ಮೀಟೂ ಸಂತ್ರಸ್ತರ ನೆರವಿಗೆ ಶಿ-ಬಾಕ್ಸ್

Published : Oct 14, 2018, 04:33 PM IST
ಮೀಟೂ ಸಂತ್ರಸ್ತರ ನೆರವಿಗೆ ಶಿ-ಬಾಕ್ಸ್

ಸಾರಾಂಶ

2012ರ ನಿರ್ಭಯಾ ಪ್ರಕರಣ ಎಲ್ಲ ಭಾರತೀಯ ಮಹಿಳೆಯರನ್ನು ಆತಂಕಕ್ಕೆ ದೂಡಿದೆ. ಭಾರತ ಮಹಿಳೆಯರಿಗೆ ಸುರಕ್ಷಿತ ರಾಷ್ಟ್ರವಲ್ಲ ಎಂಬ ಭಾವನೆ ಮೂಡಿಸಿದೆ. ಅದರ ವಿರುದ್ಧ ನಾವು ಮಾಡಿದ ಮೊದಲ ಕಾರ್ಯವೆಂದರೆ ಒನ್ ಸ್ಟಾಪ್ ಸೆಂಟರ್’ಗಳ ಸ್ಥಾಪನೆ. ಇಂದು ಭಾರತದಾದ್ಯಂತ 600 ಒನ್ ಸ್ಟಾಪ್ ಸೆಂಟರ್‌ಗಳಿವೆ. ಇದರಿಂದ ಇಲ್ಲಿಯವರೆಗೆ 12 ಲಕ್ಷ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ.

ಮೀಟೂ ಸಂತ್ರಸ್ತರ ನೆರವಿಗೆ ಶಿ-ಬಾಕ್ಸ್ ಮಹಿಳಾ ಸಬಲೀಕರಣ ಅತ್ಯಂತ ವೇಗದಲ್ಲಾಗುತ್ತಿದೆ, ಆದರೆ ಸುರಕ್ಷತೆಯೇ ಸವಾಲು ಕೆಲ ವರ್ಷದಿಂದ ಆಡಳಿತ, ರಾಜಕೀಯ ಕ್ಷೇತ್ರ ಸೇರಿದಂತೆ ಎಲ್ಲ ಸಾರ್ವಜನಿಕ ವಲಯಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆ. ಬದಲಾವಣೆ ಅತಿ ವೇಗದಲ್ಲಾಗುತ್ತಿದೆ. ಮೊಟ್ಟ ಮೊದಲ ಬಾರಿಗೆ ಫೈಟರ್ ಜೆಟ್‌ಗಳಿಗೂ ಮಹಿಳೆಯರು ಪೈಲಟ್‌ಗಳಾಗಿದ್ದಾರೆ. ಒಲಿಂಪಿಕ್ಸ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಇಸ್ರೋದ ಸಾಧನೆಯಲ್ಲೂ ಮಹಿಳೆಯರ ಪಾಲಿದೆ. ಮಹಿಳೆಯರ ಸಾಕ್ಷರತೆ ಪ್ರಮಾಣ ಹೆಚ್ಚುತ್ತಿದೆ. ಆದರೆ ಮಹಿಳೆಯರ ರಕ್ಷಣೆ ಎಂಬುದು ಇಂದಿಗೂ ಸಮಸ್ಯೆಯಾಗಿಯೇ ಉಳಿದಿದೆ.

