗಳ ಖಾತೆಗೆ ಜಮಾ

By Web deskFirst Published Oct 6, 2016, 6:58 PM IST
Highlights

-ಜಿ.ಮಹಾಂತೇಶ್

ಬೆಂಗಳೂರು(ಅ.7): ಪಂಚಾಯತ್ ರಾಜ್ ಇಲಾಖೆಯಲ್ಲಿ ನಡೆದಿದ್ದ ಬೇನಾಮಿ ಬ್ಯಾಂಕ್ ಖಾತೆ ಹಗರಣ ಇತರೆ ಇಲಾಖೆಗಳಲ್ಲೂ ನಡೆದಿರಬಹುದು ಎಂಬ ಸಂಶಯ ನಿಜವಾಗಿದ್ದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲೂ ಅಂಥದ್ದೇ ಅಕ್ರಮ ಬೆಳಕಿಗೆ ಬಂದಿದೆ.

ಇಲಾಖೆಯಲ್ಲಿ ಸಂಗ್ರಹವಾದ ಶುಲ್ಕದ ಹಣವನ್ನು ಸರ್ಕಾರದ ಖಾತೆಗೆ ಜಮಾ ಮಾಡದೆ ಖಾಸಗಿ ಖಾತೆಗೆ ಜಮಾ ಮಾಡುತ್ತಿದ್ದ ಆತಂಕಕಾರಿ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಆಯುಕ್ತರು ಪ್ರಕರಣದ ತನಿಖೆ ನಡೆಸುವಂತೆ ಪ್ರಧಾನ ಮಹಾ ಲೆಕ್ಕಾಪಾಲರಿಗೆ ಪತ್ರ ಬರೆದಿದ್ದು, ಸಂಬಂಸಿದ ಎಲ್ಲ ದಾಖಲೆಗಳು ‘ಕನ್ನಡಪ್ರಭ - ಸುವರ್ಣನ್ಯೂಸ್’ಗೆ ಲಭ್ಯವಾಗಿವೆ.

ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸುಧಾರಣೆ ತರಲು ಯತ್ನಿಸಿ ಸ್ಪಂದನೆ ಸಿಗದೆ ಸರ್ಕಾರದ ಧೋರಣೆಗೆ ಬೇಸತ್ತು ರಾಜಿನಾಮೆ ನೀಡಿರುವ ಟಿ.ನರಸೀಪುರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚೆಲುವರಾಜು ಅವರು ಬೇನಾಮಿ ಖಾತೆ ವಹಿವಾಟಿನ ಸುಳಿವು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೇಲಕಾರಿಗಳಿಗೆ ದೂರು ನೀಡಿದ್ದರು. ಇಲಾಖೆ ಹಿರಿಯ ಅಕಾರಿಗಳು ಮಾತ್ರವಲ್ಲದೆ, ಆದಾಯತೆರಿಗೆ ಇಲಾಖೆ, ಲೋಕಾಯುಕ್ತ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪ್ರಧಾನಮಂತ್ರಿ ಕಚೇರಿಗೂ ಈ ಕುರಿತು ದೂರು ನೀಡಿದ್ದರು.

ಈ ದೂರು ಆಧರಿಸಿ ತನಿಖೆ ನಡೆಸಬೇಕು ಎಂದು ನೋಂದಣಿ ಮುದ್ರಾಂಕ ಇಲಾಖೆ ಆಯುಕ್ತರು ಪ್ರಧಾನ ಮಹಾಲೇಖಪಾಲರಿಗೆ 2016ರ ಸೆಪ್ಟಂಬರ್ 23ರಂದು ಪತ್ರ ಬರೆದಿದ್ದಾರೆ

