
ದಾವಣಗೆರೆ(ಜು.17): ಕಳೆದ ನಾಲ್ಕು ವರ್ಷಗಳಿಂದ ಸಿಎಂ ಸಿದ್ದರಾಮಯ್ಯನವರ ಸರ್ಕಾರ, ರಾಜ್ಯದ ಜನತೆಗೆ ನಾನಾ ರೀತಿಯ ಭಾಗ್ಯಗಳನ್ನು ನೀಡಿದೆ. ಕ್ಷೀರಭಾಗ್ಯ, ಶಾದಿ ಭಾಗ್ಯ, ಅನ್ನಭಾಗ್ಯ ಹೀಗೇ ನಾನಾ ಭಾಗ್ಯಗಳನ್ನ ಜನತೆ ಅನುಭವಿಸುತ್ತಿದ್ದಾರೆ. ಆದರೆ ಅಕ್ರಮ ಎನ್ನುವ ಮಹಾಮಾರಿ ಈ ಭಾಗ್ಯಗಳಿಗೂ ಆವರಿಸಿದೆ. ಬಡ ಜನರಿಗೆ ಸರ್ಕಾರ ಅನ್ನಭಾಗ್ಯದ ಮೂಲಕ ನೀಡ್ತಿರೋ ಆಹಾರ ಪದಾರ್ಥಗಳು ಕಳಪೆಯಿಂದ ಕೂಡಿವೆ ಎನ್ನುವ ಅರೋಪ ಸಂಚಲನ ಸೃಷ್ಟಿಸಿದೆ.
ಇದು ಸರ್ಕಾರ ಪಡಿತರದಾರರಿಗೆ ನೀಡುವ ತಾಳೆ ಎಣ್ಣೆ. ಅನ್ನಭಾಗ್ಯದ ಮೂಲಕ ಜನರ ಹಸಿವನ್ನು ಮುಕ್ತಗೊಳಿಸಲು ಮುಂದಾಗಿ ಅಕ್ಕಿ, ಸಕ್ಕರೆ, ಉಪ್ಪು, ಬೇಳೆ ಕಾಳು, ತಾಳೆ ಎಣ್ಣೆಯನ್ನು ನೀಡುತ್ತಿದೆ. ಆದರೆ ಅನ್ನಭಾಗ್ಯ ಯೋಜನೆಯಲ್ಲಿ ಕಳೆಪೆ ಗುಣಮಟ್ಟದ ಉಪ್ಪು, ಬೇಳೆ, ಅಕ್ಕಿಯನ್ನು ನೀಡಲಾಗುತ್ತಿದೆ ಎನ್ನುವುದು ಪಬ್ಲಿಕ್ಸ್ ಆರೋಪ. ಇದೀಗ ಈ ಸಾಲಿಗೆ ತಾಳೆ ಎಣ್ಣೆ ಕೂಡ ಸೇರ್ಪಡೆಯಾಗಿದೆ.
ತಾಳೆ ಎಣ್ಣೆ ಬಳಕೆ ಅವಧಿ ಕೇವಲ 4 ತಿಂಗಳು ಅಂತ ಪಾಕೆಟ್ ಮೇಲೆಯೇ ಮುದ್ರಣವಾಗಿದೆ. ಆದರೆ ಈ ಎಣ್ಣೆ ಜನತೆ ಕೈ ಸೇರುತ್ತಿರುವುದು ಎಕ್ಸ್ಪೈರಿ ಡೇಟ್ ಮುಗಿದ ಬಳಿಕ. ಇದಕ್ಕೆ ಸಾಕ್ಷಿಯಾಗಿದ್ದು ದಾವಣಗೆರೆಯ ಬಂಬೂಬಜಾರ್ ನ್ಯಾಯಬೆಲೆ ಅಂಗಡಿ. ಜುಲೈ ಬಂದರು ಅವಧಿ ಮುಗಿದ ಎಣ್ಣೆಯನ್ನು ಜನತೆಗೆ ನೀಡುತ್ತಿದ್ದಾರೆ. ಇನ್ನೂ ಈ ಬಗ್ಗೆ ನ್ಯಾಯಬೆಲೆ ಅಂಗಡಿಯವರನ್ನು ಕೇಳಿದರೆ, ಸರ್ಕಾರದಿಂದ ಸರಬರಾಜಾಗುವುದೇ ಅದು, ನಮಗೆ ಯಾವ ವಸ್ತುಗಳು ಬಂದಿರುತ್ತವೋ, ಆ ವಸ್ತುಗಳನ್ನೇ ನಾವು ಕೊಡಲು ಸಾಧ್ಯ ಅಂತ ಹೇಳಿದ್ದಾರೆ.
ಸರ್ಕಾರದ ಅಧ್ವಾನಕ್ಕೆ ಪುಷ್ಟಿ ನೀಡುವಂತೆ ಶಿವಮೊಗ್ಗ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು, ಜಿಲ್ಲೆಯ ಎಲ್ಲಾ ಆಹಾರ ನಿರೀಕ್ಷಕರಿಗೆ ಪತ್ರ ಬರೆದಿದ್ದಾರೆ. ಜುಲೈ ತಿಂಗಳಲ್ಲಿ ವಿತರಿಸಲಾಗಿರುವ ತಾಳೆ ಎಣ್ಣೆ ಕಳಪೆಯಾಗಿದೆ ಅನ್ನೋ ದೂರಿನ ಮೇರೆಗೆ ಬೆಂಗಳೂರಿನ ಸ್ಟೇಟ್ ಫೂಡ್ ಲೆಬೋರೆಟ್ರಿಗೆ ಕಳುಹಿಸಿದ್ದಾಗಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಬಡ ಜನರಿಗೆ ಅನುಕೂಲವಾಗಲಿ ಅಂತಾ ಅನ್ನಭಾಗ್ಯ ಮಾಡಿದ್ದರು, ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳು ಈ ಸೌಲಭ್ಯದ ಮೌಲ್ಯವನ್ನ ಕಡಿಮೆ ಮಾಡಿವೆ, ಅಷ್ಟೇ ಅಲ್ಲದೇ ಸರ್ಕಾರದ ಯೋಜನೆಗಳ ಮೇಲೆ ಅನುಮಾನ ಮೂಡುವಂತೆ ಮಾಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.