2012ರ ನಿರ್ಭಯಾ ಪ್ರಕರಣ ಎಲ್ಲ ಭಾರತೀಯ ಮಹಿಳೆಯರನ್ನು ಆತಂಕಕ್ಕೆ ದೂಡಿದೆ. ಭಾರತ ಮಹಿಳೆಯರಿಗೆ ಸುರಕ್ಷಿತ ರಾಷ್ಟ್ರವಲ್ಲ ಎಂಬ ಭಾವನೆ ಮೂಡಿಸಿದೆ. ಅದರ ವಿರುದ್ಧ ನಾವು ಮಾಡಿದ ಮೊದಲ ಕಾರ್ಯವೆಂದರೆ ಒನ್ ಸ್ಟಾಪ್ ಸೆಂಟರ್’ಗಳ ಸ್ಥಾಪನೆ. ಇಂದು ಭಾರತದಾದ್ಯಂತ 600 ಒನ್ ಸ್ಟಾಪ್ ಸೆಂಟರ್‌ಗಳಿವೆ. ಇದರಿಂದ ಇಲ್ಲಿಯವರೆಗೆ 12 ಲಕ್ಷ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. ಪ್ರತಿ ಸೆಂಟರ್‌ನಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನೆರವು ನೀಡಲು ಬೇಕಾದ ನರ್ಸ್, ಡಾಕ್ಟರ್, ಪೊಲೀಸ್ ಮುಂತಾದ ಎಲ್ಲ ಸೌಕರ್ಯಗಳಿವೆ.

ಬರಲಿವೆ ಹೈಟೆಕ್ ಫೊರೆನ್ಸಿಕ್ ಲ್ಯಾಬ್

ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾಯ್ದೆ ರೂಪುಗೊಂಡಿದೆ. ಆದರೆ ಇಂಥ ಪ್ರಕರಣಗಳಲ್ಲಿ ಶಿಕ್ಷೆ ತಡವಾಗುತ್ತಿದೆ. ಅದಕ್ಕೆ ಕಾರಣ ಸಾಕ್ಷ್ಯಾಧಾರಗಳ ಕೊರತೆ ಮತ್ತು ಸಂತ್ರಸ್ತೆಯರು ರಾಜಿ ಮಾಡಿಕೊಳ್ಳುವುದು. ಸಾಕ್ಷ್ಯಗಳ ವಿಷಯಕ್ಕೆ ಬಂದರೆ, ನಮ್ಮ ದೇಶದಲ್ಲಿರುವ ಫೊರೆನ್ಸಿಕ್ ಲ್ಯಾಬ್‌ಗಳು ತೀರಾ ನಿಕೃಷ್ಟವಾಗಿವೆ. ಹಾಗಾಗಿ ಚಂಡೀಗಢ, ಮುಂಬೈ, ಪುಣೆ, ಚೆನ್ನೈ, ಕೊಲ್ಕತ್ತಾ ಮತ್ತು ಗುವಾಹಟಿಗಳಲ್ಲಿ 6 ನೂತನ ಲ್ಯಾಬ್‌ಗಳ ಆರಂಭಕ್ಕೆ ಸಿದ್ಧತೆ ನಡೆಯುತ್ತಿವೆ. ಅವು ಇನ್ನು ಐದು ತಿಂಗಳಲ್ಲಿ ಶುರುವಾಗುತ್ತವೆ. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಗಳಲ್ಲಿ ಡಿಗ್ರಿ ಪಡೆದ ಸುಮಾರು 5000 ಯುವಜನತೆಗೆ ಇಲ್ಲಿ ಉದ್ಯೋಗ ನೀಡುವ ಯೋಚನೆ ಇದೆ. ಅಲ್ಲದೆ ಈಗಾಗಲೇ ಇರುವ ಲ್ಯಾಬ್‌ಗಳ ಸಾಮರ್ಥ್ಯವನ್ನೂ ಹೆಚ್ಚಿಸಿದ್ದೇವೆ. ಚಂಡೀಗಢವೊಂದರಲ್ಲಿಯೇ 2000 ಪ್ರಕರಣಗಳ ತನಿಖೆ ನಡೆಯುತ್ತಿದೆ.