ಹಾಗೆಯೇ ಮೈಸೂರು ಉಪ ನೋಂದಣಿ ಕಚೇರಿಗಳಲ್ಲಿ 2012ರ ಏಪ್ರಿಲ್ 1ರಿಂದ 2016ರ ಮಾರ್ಚ್ 31ರ ಅವವರೆಗೆ ನಡೆದಿರುವ ಹಣದ ವಹಿವಾಟು ವಿವರಗಳನ್ನು ಮರುಹೊಂದಾಣಿಕೆ ಮಾಡಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾ ನೋಂದಣಾಕಾರಿಗಳಿಗೆ ಆಯುಕ್ತರು ನಿರ್ದೇಶನ ನೀಡಿದ್ದಾರೆ. ಹಾಗೆಯೇ ಸಂಗ್ರಹವಾಗಿರುವ ಶುಲ್ಕ ಸರ್ಕಾರದ ಬೊಕ್ಕಸಕ್ಕೆ ಕ್ರಮಬದ್ಧವಾಗಿ ಜಮಾ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದೂ ಸೂಚಿಸಿದ್ದಾರೆ.

‘ಚೆಲುವರಾಜು ಅವರು ದೂರಿನಲ್ಲಿ ವಿವರಿಸಿರುವ ಅಂಶಗಳು ಸತ್ಯ ಎಂದು ಕಂಡು ಬಂದಿವೆ. ಮೈಸೂರು ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಬ್ಯಾಂಕ್‌ಗೆ ವರ್ಗಾವಣೆ ಆಗುತ್ತಿರುವ ರಾಜಸ್ವ ಮತ್ತು ಬ್ಯಾಂಕ್‌ನಿಂದ ಇಲಾಖೆಯ ಅಕೃತ ಖಾತೆಗೆ ಹಾಗೂ ಖಜಾನೆಗೆ ವರ್ಗಾಯಿಸುತ್ತಿರುವ ಕ್ರಮಗಳು ಮೇಲ್ನೋಟಕ್ಕೆ ಸಂಶಯಕ್ಕೆ ಆಸ್ಪದ ನೀಡಿದೆ’ ಎಂದು ನೋಂದಣಿ ಮುದ್ರಾಂಕ ಇಲಾಖೆ ಆಯುಕ್ತರು ಮಹಾಲೇಖಪಾಲರಿಗೆ ಬರೆದಿರುವ ಪತ್ರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ವಿವರ

ಮೈಸೂರು ಜಿಲ್ಲೆ ಮತ್ತು ನಗರದ ಉಪ ನೋಂದಣಿ ಕಚೇರಿಗಳಿಂದ ಸಂಗ್ರಹವಾದ ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳುಗಳನ್ನು ಎಸ್‌ಬಿಎಂ ಖಾತೆ(ಸಂಖ್ಯೆ 64051363048) ಮೂಲಕ ಸರ್ಕಾರಕ್ಕೆ ಜಮೆ ಮಾಡಲಾಗುತ್ತಿತ್ತು. ಇದು ಅಕೃತ ವಹಿವಾಟು ಖಾತೆಯಾಗಿತ್ತು. ಆದರೆ ಎಸ್‌ಬಿಎಂನಲ್ಲಿದ್ದ ಇನ್ನೊಂದು ಖಾತೆ(64133878874)ಯಲ್ಲೂ ಹಣ ಜಮೆ ಆಗುತ್ತಿತ್ತು. ಎಸ್‌ಬಿಎಂನ ಇದೇ ಶಾಖೆಯಲ್ಲಿ ಖಾತೆ ಹೊಂದಿರುವ ಖಾಸಗಿ ವ್ಯಕ್ತಿಗಳ ಅಕೌಂಟ್‌ಗೆ ಸರ್ಕಾರದ ಖಾತೆಗೆ ಹಣ ಜಮೆ ಮಾಡಲಾಗುತ್ತಿತ್ತು ಎಂದು ಚೆಲುವರಾಜು ಅವರು ದೂರಿನಲ್ಲಿ ಆರೋಪಿಸಿದ್ದರು.

