ಕೊಡಗು, ಪುತ್ತೂರು ಬಿಟ್ಟರೆ ಬಹುತೇಕ ಎಲ್ಲಾ ನಗರಗಳಲ್ಲೂ ನಗರ ಸಾರಿಗೆ: ರಾಮಲಿಂಗಾ ರೆಡ್ಡಿ

Published : Aug 03, 2017, 10:16 PM ISTUpdated : Apr 11, 2018, 12:40 PM IST
ಕೊಡಗು, ಪುತ್ತೂರು ಬಿಟ್ಟರೆ ಬಹುತೇಕ ಎಲ್ಲಾ ನಗರಗಳಲ್ಲೂ ನಗರ ಸಾರಿಗೆ: ರಾಮಲಿಂಗಾ ರೆಡ್ಡಿ

ಸಾರಾಂಶ

ಹೆಚ್ಚುತ್ತಿರುವ ಬಸ್ಸುಗಳ ಬೇಡಿಕೆ ಆಧರಿಸಿ ₹1030 ಕೋಟಿ ವೆಚ್ಚದಲ್ಲಿ 5172  ಬಸ್ಸುಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರು (ಆ.03): ಹೆಚ್ಚುತ್ತಿರುವ ಬಸ್ಸುಗಳ ಬೇಡಿಕೆ ಆಧರಿಸಿ ₹1030 ಕೋಟಿ ವೆಚ್ಚದಲ್ಲಿ 5172  ಬಸ್ಸುಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಬಜೆಟ್‌ನಲ್ಲಿ 3000 ಬಸ್ಸುಗಳನ್ನು ಒದಗಿಸುವುದಾಗಿ ಘೋಷಿಸಿತ್ತು. ಅದರಂತೆ ಈಗ 1500 ಬಸ್ಸುಗಳನ್ನು ಒದಗಿಸುತ್ತಿದೆ. ಹಾಗೆಯೇ ವಿವಿಧ ವಿಭಾಗಗಳಿಗೆ ಈ ಹಿಂದೆಯೇ ನಿರ್ಧರಿಸಿದಂತೆ ಈಶಾನ್ಯ ನಿಗಮಕ್ಕೆ 1250 ಬಸ್ಸುಗಳು, ವಾಯುವ್ಯ ಸಾರಿಗೆ ನಿಗಮಕ್ಕೆ 498  ಬಸ್ಸುಗಳು ಹಾಗೂ ಬಿಎಂಟಿಸಿಗೆ 1092 ನಂತರದಲ್ಲಿ 832 ಬಸ್ಸುಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದ್ದು, ಡಿಸೆಂಬರ್ ವೇಳೆಗೆ ಬಸ್ಸುಗಳು ರಸ್ತೆಗಿಳಿಯಲಿವೆ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ಸಂಚಾರ ವ್ಯಾಪ್ತಿ ಹೆಚ್ಚಾಗಿದೆ. ಅಂದರೆ ಬೆಂಗಳೂರಿನಲ್ಲಿ 20 ಕಿ.ಮೀ. ವ್ಯಾಪ್ತಿಗೆ ಮಾತ್ರ ಸೀಮಿತವಾಗಿದ್ದ ನಗರ ಸಾರಿಗೆ ಈಗ 25 ಕಿ.ಮೀ. ವರೆಗೂ ವಿಸ್ತರಣೆಯಾಗಿದೆ. ಇದೇ ರೀತಿ ಇತರ ನಗರಗಳಲ್ಲಿ 15 ಕಿ.ಮೀ. ವರೆಗೂ ವಿಸ್ತರಣೆಯಾಗಿದೆ. ಇದರಿಂದ ಸಾರಿಗೆ ಸೇವೆ ವಲಯ ವಿಸ್ತರಣೆಯಾಗಿ ಬಸ್ಸುಗಳ ಬೇಡಿಕೆ ಹೆಚ್ಚಾಗಿದೆ ಎಂದು ಸಚಿವರು ವಿವರಿಸಿದರು.

