ರಾಜಕಾರಣಿಗಳಿಗೆ ಕಾದಿದೆ ಚಿನ್ನದ ಗಣಿ!

By Web Desk  |  First Published Oct 14, 2018, 3:53 PM IST

ಇಂದಿರಾ ಗಾಂಧಿಯವರ ಅತ್ಯುತ್ತಮ ವರ್ಷಗಳೆಂದರೆ ಅವರು ಹಸ್ಕರ್‌ರನ್ನು ನಂಬುತ್ತಿದ್ದ ಹಾಗೂ ಅವರ ಐಡಿಯಾಗಳನ್ನು ಜಾರಿಗೊಳಿಸುತ್ತಿದ್ದ ವರ್ಷಗಳು. ರಾಜರ ಮಾಸಾಶನ ನಿಲ್ಲಿಸುವ, ಬ್ಯಾಂಕ್, ವಿಮಾ ಕಂಪನಿಗಳು, ಕಲ್ಲಿದ್ದಲು, ತೈಲ
ಘಟಕಗಳನ್ನು ರಾಷ್ಟ್ರೀಕರಣಗೊಳಿಸುವ ಅದ್ಭುತ ಸಲಹೆಗಳನ್ನು ಕೊಟ್ಟಿದ್ದೇ ಇವರು.


ಬೆಂಗಳೂರು (ಅ. 14): ಸರ್ಕಾರಿ ಕಡತಗಳಲ್ಲಿ ಇತಿಹಾಸ ಅಡಗಿ ಕುಳಿತಿರುತ್ತದೆ. ಅಡಗಿರುತ್ತದೆ ಏಕೆಂದರೆ, ಆಧುನಿಕ ಪ್ರಜಾಪ್ರಭುತ್ವ ರಾಷ್ಟ್ರಗಳೆಲ್ಲ ಒಂದಷ್ಟು ವರ್ಷ ಕಳೆದ ಮೇಲೆ ಕಡತಗಳನ್ನು ಬಹಿರಂಗಗೊಳಿಸುವ ಕೆಲಸ ಮಾಡಿದರೆ, ಭಾರತ ಸರ್ಕಾರ ಎಷ್ಟು ವರ್ಷ ಕಳೆದರೂ, ಕೆಲವೊಮ್ಮೆ ಶಾಶ್ವತವಾಗಿ ಅವುಗಳ ಮೇಲೆ ಕುಳಿತೇ ಇರುತ್ತದೆ.

ಆದರೆ, ಆಗಾಗ ಈ ಕಡತಗಳ ಚಿನ್ನದ ಗಣಿ ಸೃಜನಶೀಲ ವ್ಯಕ್ತಿಗಳ ಕೈಗೆ ಸಿಕ್ಕಿಬಿಡುತ್ತದೆ. ಆಗ ಝಗಮಗ ಹೊಳೆಯುವ ಮಾಹಿತಿಗಳ ಹೊಸ ಜಗತ್ತೊಂದು ತೆರೆದುಕೊಳ್ಳುತ್ತದೆ. ‘ಇಂಟರ್‌ಟ್ವೈನ್ಡ್ ಲೈವ್ಸ್: ಪಿ.ಎನ್.ಹಸ್ಕರ್ ಆ್ಯಂಡ್ ಇಂದಿರಾ ಗಾಂಧಿ’ ಪುಸ್ತಕದಿಂದ ಈಗ ಅದೇ ಆಗಿದೆ. ಬಹುಶಃ ಲೇಖಕ ಜೈರಾಂ ರಮೇಶ್ ಅವರ ದಿಲ್ಲಿ ಸಂಪರ್ಕಗಳಿಂದಾಗಿ ಈ ಚಿನ್ನದ ಗಣಿ ಅವರ ಕೈಗೆ ಸಿಕ್ಕಿರಬಹುದು. ಯೋಚನೆ ಮಾಡುವ ಅಪರೂಪದ ರಾಜಕಾರಣಿಗಳ ಜಾತಿಗೆ ಜೈರಾಂ ಸೇರಿದವರು.