ಕೋಟಿಗಟ್ಟಲೆ ಮೊತ್ತವನ್ನು ಸರ್ಕಾರದ ಖಾತೆಗೆ ಜಮಾ ಮಾಡಿ ಲಕ್ಷಗಳ ಲೆಕ್ಕದಲ್ಲಿ ಖಾಸಗಿ ಖಾತೆಗೆ ನಿರಂತರವಾಗಿ ಹಣ ಜಮೆ ಮಾಡಲಾಗುತ್ತಿತ್ತು. ಸರ್ಕಾರದ ಹೆಸರಿನಲ್ಲಿದ್ದ ಅಕೃತ ಚಾಲ್ತಿ ಖಾತೆ ರದ್ದಾಗಿದ್ದರೂ ಅದೇ ಖಾತೆ ಮೂಲಕ ಕೋಟ್ಯಂತರ ರು. ವಹಿವಾಟು ನಡೆಸಲಾಗಿದೆ ಎಂದು ಚೆಲುವರಾಜು ದೂರಿನಲ್ಲಿ ದಾಖಲೆಗಳ ಸಮೇತ ವಿವರಿಸಿದ್ದಾರೆ.

ಮೈಸೂರು ನಗರದಲ್ಲಿ 6 ಉಪ ಕಚೇರಿಗಳಿದ್ದು, ಪಾವತಿಯಾಗುವ ಸರ್ಕಾರಿ ಶುಲ್ಕಕ್ಕೆ 6 ಉಪ ಕಚೇರಿಗಳಿಗೂ ಒಂದೇ ಖಾತೆ(64133878874) ಇದೆ. ಈ ಖಾತೆಗೆ ಪ್ರತಿ ದಿನ ಜಮಾ ಆಗುವ ಹಣ ಚೆಕ್ ಮೂಲಕ ಪಾವತಿಯಾಗುತ್ತಿದೆ. ಇದು ಅಕೃತ ಖಾತೆಯಾಗಿದ್ದರೂ ಈ ಖಾತೆಯಲ್ಲಿ ಪಾವತಿ ಆಗುತ್ತಿರುವ ಸರ್ಕಾರದ ಹಣ ಸರ್ಕಾರದ ಬೊಕ್ಕಸಕ್ಕೆ ಪಾವತಿಯಾಗುತ್ತಿರಲಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.

ನೋಂದಣಿ, ಮುದ್ರಾಂಕ ಇಲಾಖೆ ಪರಿವೀಕ್ಷಕರ ಹೆಸರಿನಲ್ಲಿ ಇಡೀ ರಾಜ್ಯಕ್ಕೆ ಒಂದೇ ಖಾತೆ ಇದ್ದು, ಇದು ಸರ್ಕಾರದಿಂದಲೇ ಅಕೃತವಾಗಿ ಸ್ಥಗಿತಗೊಂಡಿದೆ. ಚಾಲ್ತಿಯಲ್ಲಿಲ್ಲದ ಈ ಖಾತೆಗೆ ಕೋಟ್ಯಂತರ ರೂಪಾಯಿಗಳನ್ನು ಅನಕೃತವಾಗಿ ಜಮಾ ಮಾಡಲಾಗುತ್ತಿದೆ. ಅನಕೃತ ವ್ಯಕ್ತಿಗಳು ಕೂಡ ತಮ್ಮ ಹಣವನ್ನು ಇದೇ ಖಾತೆಗೆ ಜಮಾವಣೆ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಮಾರ್ಚ್ 8,2014ರಂದು ವ್ಯಕ್ತಿಯೊಬ್ಬ 04,90,98,000 ಮತ್ತು 02, 62, 65,000 ಗಳನ್ನು ಒಂದೇ ದಿನ 2 ಬಾರಿ ಮುಂಗಡವಾಗಿ ಜಮಾ ಮಾಡಿದ್ದಾರೆ. ಅದೇ ರೀತಿ ಪಿ.ಯು.ಶಿಕ್ಷಣ ಮಂಡಳಿಯ ಮೈಸೂರು ಜಿಲ್ಲೆಯ ಉಪ ನಿರ್ದೇಶಕರ ಖಾತೆಗೆ(642738) ಮಾರ್ಚ್ 3,2014ರಂದು 01, 94,500 ಪಾವತಿ ಎಂದು ನಮೂದಿಸಲಾಗಿದೆ. ಇವರೆಡೂ ಬೋಗಸ್ ಎಂದು ಚೆಲುವರಾಜು ಅವರು ದೂರಿನಲ್ಲಿ ವಿವರಿಸಿದ್ದಾರೆ.

