ಸರ್ಕಾರಿ ನೌಕರರಿಗೆ ಬಂಪರ್; ವೇತನ ಶೇ. 30 ಏರಿಕೆ?

By Suvarna Web DeskFirst Published Jan 31, 2018, 9:52 AM IST
Highlights

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತಂತೆ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯ ಆರನೇ ವೇತನ ಆಯೋಗ ಇಂದು ರಾಜ್ಯ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದ್ದು, ನೌಕರರಿಗೆ ಶೇ.30 ರಿಂದ ಶೇ.35 ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ಬೆಂಗಳೂರು (ಜ.31):  ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತಂತೆ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯ ಆರನೇ ವೇತನ ಆಯೋಗ ಇಂದು ರಾಜ್ಯ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದ್ದು, ನೌಕರರಿಗೆ ಶೇ.30 ರಿಂದ ಶೇ.35 ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಬುಧವಾರ ಬೆಳಗ್ಗೆ 10.30 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಯೋಗ ತನ್ನ ವರದಿ ಸಲ್ಲಿಸಲಿದೆ. ರಾಜ್ಯ ಸರ್ಕಾರದ ಬಜೆಟ್ ಮಂಡನೆಗೆ ಕೇವಲ 16 ದಿನಗಳು ಬಾಕಿ ಇರುವಂತೆಯೇ ವೇತನ ಆಯೋಗದ ವರದಿ ಸಲ್ಲಿಕೆಯಾಗುತ್ತಿದ್ದು, ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಸಿಎಂ ಸಿದ್ದರಾಮಯ್ಯ ಸರ್ಕಾರಿ  ನೌಕರರಿಗೆ ಬಂಪರ್ ವೇತನ ಹೆಚ್ಚಳ ನೀಡುತ್ತಾರೆ ಎಂದೇ ನಿರೀಕ್ಷಿಸಲಾಗುತ್ತಿದೆ.

ರಾಜ್ಯದ ಸುಮಾರು 5.45 ಲಕ್ಷ ಸರ್ಕಾರಿ ನೌಕರರ ವೇತನ ರಚನೆ ಮತ್ತು ಅವರಿಗೆ ವಿವಿಧ ವೇತನಗಳ ಪರಿಷ್ಕರಣೆ, 11 ಲಕ್ಷ ಪಿಂಚಣಿದಾರರ ಪಿಂಚಣಿ ವೇತನ ಪರಿಷ್ಕರಣೆ ಹಾಗೂ 1.5 ಲಕ್ಷ ಸ್ಥಳೀಯ ಸಂಸ್ಥೆಗಳ, ಅನುದಾನಿತ ಶಿಕ್ಷಣ ಸಂಸ್ಥೆಗಳ ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಯ ವೇತನ ಪರಿಷ್ಕರಣೆಗಾಗಿ ಕಳೆದ 2017 ರ ಜೂನ್ 1 ರಂದು ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ಅಧ್ಯಕ್ಷತೆಯಲ್ಲಿ ಆರನೇ ವೇತನ ಆಯೋಗ ರಚಿಸಲಾಗಿತ್ತು. ನಿವೃತ್ತ ಐಎಎಸ್ ಅಧಿಕಾರಿ ಮೊಹಮದ್ ಸನಾವುಲ್ಲಾ, ರಾಜ್ಯ ಲೆಕ್ಕಪತ್ರಗಳ ಇಲಾಖೆ ನಿವೃತ್ತ ಅಧಿಕಾರಿ ಆರ್.ಎಸ್.ಪೋಂಡೆ, ಅಬಕಾರಿ ಆಯುಕ್ತ ಎಂ.ಮಂಜುನಾಥ ನಾಯ್ಕ ಆಯೋಗದ ಸದಸ್ಯರಾಗಿದ್ದರು. ಆಯೋಗವು ಜುಲೈ 27 ರಿಂದ ರಾಜ್ಯ ಸರ್ಕಾರಿ ನೌಕರರು ಹಾಗೂ ನೌಕರರ ಸಂಘಟನೆ, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಂದ ಇಡೀ ಆಡಳಿತ ವ್ಯವಸ್ಥೆಯ ಎಲ್ಲ ಆಯಾಮಗಳ ಕುರಿತಂತೆ ಮಾಹಿತಿ, ಸಲಹೆ ಮತ್ತು ದೂರುಗಳನ್ನು ಆಲಿಸಿ ವರದಿ ಸಿದ್ಧಪಡಿಸಿದೆ. ಆರಂಭದಲ್ಲಿ ಆರು  ತಿಂಗಳು ಮಾತ್ರ ಆಯೋಗಕ್ಕೆ ಕಾಲಾವಕಾಶ ನೀಡಲಾಗಿತ್ತಾದರೂ ವಿಸ್ತೃತ ಅಧ್ಯಯನ ನಡೆಸಬೇಕೆಂಬ ಕಾರಣಕ್ಕೆ ಜನವರಿ 31 ರವರೆಗೆ ಆಯೋಗದ ಅವಧಿ ವಿಸ್ತರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಸಲ್ಲಿಕೆಯಾಗುವ ವರದಿ ತೀವ್ರ ಕುತೂಹಲ ಕೆರಳಿಸಿದೆ.