ರೇಪ್ ಕಿಟ್, ಜೀರೋ ಎಫ್‌ಐಆರ್

ಗೃಹ ಇಲಾಖೆಯಿಂದ ಪ್ರತಿಯೊಂದು ಜಿಲ್ಲಾ ಪೊಲೀಸ್ ಸ್ಟೇಶನ್ ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಕಿಟ್‌ಗಳನ್ನು ನೀಡಲಾಗಿದೆ. ಅದನ್ನು ‘ರೇಪ್ ಕಿಟ್’ ಎನ್ನಲಾಗುತ್ತದೆ. ಅದೊಂದು ಪ್ಲಾಸ್ಟಿಕ್ ಬಾಕ್ಸ್. ಅದರ ಒಳಗೆ ಟೆಸ್ಟ್ಯೂಬ್‌ಗಳಿರುತ್ತವೆ. ಅತ್ಯಾಚಾರ ಪ್ರಕರಣಗಳ ಸಂದರ್ಭದಲ್ಲಿ ರಕ್ತ, ಬಟ್ಟೆ ಮುಂತಾದ ಸಾಕ್ಷ್ಯಾದಾರಗಳನ್ನು ಒಂದೇ ಬಾಕ್ಸ್‌ವೊಳಗೆ ಇಟ್ಟು ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗುತ್ತದೆ. ಇದರಿಂದ ಸಾಕ್ಷ್ಯಗಳು ನಾಶವಾಗುವುದು ತಪ್ಪುತ್ತಿದೆ. ನಾನು ಸಚಿವೆಯಾದ ಬಳಿಕ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಜಾರಿಯಾಗಿದೆ. ಇದಕ್ಕೆ ಬಹುತೇಕ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಒಪ್ಪಿವೆ. ಆದರೆ ನೇಮಕಾತಿ ನಿಧಾನವಾಗಿ ನಡೆಯುತ್ತಿದೆ. ಅದರೊಂದಿಗೆ ಸರ್ಕಾರ ಜಾರಿಗೆ ತಂದ ಮತ್ತೊಂದು ಯೋಜನೆ ಜೀರೋ ಎಫ್ಐಆರ್. ಈ ಮೊದಲು ಎಲ್ಲಿ ಕೃತ್ಯ ನಡೆದಿರುತ್ತದೋ ಅಲ್ಲಿಯೇ ಪೊಲೀಸರಿಗೆ ಠಾಣೆಯಲ್ಲಾದರೂ ದೂರು ನೀಡಬಹುದು.

ಕಂಪನಿಗಳಲ್ಲಿ ‘ಕಿರುಕುಳ ನಿಗ್ರಹ ಟೀಂ’

ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ನೀಡುವ ಕಿರುಕುಳದ ಪ್ರಮಾಣ ಹೆಚ್ಚಿದೆ. 3 ವರ್ಷದ ಹಿಂದೆ ಕೆಲಸದ ಸ್ಥಳಗಳಲ್ಲಿ ಮಹಿಳೆಯರು ಎದುರಿಸುವ ಲೈಂಗಿಕ ದೌರ್ಜನ್ಯ ಕುರಿತಾಗಿ ಸಣ್ಣ ಸಮೀಕ್ಷೆ ಮಾಡಲಾಗಿತ್ತು. ಅದರಲ್ಲಿನ ಅಂಕಿಅಂಶಗಳು ನಿಜಕ್ಕೂ ಆತಂಕಕಾರಿಯಾಗಿತ್ತು. ಕೆಲಸದ ಮೊದಲ ವರ್ಷ ಶೇ.87ರಷ್ಟು ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಕಾಯ್ದೆ ಜಾರಿಗೊಳಿಸಿದೆವು. ಕನಿಷ್ಠ 10 ಮಂದಿ ಉದ್ಯೋಗಿಗಳನ್ನು ಒಳಗೊಂಡ ಪ್ರತಿ ಕಂಪನಿಯೂ ಸೆಕ್ಷುವಲ್ ಹೆರಾಸ್‌ಮೆಂಟ್ ಕಮಿಟಿ ರಚಿಸುವುದನ್ನು
ಕಡ್ಡಾಯ ಮಾಡಲಾಗಿದೆ. ಅದರ ಮುಖ್ಯಸ್ಥರು ಮಹಿಳೆಯರೇ ಆಗಿರುತ್ತಾರೆ.

