
ಬೆಂಗಳೂರು (ಸೆ. 02): ರಾಜ್ಯ ಸರ್ಕಾರ ಪಡಿತರ ಚೀಟಿದಾರ ಕುಟುಂಬದ ಸದಸ್ಯರ ಇ-ಕೆವೈಸಿ ದೃಢೀಕರಣ ಮಾಡಿಕೊಳ್ಳುವ ಪ್ರಕ್ರಿಯೆ ಸದ್ಯಕ್ಕೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದರಿಂದ ನಕಲಿ ಪಡಿತರ ಚೀಟಿಗಳನ್ನು ತಡೆಯಲು ಸಾಧ್ಯವಾಗುವುದಿಲ್ಲವಾದ್ದರಿಂದ ರಾಜ್ಯ ಸರ್ಕಾರಕ್ಕೆ ವರ್ಷಕ್ಕೆ ಸುಮಾರು 120ರಿಂದ 126 ಕೋಟಿ ರು. ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.
ನಕಲಿ ಪಡಿತರ ಚೀಟಿಗಳು ಮತ್ತು ಬೋಗಸ್ ಫಲಾನುಭವಿಗಳ ಪತ್ತೆಗಾಗಿ ಇ-ಕೆವೈಸಿ ದೃಢೀಕರಣವನ್ನು ಕಡ್ಡಾಯವಾಗಿ ಮಾಡಿಸುವಂತೆ ಆಹಾರ ಇಲಾಖೆ ಆದೇಶ ಹೊರಡಿಸಿತ್ತು. ಜುಲೈ 21ರೊಳಗೆ ಇ-ಕೆವೈಸಿ ದೃಢೀಕರಣ ಮಾಡಿಸಿಕೊಳ್ಳದಿದ್ದರೆ ಪಡಿತರ ನೀಡುವುದನ್ನೇ ನಿಲ್ಲಿಸುವುದಾಗಿ ಇಲಾಖೆ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.
ಆದರೆ, ಇ-ಕೆವೈಸಿ ದೃಢೀಕರಣ ಮತ್ತು ಪಡಿತರ ವಿತರಣೆಯನ್ನು ಒಂದೇ ಸಮಯದಲ್ಲಿ ಮಾಡುತ್ತಿದ್ದ ಕಾರಣ ತಾಂತ್ರಿಕ ದೋಷ (ಸರ್ವರ್ ಡೌನ್) ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ದಿಢೀರನೆ ಜೂ.20ರಂದು ಆದೇಶ ಹೊರಡಿಸಿ ಪಡಿತರ ಚೀಟಿದಾರ ಕುಟುಂಬದ ಸದಸ್ಯರು ಇ-ಕೆವೈಸಿ ಮಾಡಿಕೊಳ್ಳುವುದನ್ನು ಜುಲೈ 15ರವರೆಗೆ ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ತಿಳಿಸಿತ್ತು.
ನಂತರ ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಇ-ಕೆವೈಸಿ ಆರಂಭಿಸುವುದಾಗಿ ಹೇಳಿದ್ದ ಸರ್ಕಾರ ಇಂದಿಗೂ ಇ-ಕೆವೈಸಿ ದೃಢೀಕರಣ ಪ್ರಕ್ರಿಯೆಯನ್ನು ಪುನಾರಂಭಿಸಿಲ್ಲ. ಹೀಗಾಗಿ ಬೋಗಸ್ ಫಲಾನುಭವಿಗಳನ್ನು ಪತ್ತೆಹಚ್ಚಲು ಮತ್ತು ಸೋರಿಕೆ ತಡೆಗಟ್ಟಲು ಸಾಧ್ಯವಾಗಿಲ್ಲ.