Tap to resize

Latest Videos

ಹಾಗಾಗಿ ಪಿ.ಎನ್.ಹಸ್ಕರ್‌ಗೆ ಸಂಬಂಧಿಸಿದ ಅಪ್ರಕಟಿತ ಹಸ್ತಪ್ರತಿಗಳು, ಸರ್ಕಾರಿ ಮೆಮೋಗಳು, ಪತ್ರಗಳು, ನೋಟ್ಸ್ ಹಾಗೂ ಇತರ ರಹಸ್ಯ ದಾಖಲೆಗಳು ಪುಸ್ತಕವಾಗಿ ಹೊರ ಬಂದಿವೆ. ಪುಸ್ತಕದ ಅನಾಕರ್ಷಕ ಸಪ್ಪೆ ಮುಖಪುಟ ನೋಡಿ
ಆಸಕ್ತಿ ಕಳೆದುಕೊಳ್ಳಬೇಡಿ. ಏಕೆಂದರೆ ಈ ಬೃಹತ್ ಕೃತಿಯ ಒಳಗಿನ ಪ್ರತಿ ಪುಟವೂ ಅಮೂಲ್ಯ ಐತಿಹಾಸಿಕ ವಿಷಯಗಳಿಂದ ಖಡಕ್ಕಾಗಿವೆ. ಅಪರೂಪದ ಈ ಪುಸ್ತಕ ಪ್ರಕಟಿಸಲು ಸ್ವತಃ ಹಸ್ಕರ್ ಅವರೇ ರಮೇಶ್ ಜೊತೆ ಒಪ್ಪಂದ ಮಾಡಿಕೊಂಡಂತಿದೆ!

ಲೇಖಕ ಎಂದು ಜೈರಾಮ ರಮೇಶ್ ಅವರ ಹೆಸರಿದೆಯಾದರೂ  ಪುಸ್ತಕದೊಳಗೆ ಬಹುತೇಕ ಭಾಗಗಳಲ್ಲಿ ರಮೇಶ್ ಅವರು ನಾಟಕದ ನಿರ್ದೇಶಕನಂತೆ ತೆರೆಮರೆಯಲ್ಲೇ ಉಳಿದುಬಿಡುತ್ತಾರೆ. ಈ ಪುಸ್ತಕದ ಮಟ್ಟಿಗೆ ಅವರನ್ನು ಲೇಖಕ ಎನ್ನುವುದಕ್ಕಿಂತ ಸಂಪಾದಕ ಎನ್ನಬಹುದು. ಏಕೆ ಈ ಪುಸ್ತಕದ ಹೀರೋ ಹಸ್ಕರ್ ಇಷ್ಟು ವರ್ಷ ಹೆಚ್ಚುಕಮ್ಮಿ ಅಜ್ಞಾತರಾಗಿಯೇ ಉಳಿದಿದ್ದಾರೆ ಎಂಬುದು ನಿಜಕ್ಕೂ ಅಚ್ಚರಿಯ ವಿಷಯ. ಪುಟ ತಿರುವುತ್ತಾ ಹೋದಂತೆ ಇವರು ಭಾರತದ ನಿರ್ಮಾತೃಗಳಲ್ಲಿ ಒಬ್ಬರು ಹಾಗೂ ಜವಾಹರಲಾಲ್ ನೆಹರು ಸಾಲಿನಲ್ಲಿ ನಿಲ್ಲಬಹುದಾದವರು ಎಂಬುದು ಖಾತ್ರಿಯಾಗುತ್ತದೆ.

(ಇವರ ಮರಣವಾರ್ತೆ ಬರೆದವರೊಬ್ಬರು ನೆಹರು ಪರಂಪರೆಯ ಕೊನೆಯ ಕೊಂಡಿ ಎಂದು ಕರೆದಿದ್ದರು). ನಾಗರಿಕ ಸೇವಾ ಅಧಿಕಾರಿಯಾಗಿದ್ದರು ಎಂಬ ಕಾರಣಕ್ಕೆ ಇವರ ಹೆಸರು ಹೊರಬರಲಿಲ್ಲವೇ? ‘ನನ್ನ ಆತ್ಮೀಯ ಸ್ನೇಹಿತ ಬಿ.ಕೆ.ನೆಹರು ಅವರ ಮಾರ್ಗದಲ್ಲಿ ಹೋಗಲು ನನಗೆ ಅಹಂ ಅಡ್ಡಬಂದಿತ್ತು’ ಎಂದು ಇವರೇ ಒಮ್ಮೆ ಹೇಳಿಕೊಂಡಿದ್ದರು. ಈ ಕಾರಣಕ್ಕೆ ಅಥವಾ ಆತ್ಮಕತೆ ಬರೆಯಲಿಲ್ಲ ಎಂಬ ಕಾರಣಕ್ಕೆ ಪ್ರಸಿದ್ಧರಾಗಲಿಲ್ಲವೇ?

