
ಬೆಂಗಳೂರು (ಫೆ.02): ಕನ್ನಡ ಚಿತ್ರೋದ್ಯಮ ಅಭಿವೃದ್ಧಿಗೆ ಬೇಕಿರುವ ಎಲ್ಲ ರೀತಿಯ ಸಹಾಯ ಮಾಡಲು ಸರ್ಕಾರ ಸಿದ್ಧವಿದೆ. ಅದಕ್ಕೆ ತಕ್ಕಂತೆ ಕನ್ನಡ ಚಿತ್ರರಂಗದಿಂದಲೂ ಸದಭಿರುಚಿ ಚಿತ್ರಗಳು ಮೂಡಿಬಂದಾಗ ಮಾತ್ರ ಚಿತ್ರೋದ್ಯಮ ಬೆಳೆಯುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
ವಿಧಾನಸೌಧದ ಮುಂಭಾಗ ಗುರುವಾರ 9 ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೊದಲಿನಿಂದಲೂ ಸರ್ಕಾರ ಚಿತ್ರರಂಗಕ್ಕೆ ಆರ್ಥಿಕವಾಗಿ ಸಹಾಯ ಮಾಡುತ್ತಿದೆ. ಮೊದಲು 75,100 ಚಿತ್ರಗಳಿಗೆ ನೀಡುತ್ತಿದ್ದ ಸಬ್ಸಿಡಿ ಈಗ 125 ಚಿತ್ರಗಳಿಗೆ ಏರಿಕೆ ಮಾಡಿದೆ ಎಂಬುದು ಮುಖ್ಯವಲ್ಲ. ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಹಿಂದಿನ ಸಿನಿಮಾಗಳಲ್ಲಿ ಕಥಾವಸ್ತು, ಬೋಧನೆ, ಮನರಂಜನೆ ಎಲ್ಲಿಯೂ ಇತ್ತು. ಆದರೆ, ಇಂದಿನ ಸಿನಿಮಾಗಳಲ್ಲಿ ಮನರಂಜನೆ ಎಂದು ತಿಳಿದಿರುವ ದ್ವಂದ್ವ ಅರ್ಥಗಳು, ಜನರಲ್ಲಿ ನೋವುಂಟು ಮಾಡುತ್ತಿವೆ. ಕಳೆದ ವರ್ಷ 180 ಸಿನಿಮಾಗಳು ಬಿಡುಗಡೆಯಾಗಿವೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಗುಣಮಟ್ಟದ ಸಿನಿಮಾಗಳು ಎಷ್ಟಿವೆ ಎಂಬುದನ್ನು ವಾಣಿಜ್ಯ ಮಂಡಳಿಯೇ ನಿರ್ಧರಿಸಲಿ ಎಂದರು.
82 ವರ್ಷ ತುಂಬಿರುವ ಕನ್ನಡ ಚಿತ್ರರಂಗ 100 ವರ್ಷ ತುಂಬುವಷ್ಟರಲ್ಲಿ ಕನ್ನಡದ ವಾತಾವರಣ ನಿರ್ಮಿಸಬೇಕು. ಅದೇ ರೀತಿ ಕನ್ನಡ ಚಿತ್ರಗಳನ್ನು ನೋಡಬೇಕೆಂಬ ಅಭಿಮಾನ ಕನ್ನಡಿಗರಲ್ಲಿ ಮೂಡಬೇಕು. ಎಲ್ಲ ಭಾಷೆಯ ಸಿನಿಮಾಗಳನ್ನು ನೋಡಿ, ಕನ್ನಡ ಚಿತ್ರಗಳನ್ನು ಕಡ್ಡಾಯವಾಗಿ ನೋಡಿ ಎಂದ ಮುಖ್ಯಮಂತ್ರಿಗಳು, ವಾಣಿಜ್ಯ ಮಂಡಳಿ ಬೇಡಿಕೆಗಳನ್ನು ಈಡೇರಿಸಲು ಸದ್ಯದಲ್ಲಿಯೇ ಸಭೆ ಕರೆದು ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ನಟ ಪುನೀತ್ ರಾಜಕುಮಾರ್ ಮಾತನಾಡಿ, ಹಾಲಿವುಡ್, ಬಾಲಿವುಡ್, ತಮಿಳು, ತೆಲುಗು ಚಿತ್ರಗಳನ್ನು ನೋಡುವ ಚಿತ್ರ ಪ್ರೇಮಿಗಳಿಗೆ ಚಿತ್ರೋತ್ಸವದಲ್ಲಿ ಪ್ರಪಂಚದ ಬೇರೆ ಬೇರೆ ಭಾಷೆಯ ವಿಭಿನ್ನ ಚಿತ್ರಗಳನ್ನು ನೋಡಲು ಸಿಕ್ಕಿರುವ ಅವಕಾಶವನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ. ಚಿತ್ರೋದ್ಯಮದಲ್ಲೇ ಇರುವ ನಿರ್ಮಾಪಕ, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಬೇರೆ ದೇಶಗಳ ಸಿನಿಮಾಗಳನ್ನು ಕಡ್ಡಾಯ ನೋಡಬೇಕಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು, ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳಿಗೆ ದುಬಾರಿ ಟಿಕೆಟ್ ದರ ನಿಗದಿ ಮಾಡಿದ್ದಾರೆ. ಬೆಳಗ್ಗೆ ಇದ್ದ ಸಿನಿಮಾಗಳು ಮಧ್ಯಾಹ್ನಕ್ಕೆ ಪ್ರದರ್ಶನವಾಗುವುದಿಲ್ಲ. ಕನ್ನಡ ವಿರೋಧಿ ಧೋರಣೆಯನ್ನು ಸರ್ಕಾರ ನಿಯಂತ್ರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ಉಮಾಶ್ರೀ, ಸಭಾಪತಿ ಡಿ.ಎಚ್. ಶಂಕರಮೂರ್ತಿ, ವಾರ್ತಾ ಇಲಾಖೆ ಅಧಿಕಾರಿಗಳಾದ ಲಕ್ಷ್ಮೀ ನಾರಾಯಣ್, ವಿಶುಕುಮಾರ್, ನಟ ರಮೇಶ್ ಅರವಿಂದ್, ನಟಿ ಸುಹಾಸಿನಿ, ನಿರ್ಮಾಪಕರಾದ ಸಾ.ರಾ. ಗೋವಿಂದ್, ಮುನಿರತ್ನ ಹಾಗೂ ಚಿತ್ರರಂಗದ ಅನೇಕರು ಪಾಲ್ಗೊಂಡಿದ್ದರು.
ತಿಥಿ ಚಿತ್ರಕ್ಕೆ ಸಿಎಂ ಪ್ರಶಂಸೆ
ಕಳೆದ ವರ್ಷ ಬಿಡುಗಡೆಯಾದ ರಾಮರೆಡ್ಡಿ ನಿರ್ದೇಶನದ ತಿಥಿ ಚಿತ್ರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಂಸೆ ವ್ಯಕ್ತಪಡಿಸಿದರು. ಬಹಳ ಕಡಿಮೆ ಖರ್ಚಿನಲ್ಲಿ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ಸಿನಿಮಾ ಮಾಡಿದ್ದಾರೆ. ಬಹಳ ವಿಭಿನ್ನ, ವಿಶೇಷವಾದ ಸದಭಿರುಚಿಯ ಚಿತ್ರವಾಗಿದೆ. ಇಂತಹ ಮತ್ತಷ್ಟು ಕನ್ನಡ ಚಿತ್ರಗಳು ಮೂಡಿಬರಬೇಕು. ಮೊದಲು ರಾಜಕುಮಾರ್, ಕಲ್ಯಾಣಕುಮಾರ್, ವಿಷ್ಣುವರ್ಧನ್ ಸಿನಿಮಾಗಳನ್ನು ನೋಡುತ್ತಿದ್ದೆ. ಬಂಗಾರದ ಮನುಷ್ಯ ಚಿತ್ರವನ್ನು ೫ ಬಾರಿ ನೋಡಿದ್ದೆ. ಇತ್ತೀಚಿನ ದಿನಗಳಲ್ಲಿ ಸಮಯದ ಅಭಾವದಿಂದ ಸಿನಿಮಾ ನೋಡಲು ಸಾಧ್ಯವಾಗುತ್ತಿಲ್ಲ. ಇದರ ನಡುವೆಯೂ ಇತ್ತೀಚೆಗಷ್ಟೇ ನಿಧನರಾದ ಮಾಜಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರು ತಿಥಿ ಚಿತ್ರವನ್ನು ತೋರಿಸಿದ್ದರು ಎಂದು ನೆನೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.