
ಬೆಂಗಳೂರು : ಬಂಡೀಪುರ ಅಭಯಾರಣ್ಯದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ (ರಾ.ಹೆ-212) ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡುವ ಬದಲು ಪರ್ಯಾಯ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಅರಣ್ಯ ಹಾಗೂ ವನ್ಯಜೀವಿ ಆವಾಸತಾಣವನ್ನು ಉಳಿಸಬೇಕು ಎಂದು ವನ್ಯಜೀವಿ ತಜ್ಞರು ರಾಜ್ಯ ಸರ್ಕಾರಕ್ಕೆ ಪರ್ಯಾಯ ಮಾರ್ಗೋಪಾಯದ ಸಲಹೆ ನೀಡಿದ್ದಾರೆ.
2 ಪರ್ಯಾಯ ಯೋಜನೆಗಳ ಸಲಹೆಯನ್ನೂ ಅವರು ನೀಡಿದ್ದಾರೆ. ‘ರಾಜ್ಯದಿಂದ ಕೇರಳದ ವಯನಾಡ್‌ಗೆ ಬಂಡೀಪುರ ಅರಣ್ಯದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ- 212 (766) ಮಾರ್ಗದಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ವಾಹನಗಳ ಸಂಚಾರಕ್ಕೆ ನಿಷೇಧವಿದೆ. ಈ ವಾಹನ ಸಂಚಾರ ನಿಷೇಧ ತೆರವು ಮಾಡಬೇಕು. ವಾಹನ ಸಂಚಾರದಿಂದ ವನ್ಯಜೀವಿಗಳಿಗೆ ಆಗುವ ಸಮಸ್ಯೆ ತಪ್ಪಿಸಲು ಸುಮಾರು 25 ಕಿ.ಮೀ. ಉದ್ದದ ರಸ್ತೆಯಲ್ಲಿ ನಾಲ್ಕು ಕಡೆ ತಲಾ 1ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಬೇಕು’ ಎಂದು ಕೇರಳ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ.
ಆದರೆ, ಇದರಿಂದ ವನ್ಯಜೀವಿಗಳ ಆವಾಸ ಸ್ಥಾನಕ್ಕೆ ಧಕ್ಕೆ ಉಂಟಾಗುತ್ತದೆ. ಈ ಎಲಿವೇಟೆಡ್ ಕಾರಿಡಾರ್ ಬದಲಿಗೆ ರಾಜ್ಯದಿಂದ ಕೇರಳಗೆ ರಾತ್ರಿ ವೇಳೆಯಲ್ಲೂ ಸಂಚರಿಸಲು ಪರ್ಯಾಯ ಯೋಜನೆಯನ್ನು ಕೈಗೊಳ್ಳಬಹುದು. ಇವುಗಳನ್ನು ಅನುಷ್ಠಾನಗೊಳಿಸಿದರೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಕೂಡ ಒಪ್ಪುತ್ತದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅರಣ್ಯ ಸಚಿವ ಶಂಕರ್ ಅವರಿಗೆ ವನ್ಯಜೀವಿ ತಜ್ಞರು ಕೆಲ ಸಲಹೆ ನೀಡಿದ್ದಾರೆ.
ಪರ್ಯಾಯ- 1: ರಾಜ್ಯ ವನ್ಯಜೀವಿ ಮಂಡಳಿ ಅಧ್ಯಕ್ಷರೂ ಆದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಪರ್ಯಾಯ ಮಾರ್ಗ ಸೂಚಿಸಿದ್ದಾರೆ. ಮೊದಲನೆಯದಾಗಿ, ರಾ.ಹೆ. - 212 ರಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡುವ ಬದಲು ನಾಗರಹೊಳೆ ಅರಣ್ಯ ಅಂಚಿನಲ್ಲಿರುವ ರಾಜ್ಯ ಹೆದ್ದಾರಿ- 90 ನ್ನು ಅಭಿವೃದ್ಧಿಪಡಿಸಬೇಕು. ಈ ರಾಜ್ಯ ಹೆದ್ದಾರಿಯು ಅರಣ್ಯದ ಚಿನಲ್ಲಿರುವುದರಿಂದ ಇಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡುವ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬಹುದು ಎಂದು ಸಲಹೆ ನೀಡಿದ್ದಾರೆ.
ರಾಜ್ಯ ಹೆದ್ದಾರಿ- 90ರ 9.8 ಕಿ.ಮೀ. ರಸ್ತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿದೆ. ಅಳ್ಳೂರು ಗೇಟ್‌ನಿಂದ ತಿತಿಮತ್ತಿವರೆಗಿನ ಈ ರಸ್ತೆಗೆ 9.8 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಬೇಕು. ಅದೇ ರಸ್ತೆಯು ಕೇರಳದ ವಯನಾಡು ಅರಣ್ಯ ಪ್ರದೇಶ ಅಂಚಿನಲ್ಲಿ ಹಾದುಹೋಗುತ್ತದೆ. ಹೀಗಾಗಿ ಅಲ್ಲೂ 8. 7 ಕಿ.ಮೀ. ಉದ್ದದ ಮೇಲು ರಸ್ತೆ ನಿರ್ಮಾಣ ಮಾಡಬೇಕು. ಈ ಎರಡೂ ಯೋಜನೆ ಕಾರ್ಯಗತಗೊಂಡರೆ ಬಂಡೀಪುರ ಅಭಯಾರಣ್ಯದ ಮೂಲಕ ಹಾದು ಹೋಗುವ ರಾ.ಹೆ.- 212 ( 766)ನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಬಹುದು.
ಪರ್ಯಾಯ- 2: ರಾಜ್ಯ ಹೆದ್ದಾರಿ- 90ರ ಅಭಿವೃದ್ಧಿ ಬಳಿಕವೂ ಬಂಡೀಪುರ ಅರಣ್ಯದ ಮೂಲಕ ಹಾದು ಹೋಗುವ ರಾ.ಹೆ.- 212ನ್ನು ಮುಚ್ಚಲು ಸಾಧ್ಯವಿಲ್ಲ. ರಾತ್ರಿ ವಾಹನಗಳ ಸಂಚಾರ ನಿಷೇಧವನ್ನು ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ವಿಸ್ತರಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.