ರಾಜ್ಯದಲ್ಲಿ 36 ನಗರ ಕೇಂದ್ರಗಳಲ್ಲಿ ನಗರ ಬಸ್ ಸೇವೆ ಆರಂಭಿಸಲಾಗಿದೆ. ರಾಜ್ಯದಲ್ಲಿ ಕೊಡಗು ಮತ್ತು ಪುತ್ತೂರು ಹೊರತುಪಡಿಸಿದರೆ ಬಹುತೇಕ ಎಲ್ಲಾ ನಗರಗಳಲ್ಲೂ ನಗರ ಸೇವೆ ಆರಂಭವಾಗಿದೆ. ಹಾಗೆಯೇ ಎಲೆಕ್ಟ್ರಿಕ್ ಬಸ್ಸುಗಳ ಖರೀದಿಗೆ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಬೇಕಿದೆ. ಈಗಾಗಲೇ ೧೫೦ ಬಸ್ಸುಗಳ ಖರೀದಿಗೆ ಪ್ರಸ್ತಾಪ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಮಾರ್ಗಸೂಚಿ ನಿರೀಕ್ಷಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ 1.15 ಕೋಟಿ ಪ್ರಯಾಣಿಕರು ನಿಗಮಗಳ ಬಸ್ಸುಗಳನ್ನು ಬಳಸುತ್ತಿದ್ದು, 52 ಲಕ್ಷ ಮಂದಿ ಬಿಎಂಟಿಸಿ ಬಳಸುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ 4 ವರ್ಷಗಳಲ್ಲಿ 76 ಹೊಸ ನಿಲ್ದಾಣಗಳು, 40 ಡಿಪೋಗಳು, ಬೆಂಗಳೂರಿನಲ್ಲಿ 8 ಡಿಪೋಗಳನ್ನು ಬೆಂಗಳೂರಿನಲ್ಲೇ ನಿರ್ಮಿಸಲಾಗುತ್ತಿದೆ. ೪ವರ್ಷಗಳಲ್ಲಿ 24,471 ಮಂದಿಗೆ ಉದ್ಯೋಗ ಒದಗಿಸಲಾಗಿದೆ. ಈತನಕ ನಿಗಮಗಳಿಗೆ 205  ಪ್ರಶಸ್ತಿಗಳ ಲಭಿಸಿವೆ ಎಂದು ರಾಮಲಿಂಗಾ ರೆಡ್ಡಿ ವಿವರಿಸಿದರು.

ಅಂತರ ನಿಗಮ ವರ್ಗಾವಣೆ: 

ಅಂತರ ನಿಗಮ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದ 700 ಮಂದಿಗೆ ಸೂಕ್ತ ದಾಖಲೆ ಸಲ್ಲಿಸದೆ ತಿರಸ್ಕೃತರಾಗಿದ್ದರು. ಅವರಿಗೆ ದಾಖಲೆ ಸಲ್ಲಿಸಲು ಮತ್ತೊಂದು ಅವಕಾಶ ಕಲ್ಪಿಸಲಾಗಿದೆ. ವರ್ಗಾವಣೆ ಸೌಲಭ್ಯ ಪಡೆಯುವಂತೆ ೭೦೦ ಮಂದಿ ಅರ್ಜಿದಾರರಿಗೆ ಈಗಾಗಲೇ ಮಾಹಿತಿಗಳನ್ನು ರವಾನಿಸಲಾಗಿದ್ದು, ಅವರು ದಾಖಲೆ ಸಲ್ಲಿಸಿದ ನಂತರ ಅವರ ವರ್ಗಾವಣೆ ಮಾಡಿ ಆದೇಶ ರವಾನಿಸಲಾಗುವುದು ಎಂದರು.

ಈ ಹಿಂದೆ ನರ್ಮ್ ಯೋಜನೆಯಲ್ಲಿ ಶೇ.೮೦ರ ವರೆಗೂ ಸಬ್ಸಿಡಿ ನೀಡುತ್ತಿತ್ತು. ಇದರಿಂದ ನಿಗಮಗಳು ಬಸ್ಸುಗಳನ್ನು ಖರೀದಿಸಿ ಸಾರಿಗೆ ಸೌಲಭ್ಯಗಳನ್ನು ಒದಗಿಸಬಹುದಿತ್ತು. ಆದರೆ ಈಗ ನರ್ಮ್ ಯೋಜನೆಯನ್ನೇ ಅಮೃತ್ ಎಂದು ಬದಲಿಸಿ ಮೂಲಸೌಕರ್ಯಗಳಿಗೆ ಮಾತ್ರ ನೆರವು ನೀಡಲಾಗುತ್ತದೆ. ಇದರಲ್ಲಿ ಹಣ ಉಳಿದರೆ ಮಾತ್ರ ಬಸ್ಸುಗಳ ಖರೀದಿಗೆ ಸಾರಿಗೆ ಸೌಲಭ್ಯಕ್ಕೆ ನೀಡಲಾಗುತ್ತದೆ. ಆದರೆ ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳಿಂದ ಸಾರಿಗೆ ಸೌಲಭ್ಯಕ್ಕೆ ಅದರಲ್ಲೂ ಬಸ್ಸುಗಳ ಖರೀದಿಗೆ ಒಂದು ಪೈಸೆಯನ್ನೂ ನೀಡಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿಗಳನ್ನು ಸಲ್ಲಿಸಲಾಗಿದೆ. ಆದರೂ ಪ್ರಯೋಜನವಿಲ್ಲ ಎಂದು ಸಚಿವರು ತಿಳಿಸಿದರು.

ಮೆಟ್ರೋದಿಂದ ಬಿಎಂಟಿಸಿ  ಆದಾಯ ಖೋತ

ಮೆಟ್ರೋ ಸಂಚಾರ ಆರಂಭವಾದಾಗಿನಿಂದ ನಿತ್ಯ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುವವರ ಸಂಖ್ಯೆ ಸುಮಾರು 2.30  ಲಕ್ಷ ಕಡಿಮೆಯಾಗಿದ್ದು, ದಿನಕ್ಕೆ ₹5 ಲಕ್ಷ ಆದಾಯ ಕೊರತೆ ಉಂಟಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಬಿಎಂಟಿಸಿಯಲ್ಲಿ ದಿನಕ್ಕೆ ₹4.50  ಕೋಟಿ ಆದಾಯವಿದೆ. ಇದರಲ್ಲಿ ಸರಾಸರಿ ಶೇ.2 ರಿಂದ ಶೇ.೩ರಷ್ಟು ಆದಾಯ ಕೊರತೆ ಬೀಳುತ್ತಿದೆ. ಇದು ಮುಂದಿನ ದಿನಗಳಲ್ಲಿ ಸರಿಯಾಗುತ್ತದೆ ಎಂದರು. ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಬಸ್‌ಗಳನ್ನು ಹೆಚ್ಚಿಸಲಾಗುತ್ತದೆ. ಇದರಿಂದಲೂ ಪ್ರಯಾಣಿಕರು ಹೆಚ್ಚಾಗಿ ಆದಾಯ ಕೊರತೆ ಕಡಿಮೆಯಾಗುತ್ತದೆ. ಎಲ್ಲೆಲ್ಲಿ ಬಸ್ಸುಗಳು ಖಾಲಿ ಹೋಗುವುದೋ ಅಲ್ಲಿ ಬಸ್ಸುಗಳನ್ನು ಕಡಿಮೆ ಮಾಡಿ ಅಗತ್ಯ ಇರುವ ಕಡೆಗೆ ನಿಯೋಜಿಸಲಾಗುತ್ತದೆ. ಇದರಿಂದಲೂ ಕೊರತೆ ನೀಗಬಹುದು ಎಂದು ಅವರು ಪ್ರತಿಕ್ರಿಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಲಕ್ಷ್ಮೀಯ 5 ಸಾವಿರ ಕೋಟಿ ಮಿಸ್‌ ಆಗಿದ್ದು ಹೇಗೆ?: ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ
ಕ್ರೀಡಾ ಕ್ಷೇತ್ರದಲ್ಲಿದ್ದ ಪಕ್ಷಪಾತಕ್ಕೆ ಹಿಂದೆಯೇ ಕಡಿವಾಣ : ಪ್ರಧಾನಿ ನರೇಂದ್ರ ಮೋದಿ