ಇಂದಿರಾ ಗಾಂಧಿ 1967 ರಲ್ಲಿ ಪ್ರಧಾನಿಯಾಗುತ್ತಿದ್ದಂತೆ ತಮ್ಮ ಕುಟುಂಬದ ಹಳೆಯ ಸ್ನೇಹಿತನಾಗಿದ್ದ ಇವರನ್ನು ಆಯ್ದುಕೊಂಡರು. ನಂತರ ಹಸ್ಕರ್ 1973 ರ ವರೆಗೂ ಅವರ ಜೊತೆಗಿದ್ದರು. ಅದು ಭಾರತದ ಇತಿಹಾಸದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ಕಾಲ. ಹಸ್ಕರ್ ಹೆಜ್ಜೆ ಗುರುತು ಅಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಕಾಂಗ್ರೆಸ್ ಪಕ್ಷದ ಬಗ್ಗೆ ಅವರು ಕಳಿಸಿದ ಮೆಮೋದಿಂದಾಗಿ ಇಂದಿರಾಗೆ ತನ್ನ ಪಕ್ಷದಲ್ಲಿದ್ದ ಶತ್ರುಗಳ ಮೇಲೆ ಜಯ ಸಾಧಿಸಲು ಸಾಧ್ಯವಾಯಿತು ಮತ್ತು 1969 ರಲ್ಲಿ ಕಾಂಗ್ರೆಸ್ ಒಡೆಯಿತು.

ಒಂದು ಕಾಲದಲ್ಲಿ ಕಮ್ಯುನಿಸ್ಟ್ ಆಗಿದ್ದ ಮತ್ತು ಸದಾಕಾಲ ಸಮಾಜವಾದಿಯಾಗಿದ್ದ ಹಸ್ಕರ್ ಅವರೇ ಮಾಜಿ ರಾಜರುಗಳಿಗೆ ಸರ್ಕಾರ ನೀಡುತ್ತಿದ್ದ ಹಣವನ್ನು ನಿಲ್ಲಿಸುವ, ಬ್ಯಾಂಕುಗಳು, ಕಲ್ಲಿದ್ದಲು, ತೈಲ ಸಂಸ್ಕರಣಾ ಘಟಕಗಳು ಹಾಗೂ ವಿಮಾ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸುವಂತಹ ಪ್ರಮುಖ ನೀತಿಗಳನ್ನು ಹೊಸೆದವರು. ಇರಾನ್, ಬಾಂಗ್ಲಾ ಹಾಗೂ ಚೀನಾ ಜೊತೆಗಿನ ಸಂಬಂಧ ಸುಧಾರಣೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು.

ಇಂದಿರಾ ಗಾಂಧಿಯವರ ಅತ್ಯುತ್ತಮ ವರ್ಷಗಳೆಂದರೆ ಅವರು ಹಸ್ಕರ್‌ರನ್ನು ನಂಬುತ್ತಿದ್ದ ಹಾಗೂ ಅವರ ಐಡಿಯಾಗಳನ್ನು ಜಾರಿಗೊಳಿಸುತ್ತಿದ್ದ ವರ್ಷಗಳು. ಸಾರ್ವಜನಿಕ ರಂಗದಲ್ಲಿ ಸಮಾಜವಾದವನ್ನು ಹರಡುವಂತಹ ನೀತಿಗಳು ಚರ್ಚಾಸ್ಪದವೇ ಆಗಿರಬಹುದು. ಆದರೆ, ಆ ವರ್ಷಗಳೇ ಭಾರತಕ್ಕೊಂದು ರೂಪ ಕೊಟ್ಟವು ಹಾಗೂ ಇವತ್ತಿಗೂ ಚಾಲ್ತಿಯಲ್ಲಿರುವ ಮೈಂಡ್ ಸೆಟ್ಟನ್ನು ನೀಡಿದವು ಎಂಬುದನ್ನು ಮರೆಯುವಹಾಗಿಲ್ಲ.

