ಸಂಬ್ಳ ಜಾಸ್ತಿ ಮಾಡಲ್ಲ ಎಂದ ಸರ್ಕಾರ: ಆಕ್ರೋಶದ ಉರಿಯಲ್ಲಿ ಸೈನಿಕ!

By Web DeskFirst Published Dec 5, 2018, 3:39 PM IST
Highlights

ಮೋದಿ ಸರ್ಕಾರದ ವಿರುದ್ಧ ಭುಗಿಲೆದ್ದ ಸೈನಿಕರ ಆಕ್ರೋಶ! ಜೆಸಿಒಗಳ ವೇತನ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ನಕಾರ! 87,666 ಜೆಸಿಒಗಳು ಮತ್ತು 25,434 ಸಿಬ್ಬಂದಿ ಜೀವನ ಡೋಲಾಯಮಾನ! ಮೂರೂ ಪಡೆಗಳ ಸುಮಾರು 1.12 ಲಕ್ಷ ಸೈನಿಕರು ಎಂಎಸ್‌ಪಿ ನಿರೀಕ್ಷೆಯಲ್ಲಿ! ವೇತನ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 610 ಕೋಟಿ ರೂ. ಹೊರೆ
 

ನವದೆಹಲಿ(ಡಿ.05): ಪ್ರತಿ ಬಾರಿ ಸೇನಾ ಸಮವಸ್ತ್ರದಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸುವ ಪ್ರಧಾನಿ ನರೇಂದ್ರ ಮೋದಿ, ಯೋಧರು ಈ ದೇಶದ ಆಸ್ತಿ ಅಂತೆಲ್ಲಾ ಭಾಷಣ ಮಾಡುತ್ತಾರೆ. ಆದರೆ ಅವರ ವೇತನ ಹೆಚ್ಚಳ ಮಾಡುವ ಪ್ರಸ್ತಾವ ಬಂದಾಗ ಮಾತ್ರ ದಿವ್ಯ ಮೌನಕ್ಕೆ ಶರಣಾಗುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.

ಹೌದು, ಭಾರತೀಯ ಸೇನೆಯ ಬಹುದಿನಗಳ ಬೇಡಿಕೆಯಾದ ವೇತನ (ಮಿಲಿಟರಿ ಸರ್ವಿಸ್‌ ಪೇ ಅಥವಾ ಎಂಎಸ್‌ಪಿ)ಹೆಚ್ಚಳಕ್ಕೆ ಕೇಂದ್ರ ಸರ್ಕಾರ ನಿರಾಕರಿಸಿದ್ದು, ಸೇನೆಯಲ್ಲಿ ಆಕ್ರೋಶ ಮೂಡಲು ಕಾರಣವಾಗಿದೆ. 

ಜ್ಯೂನಿಯರ್‌ ಕಮಿಷನ್ಡ್ ಆಫಿಸರ್‌ಗಳು(ಜೆಸಿಒ) ಸೇರಿದಂತೆ 1.12 ಲಕ್ಷ ಸೈನಿಕರು ಎಂಎಸ್‌ಪಿ ನಿರೀಕ್ಷೆಯಲ್ಲಿದ್ದರು. ಆದರೆ ಕೇಂದ್ರ ವಿತ್ತ ಸಚಿವಾಲಯ ಈ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದೆ.

ವಿತ್ತ ಸಚಿವಾಲಯದ ನಿರ್ಧಾರದಿಂದ ನೌಕಾಸೇನೆ ಮತ್ತು ವಾಯುಸೇನೆಯ 87,666 ಜೆಸಿಒಗಳು ಮತ್ತು 25,434 ಸಿಬ್ಬಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸವಾಲು ಮತ್ತು ಕಠಿಣ ಕೆಲಸಗಳನ್ನು ಮನಗಂಡು ಎಂಎಸ್‌ಪಿಯನ್ನು ಜಾರಿಗೊಳಿಸಲಾಗುತ್ತದೆ. 

ಸೇನೆಯ ಬೇಡಿಕೆಗೆ ಸ್ಪಂದಿಸಿದರೆ ವಾರ್ಷಿಕ 610 ಕೋಟಿ ರೂ. ಹೊರೆಯಾಗಲಿದೆ. ಆದರೆ ಸುಮಾರು 3,000 ಕೋಟಿ ರೂ. ಖರ್ಚು ಮಾಡಿ ಸರ್ದಾರ್‌ ಪಟೇಲ್‌ ಪ್ರತಿಮೆ ನಿರ್ಮಿಸಿರುವ ಕೇಂದ್ರ ಸರಕಾರಕ್ಕೆ ಇದೇನು ಕಷ್ಟದ ಕೆಲಸವಲ್ಲ ಎಂಬ ಕೂಗು ಸೇನಾ ವಲಯದಲ್ಲಿ ಕೇಳಿ ಬಂದಿದೆ.

click me!