ಸುಮಾರು 5 ಲಕ್ಷ ನಕಲಿ ಪಡಿತರ ಚೀಟಿ:
ಆಹಾರ ಇಲಾಖೆಯ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ನಕಲಿ ಪಡಿತರ ಚೀಟಿಗಳು ಚಾಲ್ತಿಯಲ್ಲಿದ್ದು, ಇದರಿಂದ ಸುಮಾರು 150-200 ಕೋಟಿ ರು. ಮೌಲ್ಯದ ಪಡಿತರ ಸೋರಿಕೆಯಾಗುತ್ತಿದೆ. ನಕಲಿ ಪಡಿತರ ಚೀಟಿ ತಡೆಯುವ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳ ಹಿಂದೆ ಪಡಿತರ ಚೀಟಿ ಪರಿಶೀಲನೆ ಕಾರ್ಯವನ್ನು ಆಹಾರ ಇಲಾಖೆ ಕೈಗೊಂಡಿತ್ತು. ಆ ಬಳಿಕ ಪಡಿತರ ಚೀಟಿಗೆ ಆಧಾರ್ ಸಂಖ್ಯೆ ಕಡ್ಡಾಯ ಜೋಡಣೆ ನಿಯಮ ಜಾರಿಗೆ ತರಲಾಗಿತ್ತು.
ಸ್ಥಳೀಯ ಬಯೋಮೆಟ್ರಿಕ್ ಕೇಂದ್ರಗಳಲ್ಲಿ ಆಧಾರ್ ಕಾರ್ಡ್‌ಗಳನ್ನು ಲಿಂಕೇಜ್ ಮಾಡಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಲಕ್ಷಾಂತರ ಬೋಗಸ್ ಕಾರ್ಡ್‌ಗಳು ಪತ್ತೆಯಾಗಿದ್ದವು. ಆದರೆ ನಾಲ್ಕು ವರ್ಷದಿಂದ ಕಾರ್ಡ್ ಪರಿಶೀಲನೆ ನಡೆದಿರಲಿಲ್ಲ. ಇ-ಕೆವೈಸಿ ದೃಢೀಕರಣದ ಮೂಲಕ ಆಧಾರ್ ಕಾರ್ಡ್ ಪರಿಶೀಲನೆ ನಡೆಸಲು ಹಿಂದಿನ ಮೈತ್ರಿ ಸರ್ಕಾರ ತೀರ್ಮಾನಿಸಿತ್ತು.
4.87 ಕೋಟಿ ಫಲಾನುಭವಿಗಳು:
ಪ್ರಸ್ತುತ ರಾಜ್ಯದಲ್ಲಿ 7,69,585 ಅಂತ್ಯೋದಯ, 1,16,84,911 ಬಿಪಿಎಲ… ಮತ್ತು 19,41,692 ಎಪಿಎಲ… ಸೇರಿ ಒಟ್ಟು 1,43,96,188 ಕಾರ್ಡ್‌ಗಳಿದ್ದು, 4,87,33,221 ಜನರು ಫಲಾನುಭವಿಗಳಾಗಿದ್ದಾರೆ. ಇದರಲ್ಲಿ ಈ ನಾಲ್ಕು ವರ್ಷಗಳಲ್ಲಿ ವೃದ್ಧರು ಸೇರಿದಂತೆ ಹಲವರು ಸಾವನ್ನಪ್ಪಿದ್ದು, ಸಾವಿರಾರು ಮಂದಿ ಊರುಗಳನ್ನು ತೊರೆದಿದ್ದಾರೆ.