ಹಸ್ಕರ್ ಪ್ರಸಿದ್ಧಿಗೆ ಬಾರದಿರಲು ಬಹುಶಃ ಪ್ರಮುಖ ಕಾರಣವೆಂದರೆ ಅವರು ಯಾವಾಗಲೂ ಮಾರ್ಕ್ಸಿಸ್ಟ್ ಅಥವಾ ಸಮಾಜವಾದಿಯಂತೆ ವರ್ತಿಸುತ್ತಿರಲಿಲ್ಲ. ಅವರೊಬ್ಬ ವಿಶ್ವವಾದಿಯಾಗಿದ್ದರು. ಇಂಗ್ಲಿಷ್, ಹಿಂದಿ, ಉರ್ದು, ಪರ್ಷಿಯನ್, ತಕ್ಕಮಟ್ಟಿಗೆ ಬಂಗಾಳಿ, ಫ್ರೆಂಚ್ ಹಾಗೂ ಜರ್ಮನ್ ಕೂಡ ಮಾತನಾಡುತ್ತಿದ್ದರು. ಅವರೊಬ್ಬ ವಿದ್ವಾಂಸ ಹಾಗೂ ಕಲಾರಸಿಕ. ಸಿದ್ಧಾಂತಗಳಿಗಿಂತ ಎತ್ತರದಲ್ಲಿ ಮಾನವೀಯ ಮೌಲ್ಯಗಳನ್ನು ನೋಡುತ್ತಿದ್ದರು.

‘ಪಥೇರ್ ಪಾಂಚಾಲಿ’ ಸಿನಿಮಾದಲ್ಲಿ ಭಾರತದ ಬಡತನವನ್ನು ದಾರುಣವಾಗಿ ತೋರಿಸಿದ್ದಾರೆಂದು ಅದನ್ನು ವಿದೇಶದಲ್ಲಿ ಪ್ರದರ್ಶಿಸುವುದಕ್ಕೆ ನಿಷೇಧ ಹೇರಿದಾಗ ನೆಹರುಗೆ ದೂರು ಕೊಟ್ಟು ಸತ್ಯಜಿತ್ ರೇಗೆ ಬಿಡುಗಡೆಯ ಮಾರ್ಗ ತೋರಿಸಿದವರು ಇವರೇ. 1970 ರಲ್ಲಿ ರಿತ್ವಿಕ್ ಘಾಟಕ್‌ರನ್ನು ಪದ್ಮಶ್ರೀಗೆ ಆಯ್ಕೆ ಮಾಡಲಾಗಿತ್ತು. ಆದರೆ, ಘಾಟಕ್ ಅವರು ಗಾಂಧೀಜಿ ಬಗ್ಗೆ ಕೆಟ್ಟ ಕಮೆಂಟ್‌ಗಳನ್ನು ಮಾಡಿದ್ದರಿಂದ ಪದ್ಮಶ್ರೀ ರದ್ದುಪಡಿಸಲು ಗೃಹ ಇಲಾಖೆ ಮುಂದಾಯಿತು.

ಹಸ್ಕರ್ ಆ ಫೈಲ್ ಮೇಲೆ ಹೀಗೆ ಬರೆದರು - ‘ಅಪ್ರತಿಮ ಕಲಾವಿದರು ಸಮಾಜದಿಂದ ದೂರವಾಗಿ ಏಕಾಂತದಲ್ಲಿ ಇರುವುದು ಹೊಸತೇನಲ್ಲ. ಏಕೆಂದರೆ ಅವರಿಗೆ ತಮ್ಮ ಕಲೆಯನ್ನು ಜನರ ರುಚಿಗೆ ತಕ್ಕಂತೆ ಅಶ್ಲೀಲತೆಯ ಜೊತೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ... ಶ್ರೀ ಘಾಟಕ್ ಆಗಾಗ ಭ್ರಮಾಲೋಕಕ್ಕೆ ಹೋಗುತ್ತಿರುತ್ತಾರೆ... ಅವರು ಕೊಳಕು ಪದ ಬಳಸಿದ್ದರಿಂದ ಗಾಂಧೀಜಿಯವರ ಘನತೆಗೆ ಏನಾದರೂ ಸಮಸ್ಯೆಯಾಯಿತು ಎಂದು ಯಾರಾದರೂ ಹೇಳಿಯಾರೇ?