ಮೀ ಟೂ ಸಮಸ್ಯೆಯೇ? ನಾವಿದ್ದೇವೆ

ಸದ್ಯ ಜಾಗತಿಕ ಮಟ್ಟದಲ್ಲಿ ‘ಮೀ ಟೂ’ ಆಂದೋಲನ ಪ್ರಾರಂಭವಾಗಿದೆ. ಇದಕ್ಕೆ ಶೀಘ್ರವೇ ಸ್ಪಂದಿಸಿದ ಮೊದಲ ದೇಶ ಭಾರತ. ಅದಕ್ಕಾಗಿಯೇ ‘ಶಿ ಬಾಕ್ಸ್’ ಎನ್ನುವ ಆನ್‌ಲೈನ್ ಕಂಪ್ಲೇಂಟ್ ಆ್ಯಕ್ಸೆಸ್ ಪ್ರಾರಂಭಿಸಿದ್ದೇವೆ. ಯಾವುದೇ ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಶಿ-ಬಾಕ್ಸ್‌ನಲ್ಲಿ ಟೈಪ್ ಮಾಡಿ ಅದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ಗೆ ಕಳುಹಿಸಬಹುದು. ಈಗಾಗಲೇ ಇದರಲ್ಲಿ ನೂರಾರು ದೂರುಗಳು ಬಂದಿವೆ. ಆ ದೂರುಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಇನ್ನು, ಇ-ಬಾಕ್ಸ್‌ನಲ್ಲಿ ಮಕ್ಕಳ ಮೇಲಿನ
ದೌರ್ಜನ್ಯಗಳಾದಾಗ ಅವರ ಪೋಷಕರು, ಸಂಬಂಧಿಕರು, ನೆರೆಹೊರೆಯವರು ದೂರು ನೀಡಬಹುದು.

ಕಾಣೆಯಾದವರ ಪತ್ತೆಗೆ ವೆಬ್‌ಸೈಟ್

ನಮ್ಮ ಸರ್ಕಾರ ಜಾರಿಗೊಳಿಸಿದ ಅತಿ ಮುಖ್ಯ ಯೋಜನೆ ‘ಬೇಟಿ ಬಚಾವೋ, ಬೇಟಿ ಪಡಾವೋ’. ಈ ಯೋಜನೆಗೂ ಮೊದಲು ಪುರುಷ ಮತ್ತು ಸ್ತ್ರೀಯರ ಅನುಪಾತ 1000:800 ಇತ್ತು. ಈ ಯೋಜನೆ ಬಳಿಕ ಮಹಿಳೆಯರ ಸಂಖ್ಯೆ ಏರುತ್ತಾ ಹೋಯಿತು. ಅದರ ಪರಿಣಾಮವಾಗಿ ಇಂದು ಬಹುತೇಕ ಜಿಲ್ಲೆಗಳಲ್ಲಿ ಮಹಿಳೆಯರ ಅನುಪಾತ ಸಾವಿರಕ್ಕೇರಿದೆ. ಕೆಲವು ಜಿಲ್ಲೆಗಳಲ್ಲಿ 950 ಇದೆ. ಜನರ ಮನಸ್ಥಿತಿ ಬದಲಾಗುತ್ತಿದೆ. ಹೆಣ್ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ, ಉಚಿತ ಸೈಕಲ್ ನೀಡುವ ಯೋಜನೆಗಳಿವೆ. ಪುರುಷ ಪ್ರಾಧಾನ್ಯ ಹೊಂದಿರುವ ಪಂಜಾಬ್, ಹರ್ಯಾಣ ಮತ್ತು ರಾಜಸ್ಥಾನಗಳು ಕೂಡ ವೇಗವಾಗಿ ಬದಲಾಗುತ್ತಿವೆ.
ಅಲ್ಲದೆ ‘ಖೋಯಾ ಪಾಯಾ’ ಎಂಬ ವೆಬ್‌ಸೈಟ್ ಆರಂಭಿಸಿದ್ದೇವೆ. ನಿಮ್ಮ ಸುತ್ತಮುತ್ತಲಿನ ಮಹಿಳೆಯರು ಮತ್ತು ಮಕ್ಕಳು ಕಾಣೆಯಾಗಿದ್ದರೆ, ಅವರ ಫೋಟೋ ಮತ್ತಿತರ ಮಾಹಿತಿಯನ್ನು ಇದರಲ್ಲಿ ಅಪ್‌ಲೋಡ್ ಮಾಡಬಹುದು. ಅದನ್ನು ಯಾರು ಬೇಕಾದರೂ ಆ್ಯಕ್ಸೆಸ್ ಮಾಡಬಹುದು. ಹೀಗೆ ಆ್ಯಕ್ಸೆಸ್ ಮಾಡಿದಾಗ ಕಾಣೆಯಾದವರ ಫೋಟೋ ನೋಡಿ ನೋಡಿದಂತೆ ಅನಿಸಿದರೆ ಅವರ
ಮಾಹಿತಿಯನ್ನು ಅಪ್ಲೋಡ್ ಮಾಡಬೇಕು. ಅವೆರಡನ್ನೂ ಹೊಂದಿಸಿ ಕಾಣೆಯಾದವರನ್ನು ಪತ್ತೆಹಚ್ಚಲಾಗುತ್ತದೆ. ಹೀಗೆ 54 ಸಾವಿರ ಮಹಿಳೆ ಮತ್ತು ಮಕ್ಕಳನ್ನು ಪತ್ತೆಹಚ್ಚಲಾಗಿದೆ.