ಆಯೋಗವು ಬಹುಮುಖ್ಯವಾಗಿ ರಾಜ್ಯ ಸರ್ಕಾರಿ ನೌಕರರ ವೇತನವನ್ನು ಶೇ.30 ರಿಂದ 35 ರಷ್ಟು ಹೆಚ್ಚಿಸಬೇಕು, ಪ್ರತಿ ತಿಂಗಳ ಕೊನೆಯ ಶನಿವಾರ ರಜೆ ದಿನವಾಗಿ ಘೋಷಿಸಬೇಕು ಹಾಗೂ ಆಡಳಿತದ ಹಿತದೃಷ್ಟಿಯಿಂದ ಖಾಲಿ ಇರುವ ಹುದ್ದೆಗಳಲ್ಲಿ ಹೊರಗುತ್ತಿಗೆ ನೌಕರರ ನೇಮಕಾತಿ ಮೂಲಕ ಹಾಲಿ ನೌಕರರ ಮೇಲಿನ ಒತ್ತಡ ಕಡಿಮೆ ಮಾಡಬೇಕು ಎಂಬ ಶಿಫಾರಸು ಮಾಡುವ ಸಾಧ್ಯತೆಗಳಿವೆ.

ನೌಕರರ ಬೇಡಿಕೆ ಏನು?

ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ವೇತನ ಶ್ರೇಣಿಗೆ ಸಮನಾದ ವೇತನ ಶ್ರೇಣಿ ನಿಗದಿಪಡಿಸಬೇಕು, ಇಲ್ಲವಾದರೆ ಸದ್ಯದ ಶೇ.45.25 ರಷ್ಟು ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಿ, ಅದರ ಜೊತೆಗೆ ಶೇ. 45 ರಷ್ಟು ವೇತನ ಹೆಚ್ಚಳ ಪ್ರಕಟಿಸಬೇಕು.ಇದರಿಂದ ರಾಜ್ಯ ಸರ್ಕಾರಿ ನೌಕರನ ಕನಿಷ್ಟ ವೇತನ 18 ಸಾವಿರ ರೂ.ಗಳನ್ನು ತಲುಪಲಿದೆ. ಸದ್ಯ ಕೇಂದ್ರ ಸರ್ಕಾರದ ಕನಿಷ್ಠ ವೇತನ 21 ಸಾವಿರ ರು.ಗಳಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಕನಿಷ್ಠ ಶೇ.45 ರಷ್ಟು ಹೆಚ್ಚಳ ಅಗತ್ಯವಾಗಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ಶನಿವಾರ ಮತ್ತು ಭಾನುವಾರ ರಜೆ ಘೋಷಿಸಿ, ವಾರಕ್ಕೆ ಐದು ದಿನ ಕೆಲಸದ ದಿನಗಳೆಂದು ಪರಿಗಣಿಸಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರ ನೇಮಕವನ್ನು ನಿಷೇಧಿಸಬೇಕು ಎಂಬುದು ಸರ್ಕಾರಿ ನೌಕರರ ಬಹುಮುಖ್ಯ ಬೇಡಿಕೆಗಳಾಗಿವೆ.

 

click me!