ಮೈಸೂರು ಸಂಸ್ಥಾನದ ಶ್ರೀಕಂಠದತ್ತ ನರಸಿಂಹರಾಜು ಒಡೆಯರ್ ಅವರ ಹೆಸರಿನಲ್ಲಿ ನಡೆದಿದ್ದ ನಕಲಿ ನೋಂದಣಿ ಪ್ರಕರಣದಲ್ಲಿಯೂ ಸರ್ಕಾರಿ ಖಾತೆಯಿಂದ ನೋಂದಣಿ ಶುಲ್ಕದ ರೂಪದಲ್ಲಿ ಹಣ ಪಾವತಿ ಆಗಿತ್ತು. ಡಿ.ಡಿ.ಮೂಲಕ( 813323) 8.50 ಲಕ್ಷವನ್ನು ಖಾಸಗಿ ಬ್ಯಾಂಕ್ ಮೂಲಕ ಜನವರಿ 25,2014ರಂದು ಸಬ್ ರಿಜಿಸ್ಟ್ರಾರ್ ಹೆಸರಿನಲ್ಲಿ ವಿತರಿಸಲಾಗಿತ್ತು. ಡಿ.ಡಿ.ಯಲ್ಲಿ ಮುಂಗಡ ದಿನಾಂಕ ಎಂದು ನಮೂದಿಸಿದ್ದು, ಈ ಹಣಕ್ಕೆ ಮಾರ್ಚ್ 14,2014ರಂದು ಡಿ.ಡಿ.ವಿತರಣೆ ಆಗಿದೆ ಎಂದು ನಮೂದಿಸಲಾಗಿದೆ. ಆದರೆ ಈ ಡಿ.ಡಿ.ಯೂ ನಕಲಿ ಎಂದು ದೂರಿನಲ್ಲಿ ಹೇಳಲಾಗಿದೆ.

ಕಳೆದ 16 ವರ್ಷಗಳಿಂದಲೂ ನೋಂದಣಿ ಮುದ್ರಾಂಕ ಇಲಾಖೆಯಲ್ಲಿ ಇಂತಹ ಗೋಲ್ಮಾಲ್ ಪ್ರಕರಣಗಳು ನಡೆಯುತ್ತಿವೆ ಎಂದು ಸಬ್ ರಿಜಿಸ್ಟ್ರಾರ್ ಚೆಲುವರಾಜು ಅವರು ದೂರಿನಲ್ಲಿ ವಿವರಿಸಿದ್ದಾರೆ. ಸರ್ಕಾರದ ಅಕೃತ ಜಮಾವಣೆಗಳನ್ನು ಸರ್ಕಾರದ ಖಾತೆಗೆ ಠೇವಣಿ ಎಂದು ಜಮಾವಣೆ ಮಾಡಬೇಕಿದ್ದ ಬ್ಯಾಂಕ್ ಅಕಾರಿಗಳೂ ಕೂಡ ಇದನ್ನು ‘ಸಾಲ‘ ಎಂದು ನಮೂದಿಸುತ್ತಿದ್ದಾರೆ. ಇದರಲ್ಲಿ ಸರ್ಕಾರದ ಖಾತೆ ದುರ್ಬಳಕೆ ಆಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸರ್ಕಾರದ ಮುಖ್ಯ ಖಾತೆಗೆ ಅನಕೃತವಾಗಿ ಹಣ ಜಮಾ ಮತ್ತು ಇದೇ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಆಗುತ್ತಿದೆ ಎನ್ನಲಾಗಿರುವ ಪ್ರಕರಣಗಳ ಕುರಿತು ಆದಾಯ ತೆರಿಗೆ ಇಲಾಖೆಯ ತನಿಖೆ ವಿಭಾಗ ತೆರಿಗೆ ವಂಚನೆ ಪ್ರಕರಣದ ಅಡಿಯಲ್ಲಿ ಈಗಾಗಲೇ ತನಿಖೆ ಕೈಗೆತ್ತಿಕೊಂಡಿದೆ ಎಂದು ತಿಳಿದು ಬಂದಿದೆ.

click me!