ಅನೇಕರು ವಿವಾಹವಾಗಿ ಬೇರೆ ಕಡೆಗಳಿಗೆ ಹೋಗಿದ್ದಾರೆ. ಹೀಗೆ ಸುಮಾರು 5 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಪಡಿತರ ಪಡೆಯುತ್ತಿಲ್ಲ. ಫಲಾನುಭವಿಗಳ ಕುಟುಂಬದವರು ಅವರ ಹೆಸರಿನಲ್ಲಿ ಪಡಿತರ ಪಡೆಯುತ್ತಿದ್ದು, ಇಲಾಖೆಗೆ ನಷ್ಟವುಂಟಾಗುತ್ತಿದೆ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಹಾರ ಸುರಕ್ಷತೆ ಕಾಯ್ದೆ-2013 (ಎನ್‌ಎಫ್‌ಎಸ್‌ಎ) ಪ್ರಕಾರ ಹಾಗೂ ಸುಪ್ರೀಂಕೋರ್ಟ್ ಆದೇಶದನ್ವಯ ಪಡಿತರ ಕಾರ್ಡ್‌ನಲ್ಲಿರುವ ಪ್ರತಿಯೊಬ್ಬರು ಆಧಾರ್ ದೃಢೀಕರಣ (ಇ-ಕೆವೈಸಿ) ಮಾಡಿಸಿಕೊಳ್ಳಬೇಕು ಎಂಬ ನಿಯಮ ತರಲಾಗಿತ್ತು. ಕಳೆದ ಮೇ ತಿಂಗಳ ಅವಧಿಯಲ್ಲಿ ಎಲ್ಲ ಪಡಿತರ ಚೀಟಿದಾರರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಆಹಾರ ಇಲಾಖೆ ಆದೇಶ ಹೊರಡಿಸಿತ್ತು.
ನಷ್ಟದ ಲೆಕ್ಕಾಚಾರ ಹೇಗೆ?
ಪ್ರತಿ ಫಲಾನುಭವಿಗೆ ನೀಡುವ 7 ಕೆ.ಜಿ. ಅಕ್ಕಿಯನ್ನು 5 ಲಕ್ಷ ಫಲಾನುಭವಿಗಳಿಂದ ಗುಣಿಸಿದರೆ 3500 ಟನ್ ಆಗುತ್ತದೆ. 3500 ಟನ್‌ಗೆ ಪ್ರತಿ ಕೆ.ಜಿ.ಗೆ 30 ರು.ನಂತೆ ಲೆಕ್ಕ ಹಾಕಿದರೆ 10.5 ಕೋಟಿ ರು. ಆಗಲಿದೆ. ಈ ಮೊತ್ತವನ್ನು ಪ್ರತಿ ತಿಂಗಳಂತೆ ಒಂದು ವರ್ಷಕ್ಕೆ ಲೆಕ್ಕ ಹಾಕಿದರೆ ಬರೋಬ್ಬರಿ 126 ಕೋಟಿ ರು. ಆಗಲಿದೆ. ಅಂದರೆ ಸರ್ಕಾರಕ್ಕೆ ವರ್ಷಕ್ಕೆ 126 ಕೋಟಿ ರು. ಮತ್ತು ತಿಂಗಳಿಗೆ 3500 ಟನ್ ಪಡಿತರ ಆಹಾರ ನಷ್ಟವಾಗಲಿದೆ.
ಈಗಾಗಲೇ ಇ-ಕೆವೈಸಿ ದೃಢೀಕರಣ ಪುನಾರಂಭವಾಗಬೇಕಿತ್ತು. ಆದರೆ, ಸರ್ಕಾರ ಬದಲಾಗಿದೆ. ಆಹಾರ ಇಲಾಖೆಗೆ ಸಚಿವರ ನೇಮಕವಾಗಿಲ್ಲ. ಈ ಹಿಂದೆ ಇಲಾಖೆಯಲ್ಲಿ ಆಯುಕ್ತರಾಗಿದ್ದ ಟಿ.ಎಚ್.ಎಂ. ಕುಮಾರ್ ಅವರು ವರ್ಗಾವಣೆಯಾಗಿ ಆ ಸ್ಥಾನಕ್ಕೆ ಬೇರೆ ಅಧಿಕಾರಿಗಳು ಬಂದಿದ್ದಾರೆ. ಈ ಹಿಂದಿನ ಯೋಜನೆ ಜಾರಿಗೆ ಇನ್ನೂ ಸ್ವಲ್ಪ ಸಮಯ ಹಿಡಿಯಬಹುದು.
- ಟಿ.ಕೃಷ್ಣಪ್ಪ, ರಾಜ್ಯಾಧ್ಯಕ್ಷ, ಸರ್ಕಾರಿ ಪಡಿತರ ವಿತರಕರ ಸಂಘ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.