ಪೆಟ್ರೋಲ್‌ ಬೆಲೆ ಇಳಿಸಲು ಕೇಂದ್ರದ ಹೊಸ ತಂತ್ರ

Published : May 25, 2018, 10:40 AM IST
ಪೆಟ್ರೋಲ್‌ ಬೆಲೆ ಇಳಿಸಲು ಕೇಂದ್ರದ ಹೊಸ ತಂತ್ರ

ಸಾರಾಂಶ

ದಿನೇದಿನೇ ಏರುತ್ತಲೇ ಸಾಗಿರುವ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಶಾಶ್ವತವಾಗಿ ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ತಂತ್ರವೊಂದನ್ನು ಹುಡುಕಿದ್ದು, ಅದರಂತೆ ತೈಲೋತ್ಪಾದಕರ ಮೇಲೆ ವಿಂಡ್‌ಫಾಲ್‌ ತೆರಿಗೆ (ಭಾರಿ ಲಾಭದ ಮೇಲಿನ ತೆರಿಗೆ) ವಿಧಿಸಲು ಚಿಂತನೆ ನಡೆಸಿದೆ.

ನವದೆಹಲಿ :  ದಿನೇದಿನೇ ಏರುತ್ತಲೇ ಸಾಗಿರುವ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಶಾಶ್ವತವಾಗಿ ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ತಂತ್ರವೊಂದನ್ನು ಹುಡುಕಿದ್ದು, ಅದರಂತೆ ತೈಲೋತ್ಪಾದಕರ ಮೇಲೆ ವಿಂಡ್‌ಫಾಲ್‌ ತೆರಿಗೆ (ಭಾರಿ ಲಾಭದ ಮೇಲಿನ ತೆರಿಗೆ) ವಿಧಿಸಲು ಚಿಂತನೆ ನಡೆಸಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾದಾಗ ಭಾರತದಲ್ಲಿ ತೈಲ ಸಂಸ್ಕರಣೆ ಮಾಡುವ ಕಂಪನಿಗಳಿಗೆ ದೊಡ್ಡ ಪ್ರಮಾಣದ ಲಾಭವಾಗುತ್ತದೆ. ಈ ಲಾಭಕ್ಕೆ ವಿಧಿಸುವ ತೆರಿಗೆಯೇ ವಿಂಡ್‌ಫಾಲ್‌ ತೆರಿಗೆ. ಇದು ಸೆಸ್‌ ರೂಪದಲ್ಲಿರುತ್ತದೆ. ಇದನ್ನು ವಿಧಿಸುವ ಮೂಲಕ ಸರ್ಕಾರಕ್ಕೆ ಹರಿದುಬರುವ ಹಣವನ್ನು ಚಿಲ್ಲರೆ ತೈಲ ಮಾರಾಟಗಾರರಿಗೆ ನೀಡಲಾಗುತ್ತದೆ. ತನ್ಮೂಲಕ ಗ್ರಾಹಕರಿಗೆ ಕಡಿಮೆ ಬೆಲೆಗೆ ಪೆಟ್ರೋಲ್‌ ಹಾಗೂ ಡೀಸೆಲ್‌ ಮಾರಾಟ ಮಾಡುವಂತೆ ನೋಡಿಕೊಳ್ಳಲಾಗುತ್ತದೆ. ಬ್ರಿಟನ್‌, ಚೀನಾ ಮುಂತಾದ ರಾಷ್ಟ್ರಗಳಲ್ಲಿ ತೈಲ ಬೆಲೆ ನಿಯಂತ್ರಣಕ್ಕೆ ಈ ತೆರಿಗೆ ವಿಧಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 70 ಡಾಲರ್‌ ದಾಟಿದಾಕ್ಷಣ ಒಎನ್‌ಜಿಸಿ ಸೇರಿದಂತೆ ನಮ್ಮ ದೇಶದಲ್ಲಿ ತೈಲ ಸಂಸ್ಕರಣೆ ಮಾಡುವ ಸರ್ಕಾರಿ ಹಾಗೂ ಖಾಸಗಿ ತೈಲೋತ್ಪಾದಕರಿಗೆ ವಿಂಡ್‌ಫಾಲ್‌ ತೆರಿಗೆ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ. ಅದರ ಜೊತೆಗೆ, ತೈಲದ ಮೇಲಿನ ಅಬಕಾರಿ ಸುಂಕವನ್ನೂ ಕೊಂಚ ಕಡಿಮೆ ಮಾಡಿ ಗ್ರಾಹಕರಿಗೆ ತಕ್ಷಣಕ್ಕೆ ಪೆಟ್ರೋಲ್‌, ಡೀಸೆಲ್‌ ಬೆಲೆ ಸೋವಿಯಾಗುವಂತೆ ನೋಡಿಕೊಳ್ಳುವ ಬಗ್ಗೆಯೂ ಯೋಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಗೆಯೇ, ರಾಜ್ಯ ಸರ್ಕಾರಗಳು ಕೂಡ ತೈಲೋತ್ಪನ್ನಗಳ ಮೇಲಿನ ಮಾರಾಟ ತೆರಿಗೆ ಮತ್ತು ವ್ಯಾಟ್‌ ಇಳಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಲಿದೆ.