ವಂಚಕ ಎನ್‌ಆರ್‌ಐಗಳಿಗೆ ಗಾಳ

ವರದಕ್ಷಿಣೆ ಕಿರುಕುಳ ಕೂಡ ದೇಶಾದ್ಯಂತ ದೊಡ್ಡ ಸಮಸ್ಯೆಯೇ ಆಗುಳಿದಿದೆ. ಅದರಲ್ಲೂ ಅನಿವಾಸಿ ಭಾರತೀಯರಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಹಾಗಾಗಿ ಹೊಸ ನಿಯಮವೊಂದನ್ನು ತರುವ ಸಿದ್ಧತೆಯಲ್ಲಿದ್ದೇವೆ. ಅದರಡಿ, ಅನಿವಾಸಿ ಭಾರತೀಯರು ಭಾರತೀಯ ಮಹಿಳೆಯನ್ನು ವಿವಾಹವಾಗಿ ವಿದೇಶಗಳಲ್ಲಿ ನೆಲೆಸಿದ್ದರೆ ವಿವಾಹವಾದ 10 ದಿನದ ಒಳಗೆ ನೋಂದಣಿ ಮಾಡಿಕೊಳ್ಳಬೇಕು. ಆಗ ಯಾವುದೇ ಸಮಯದಲ್ಲಿ ಯಾರು ಯಾರನ್ನು ವಿವಾಹವಾಗಿದ್ದಾರೆ ಎಂಬ ಮಾಹಿತಿ ಸಿಗುತ್ತದೆ. ಒಂದು ವೇಳೆ ಆ ಸ್ತ್ರೀ ದೂರು ನೀಡಿದಲ್ಲಿ ಸರ್ಕಾರ ಆಕೆಯ ರಕ್ಷಣೆಗೆ ಧಾವಿಸಬಹುದು. ಒಂದು ವೇಳೆ ಆತ ಭಾರತಕ್ಕೆ ಬಾರದಿದ್ದರೆ ಅವನ ಪೋಷಕರನ್ನು ವಶಕ್ಕೆ ಪಡೆಯಲಾಗುತ್ತದೆ. ಈ ಎಲ್ಲ ಕ್ರಮಗಳೂ ಶೀಘ್ರದಲ್ಲೇ ಫಲ ನೀಡಲು ಆರಂಭಿಸುತ್ತವೆ. ಆಗ ನಮ್ಮ ದೇಶದ ಮಹಿಳೆಯರ ಸ್ಥಿತಿಗತಿ ಇನ್ನಷ್ಟು ಸುಧಾರಿಸುವುದರಲ್ಲಿ ಅನುಮಾನವಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವನ್ಯಜೀವಿ ಸಂರಕ್ಷಣೆ: ಏಷ್ಯಾನೆಟ್ ಸುವರ್ಣ ನ್ಯೂಸ್ & ಕನ್ನಡಪ್ರಭದ ಅಭಿಯಾನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್!
Lionel Messi India visit: ರಾಹುಲ್ ಗಾಂಧಿಗೆ ಟಿ-ಶರ್ಟ್ ಉಡುಗೊರೆ ನೀಡಿದ ಮೆಸ್ಸಿ!