362 ಪ್ರೊಬೆಷನರಿ ಅಧಿಕಾರಿಗಳ ನೇಮಕಾತಿಗೆ ಅಸ್ತು : ಕೆಎಟಿ ಆದೇಶ ಪ್ರಶ್ನಿಸದಿರಲು ಸರ್ಕಾರ ತೀರ್ಮಾನ

By Suvarna Web DeskFirst Published Mar 1, 2017, 4:35 PM IST
Highlights

ಅಂತಿಮವಾಗಿ 362 ಪ್ರೊಬೆಷನರಿ ಅಧಿಕಾರಿಗಳಿಗೆ ನೇಮಕಾತಿ ಪತ್ರ ನೀಡುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಎಟಿ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಬಗ್ಗೆ ವ್ಯಾಪಕ ಚರ್ಚೆ ಮತ್ತು ಚಿಂತನೆಯನ್ನೂ ನಡೆಸಿತ್ತು. ಅಂತಿಮವಾಗಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಎಟಿ ಆದೇಶ ಒಪ್ಪಿಕೊಂಡು 362 ಪ್ರೊಬೆಷನರಿ ಅಧಿಕಾರಿಗಳಿಗೆ ನೇಮಕಾತಿ ಆದೇಶ ನೀಡಲು ನಿರ್ಧರಿಸಿದೆ.

ಬೆಂಗಳೂರು(ಮಾ.01): ಎರಡು ಮೂರು ವರ್ಷಗಳ ಕಾನೂನು ಹೋರಾಟಕ್ಕೆ ಇಂದು ತೆರೆ ಬಿದ್ದಿದೆ. 2011ನೇ ಸಾಲಿನ 362 ಕೆಪಿಎಸ್​ಸಿ ಪ್ರೊಬೆಷನರಿ ಅಧಿಕಾರಿಗಳ ನೇಮಕಾತಿ ಸಂಬಂಧ ಕೆಎಟಿ ಆದೇಶವನ್ನು ಪ್ರಶ್ನಿಸದೇ ಇರಲು  ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಈ ಮೂಲಕ ನೇಮಕಾತಿಗಾಗಿ ಕಾಯ್ದಿದ್ದ ಅಭ್ಯರ್ಥಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.

ಅದು ಎರಡು ಮೂರು ವರ್ಷಗಳ ಕಾನೂನು ಹೋರಾಟ. 2011ರ ಬ್ಯಾಚ್​ನ ಕೆಪಿಎಸ್​ಸಿ 362 ಪ್ರೊಬೆಷನರಿ ಅಧಿಕಾರಿಗಳ ಆಯ್ಕೆಯಲ್ಲಿ ಅಕ್ರಮ ನಡೆದಿದೆ ಎಂಬ ವಿಚಾರ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಆ ಬಳಿಕ ನಡೆದ ಆರೋಪ, ಪ್ರತ್ಯಾರೋಪಗಳು, ಪ್ರತಿಭಟನೆಗಳು ಎಲ್ಲವೂ ಈಗ ಇತಿಹಾಸ. ಅಂತಿಮವಾಗಿ 362 ಪ್ರೊಬೆಷನರಿ ಅಧಿಕಾರಿಗಳಿಗೆ ನೇಮಕಾತಿ ಪತ್ರ ನೀಡುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಆದೇಶ ನೀಡಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಎಟಿ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಬಗ್ಗೆ ವ್ಯಾಪಕ ಚರ್ಚೆ ಮತ್ತು ಚಿಂತನೆಯನ್ನೂ ನಡೆಸಿತ್ತು. ಅಂತಿಮವಾಗಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಎಟಿ ಆದೇಶ ಒಪ್ಪಿಕೊಂಡು 362 ಪ್ರೊಬೆಷನರಿ ಅಧಿಕಾರಿಗಳಿಗೆ ನೇಮಕಾತಿ ಆದೇಶ ನೀಡಲು ನಿರ್ಧರಿಸಿದೆ.

ಇನ್ನು ಕಳೆದ ಸಂಪುಟ ಸಭೆಯಲ್ಲಿ ಅಂತಿಮವಾಗದೇ ಇಂದು ಮತ್ತೆ ಚರ್ಚೆಗೆ ಬಂದ ವೇಳೆ, ಸಚಿವರಿಂದ ಪರ-ವಿರೋಧ ಅಭಿಪ್ರಾಯಗಳೂ ವ್ಯಕ್ತವಾದವು. ಕೆಎಟಿ ಆದೇಶ ಒಪ್ಪಿಕೊಂಡರೆ ಸರ್ಕಾರಕ್ಕೆ ಹಿನ್ನೆಡೆಯಾಗುತ್ತದೆ, ಮೇಲ್ಮನವಿ ಸಲ್ಲಿಸೋಣ ಎಂದು ಕೆಲವು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ರೆ, ಚುನಾವಣೆ ಬರುತ್ತಿರುವುದರಿಂದ ಕೆಎಟಿ ಆದೇಶ ಪ್ರಶ್ನಿಸದಿರುವಂತೆ ಬಹುತೇಕ ಸಚಿವರು ಸಲಹೆ ನೀಡಿದ್ದಾರೆ. ಅಂತಿಮವಾಗಿ ಸಿಎಂ ಸೂಚನೆ ಮೇರೆಗೆ ಕ್ಯಾಬಿನೆಟ್​ ಒಪ್ಪಿಗೆ ಸೂಚಿಸಿದೆ. ಇನ್ನು ಆಡಳಿತದ ದೃಷ್ಟಿಯಿಂದ ನೇಮಕಾತಿಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಸಮರ್ಥಿಸಿಕೊಂಡಿರುವ ಸರ್ಕಾರ ಮತ್ತೆ ಕೋರ್ಟ್​ನಲ್ಲಿ ಪ್ರಶ್ನೆ ಮಾಡಲು ಎಲ್ಲರಿಗೂ ಸ್ವಾತಂತ್ರ್ಯ ಇದೆ ಎಂದಿದೆ. ಆದರೆ  ಸರ್ಕಾರದ ತೀರ್ಮಾನದ ಹಿಂದೆ ಯಾವುದೋ ಪ್ರಭಾವ ಕೆಲಸ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.

ಇದೇ ವೇಳೆ  362 ಅಭ್ಯರ್ಥಿಗಳ ಪರ ನಿಂತಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​.ಡಿ. ಕುಮಾರಸ್ವಾಮಿಗೆ ಸಂಪುಟ ತೀರ್ಮಾನದಿಂದ  ಮೇಲುಗೈಯಾದಂತಾಗಿದೆ. ಸಂಪುಟ ತೀರ್ಮಾನ ಕೈಗೊಳ್ಳುತ್ತಿದ್ದಂತೆ ನೇಮಕಾತಿ ನಿರೀಕ್ಷೆಯಲ್ಲಿರುವ 2011ರ ಬ್ಯಾಚ್​ನ ಅಭ್ಯರ್ಥಿಗಳು ಕಾನೂನು ಸಚಿವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ರು.

ವರದಿ: ಕಿರಣ್ಹನಿಯಡ್ಕ, ಸುವರ್ಣ ನ್ಯೂಸ್​.

click me!