
ನವದೆಹಲಿ(ಜೂ.12): ಜುಲೈ 1ರಿಂದ ಜಾರಿಗೆ ಬರುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಅನೇಕ ವಸ್ತು-ಸೇವೆಗಳ ಮೇಲೆ ಹೆಚ್ಚಿನ ತೆರಿಗೆ ಹಾಕಿದ ಬಗ್ಗೆ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ 66 ಸರಕು-ಸೇವೆಗಳ ಮೇಲಿನ ತೆರಿಗೆ ಇಳಿಸಿದೆ. ಇದರ ಪರಿಣಾಮವಾಗಿ ಅಗರಬತ್ತಿ, ಇನ್ಸುಲಿನ್ ಇಂಜೆಕ್ಷನ್, ಉಪ್ಪಿನಕಾಯಿ, ಶಾಲಾ ಮಕ್ಕಳ ಚೀಲ ಅಗ್ಗವಾಗಲಿದೆ.
ಇತ್ತೀಚೆಗೆ ಸರ್ಕಾರ 1200 ಸರಕು-ಸೇವೆಗಳ ಮೇಲೆ ಶೇ.5, ಶೇ.12, ಶೇ.18 ಹಾಗೂ ಶೇ.28- ಹೀಗೆ 4 ಸ್ತರದಲ್ಲಿ ತೆರಿಗೆ ನಿಗದಿಪಡಿಸಿತ್ತು. ಆದರೆ ಹಲವು ವಸ್ತು-ಸೇವೆಗಳ ಮೇಲೆ ತೆರಿಗೆ ಅಧಿಕವಾಗಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಭಾನುವಾರ ವಿತ್ತ ಸಚಿವ ಅರುಣ್ ಜೇಟ್ಲಿ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ, ಉಪ್ಪಿನಕಾಯಿ ಸೇರಿದಂತೆ ಹಲವು ಅಡುಗೆ ವಸ್ತುಗಳು ಹಾಗೂ ಸಿನಿಮಾ ಟಿಕೆಟ್ ಸೇರಿದಂತೆ ಹಲವು ವಸ್ತು-ಸೇವೆಗಳ ಮೇಲಿನ ತೆರಿಗೆಯನ್ನು ಇಳಿಸುವ ನಿರ್ಣಯ ಕೈಗೊಳ್ಳಲಾಗಿದೆ.
‘133 ವಸ್ತುಗಳ ತೆರಿಗೆ ಇಳಿಕೆ ಬಗ್ಗೆ ಜಿಎಸ್‌ಟಿ ಮಂಡಳಿ ಪರಿಶೀಲಿಸಿತು. ಕೊನೆಗೆ 66 ವಸ್ತುಗಳ ದರ ಇಳಿಕೆಗೆ ತೀರ್ಮಾನಿಸಿತು. ಅಡುಗೆ ಸಾಮಗ್ರಿಗಳು, ಅಗರಬತ್ತಿ, ಕಂಪ್ಯೂಟರ್ ಪ್ರಿಂಟರ್, ಗೋಡಂಬಿ, ಶಾಲಾ ಚಿತ್ರಕಲಾ ಪುಸ್ತಕ ಹಾಗೂ ಶಾಲಾ ಪಾಟೀಚೀಲಗಳು ತೆರಿಗೆ ಇಳಿದ ವಸ್ತುಗಳಲ್ಲಿ ಸೇರಿವೆ' ಎಂದು ಸಚಿವ ಜೇಟ್ಲಿ ಹೇಳಿದರು. ಆದರೆ ಹೈಬ್ರಿಡ್ ಕಾರು ಸೇರಿ ಹಲ ವಸ್ತುಗಳ ಮೇಲಿನ ತೆರಿಗೆ ಇಳಿಕೆ ಬೇಡಿಕೆಯನ್ನು ಜೇಟ್ಲಿ ತಳ್ಳಿಹಾಕಿದರು. ತೆರಿಗೆ ದರ ಇಳಿಕೆಗೆ ಬಲವಾಗಿ ಒತ್ತಾಯಿಸಿದ್ದ ಪ.ಬಂಗಾಳ ವಿತ್ತ ಸಚಿವ ಅಮಿತ್ ಮಿತ್ರಾ ಅವರು ಈ ನಿರ್ಧಾರಗಳನ್ನು ಸ್ವಾಗತಿಸಿದ್ದಾರೆ.
ಮುಂದಿನ ಜಿಎಸ್‌ಟಿ ಮಂಡಳಿ ಸಭೆ ಜೂನ್ 18ಕ್ಕೆ ನಿಗದಿಯಾಗಿದ್ದು, ಲಾಟರಿ ಹಾಗೂ ಇ-ವೇ ಬಿಲ್ ಮೇಲಿನ ಜಿಎಸ್‌ಟಿ ಬಗ್ಗೆ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.