ಮನುಷ್ಯ ತನಗೆ ಗೊತ್ತಿಲ್ಲದ್ದೇನಾದರೂ ಹೇಳಿದರೆ ದೇವರೇ ಅವನನ್ನು ಕ್ಷಮಿಸಬೇಕೇ ಹೊರತು ದೇವರ ಸೃಷ್ಟಿಯಾಗಿರುವ ಮನುಷ್ಯ ಕ್ಷಮಿಸಲು ಸಾಧ್ಯವಿಲ್ಲ.’ ಸತೀಶ್ ಧವನ್, ಹೋಮಿ ಸೇಥ್ನಾ ಹಾಗೂ ಎಂ.ಎಸ್.ಸ್ವಾಮಿನಾಥನ್‌ರಂಥವರನ್ನು ನಾಯಕತ್ವದ ಸ್ಥಳಗಳಲ್ಲಿ ಕೂರಿಸುವ ಮೂಲಕ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲೂ ಹಸ್ಕರ್ ಮಹತ್ವದ ಪಾತ್ರ ನಿಭಾಯಿಸಿದರು. ಇಂದಿರಾ ಗಾಂಧಿಯವರನ್ನು ಬಿಟ್ಟ ನಂತರ ಅವರೇ ಯೋಜನಾ ಆಯೋಗದ ಉಪಾಧ್ಯಕ್ಷರೂ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮೊದಲ ಕುಲಪತಿಯೂ ಆದರು.

ಭಾರತಕ್ಕೆ ಅದ್ಭುತ ಅಡಿಪಾಯ ಹಾಕಿದ ದೂರದೃಷ್ಟಿಯ ಮನುಷ್ಯ ಹಸ್ಕರ್. ಕೊನೆಗೆ ಅವರು ಭ್ರಮನಿರಸನಗೊಂಡ ವ್ಯಕ್ತಿಯಾಗಿ ಇಹಲೋಕ ತ್ಯಜಿಸಿದರು. ಆ ಘಟ್ಟ ಶುರುವಾಗಿದ್ದು ಅವರು ಇಂದಿರಾಗೆ ವಿಷಯಲಂಪಟ ಪುತ್ರ ಸಂಜಯ್ ವಿರುದ್ಧ ಸಲಹೆ ನೀಡುವ ಧೈರ್ಯ ತೋರಿದಾಗ. ಹಸ್ಕರ್ ಒಬ್ಬ ಸಾಮಾನ್ಯಜ್ಞಾನವಿರುವ, ಎಲ್ಲ ದೇಶಭಕ್ತರಂತೆ ವರ್ತಿಸಿದರೆ, ಇಂದಿರಾ ಎಲ್ಲ ತಾಯಂದಿರಂತೆ ವರ್ತಿಸಿದರು. ಅದಕ್ಕಾಗಿ ಇಂದಿರಾ ಬೆಲೆ ತೆತ್ತರು.

ಇತಿಹಾಸ ಹಸ್ಕರ್‌ರನ್ನು ಹೊಗಳಿತು. ಈ ಕಡತಗಳು ಅಷ್ಟೊಂದು ದೊಡ್ಡ ದೊಡ್ಡ ವಿಷಯಗಳ ಮೇಲೆ ಆ ಪರಿ ಬೆಳಕು ಚೆಲ್ಲುತ್ತವೆಯಾದರೆ, ಪರ್ಯಾಯ ಪ್ರಧಾನಿಗಳಂತೆ ಕೆಲಸ ಮಾಡಿದ ಎಂ.ಒ.ಮಥಾಯ್, ಕಾಂತಿ ದೇಸಾಯಿ, ಆರ್.
ಕೆ.ಧವನ್, ಕ್ವಟ್ರೋಚಿ, ಚಂದ್ರಸ್ವಾಮಿ, ಬ್ರಜೇಶ ಮಿಶ್ರಾಗೆ ಸಂಬಂಧಿಸಿದ ಕಡತಗಳಲ್ಲಿ ಇನ್ನೇನೇನಿರಬಹುದು? ಯೋಚನೆ ಮಾಡುವ ರಾಜಕಾರಣಿಗಳಿಗಾಗಿ ಚಿನ್ನದ ಗಣಿಗಳು ಕಾಯುತ್ತಿವೆ.

click me!