ಸದ್ಯ ಪ್ರತಿ ಲೀಟರ್‌ ಪೆಟ್ರೋಲ್‌ ಮೇಲೆ ಕೇಂದ್ರ ಸರ್ಕಾರ 19.48 ರು. ಹಾಗೂ ಡೀಸೆಲ್‌ ಮೇಲೆ 15.33 ರು.ಗಳನ್ನು ಅಬಕಾರಿ ಸುಂಕದ ರೂಪದಲ್ಲಿ ಸಂಗ್ರಹಿಸುತ್ತಿದೆ. ಇನ್ನು, ಮಾರಾಟ ತೆರಿಗೆ ಹಾಗೂ ವ್ಯಾಟ್‌ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ತೈಲ ಬೆಲೆ ಹೆಚ್ಚಿದಷ್ಟೂರಾಜ್ಯಗಳಿಗೆ ಮಾರಾಟ ತೆರಿಗೆ ಹಾಗೂ ವ್ಯಾಟ್‌ನಿಂದ ಹೆಚ್ಚು ಲಾಭವಾಗುತ್ತದೆ. ಆದರೆ, ಕೇಂದ್ರಕ್ಕೆ ಬರುವ ಅಬಕಾರಿ ಸುಂಕದ ಆದಾಯ ಹೆಚ್ಚುಕಮ್ಮಿ ಅಷ್ಟೇ ಇರುತ್ತದೆ ಎಂದು ಹೇಳಲಾಗಿದೆ.

ತೈಲ ಬೆಲೆಯನ್ನು ನಿಯಂತ್ರಣದಲ್ಲಿಡಲು 2008ರಲ್ಲೂ ಒಮ್ಮೆ ಕೇಂದ್ರ ಸರ್ಕಾರ ವಿಂಡ್‌ಫಾಲ್‌ ತೆರಿಗೆ ವಿಧಿಸಲು ಚಿಂತನೆ ನಡೆಸಿತ್ತು. ಆದರೆ, ಕೇರ್ನ್‌ ಇಂಡಿಯಾ ಮುಂತಾದ ಖಾಸಗಿ ತೈಲೋತ್ಪಾದಕರಿಂದ ಅದಕ್ಕೆ ತೀವ್ರ ವಿರೋಧ ವ್ಯಕ್ತವಾದ್ದರಿಂದ ಪ್ರಸ್ತಾವ ಕೈಬಿಡಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೀಚ್‌ಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ಬಗ್ಗೆ ಚರ್ಚೆ: ಡಿ.ಕೆ.ಶಿವಕುಮಾರ್‌
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