ಫಾರೂಕ್‌ ಅಬ್ದುಲ್ಲಾಗೆ ಇನ್ನು 6 ತಿಂಗಳು ಜೈಲು!

By Web DeskFirst Published Sep 17, 2019, 9:06 AM IST
Highlights

ಫಾರೂಕ್‌ ಅಬ್ದುಲ್ಲಾಗೆ ಇನ್ನು 6 ತಿಂಗಳು ಮನೆಯೇ ಜೈಲು!| ಕಠಿಣ ‘ಸಾರ್ವಜನಿಕ ಸುರಕ್ಷತಾ ಕಾಯ್ದೆ’ಯಡಿ ಕೇಸ್‌| 1978ರಲ್ಲಿ ಅಪ್ಪ ರೂಪಿಸಿದ್ದ ಕಾಯ್ದೆಯಡಿ ಪುತ್ರ ಅರೆಸ್ಟ್‌

ಶ್ರೀನಗರ[ಸೆ.17]: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ನಿಷ್ಕಿ್ರಯಗೊಂಡಾಗಿನಿಂದ ಗೃಹ ಬಂಧನದಲ್ಲಿರುವ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ವಿರುದ್ಧ ಕಠಿಣ ‘ಸಾರ್ವಜನಿಕ ಸುರಕ್ಷತಾ ಕಾಯ್ದೆ’ಯಡಿ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಫಾರೂಕ್‌ ಅವರು ಆ.5ರಿಂದ ಗೃಹ ಬಂಧನದಲ್ಲಿರುವ ಗುಪ್ಕರ್‌ ರಸ್ತೆಯ ನಿವಾಸವನ್ನು ಜೈಲು ಎಂದು ಘೋಷಣೆ ಮಾಡಿ ಸರ್ಕಾರಿ ಆದೇಶ ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ, ಯಾವುದೇ ವ್ಯಕ್ತಿಯನ್ನು ನ್ಯಾಯಾಲಯದ ವಿಚಾರಣೆಗೆ ಒಳಪಡಿಸದೇ ಆರು ತಿಂಗಳ ಕಾಲ ವಶದಲ್ಲಿಟ್ಟುಕೊಳ್ಳುವ ಅಧಿಕಾರ ಸರ್ಕಾರಕ್ಕೆ ಇದೆ. ಇದೇ ಕಾಯ್ದೆಯಡಿ ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕರಾಗಿರುವ 81 ವರ್ಷದ ಫಾರೂಕ್‌ ವಿರುದ್ಧ ಭಾನುವಾರ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಕಾಯ್ದೆಯಡಿ ವಶಕ್ಕೆ ಪಡೆಯಲಾದ ಕಾಶ್ಮೀರದ ಮೊದಲ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅವರಾಗಿದ್ದಾರೆ.

ವಿಶೇಷವೆಂದರೆ ರಾಜ್ಯದಲ್ಲಿನ ಟಿಂಬರ್‌ ಮಾಫಿಯಾಕ್ಕೆ ಕಡಿವಾಣ ಹಾಕಲು 1978ರಲ್ಲಿ ಫಾರೂಖ್‌ ಅಬ್ದುಲ್ಲಾ ಅವರ ತಂದೆ ಶೇಖ್‌ ಅಬ್ದುಲ್ಲಾ ಅವರೇ ಈ ಕಾಯ್ದೆ ರೂಪಿಸಿದ್ದರು. ಈ ಕಾಯ್ದೆಯನ್ನು ಆಗ ವಿಪಕ್ಷಗಳು ಅತ್ಯಂತ ಕಠೋರ ಎಂದು ಟೀಕಿಸಿದ್ದವು. ಇದೀಗ ಅದೇ ಕಾಯ್ದೆಯಡಿ ಫಾರೂಕ್‌ರನ್ನು ಬಂಧಿಸಲಾಗಿದೆ.

ದೇಶಾದ್ಯಂತ ರಾಷ್ಟ್ರೀಯ ಭದ್ರತಾ ಕಾಯ್ದೆ ಇರುವಂತೆ, ಕಾಶ್ಮೀರದಲ್ಲಿ ಸಾರ್ವಜನಿಕ ಸುರಕ್ಷತಾ ಕಾಯ್ದೆ ಇದೆ. ಅದರಲ್ಲಿ ಎರಡು ಭಾಗಗಳಿವೆ. ಸಾರ್ವಜನಿಕ ಸುವ್ಯವಸ್ಥೆ ಅಡಿ ಪ್ರಕರಣ ದಾಖಲಿಸಿದರೆ ಆರು ತಿಂಗಳು ಹಾಗೂ ರಾಜ್ಯದ ಭದ್ರತೆಗೆ ಬೆದರಿಕೆ ಎಂಬ ಆರೋಪದಡಿ ಕೇಸ್‌ ದಾಖಲು ಮಾಡಿದರೆ 2 ವರ್ಷಗಳ ಕಾಲ ವಿಚಾರಣೆ ಇಲ್ಲದೇ ಯಾವುದೇ ವ್ಯಕ್ತಿಯನ್ನು ವಶದಲ್ಲಿಟ್ಟುಕೊಳ್ಳಬಹುದಾಗಿದೆ.

3 ಬಾರಿ ಜಮ್ಮು-ಕಾಶ್ಮೀರ ಮುಖ್ಯಮಂತ್ರಿಯಾಗಿದ್ದ ಫಾರೂಕ್‌ ಅವರು, ಹಾಲಿ ಶ್ರೀನಗರ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದಾರೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಎಂಡಿಎಂಕೆ ನಾಯಕ ವೈಕೋ ಸುಪ್ರೀಂಕೋರ್ಟಿಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ.

ಫಾರೂಕ್‌ ಅಬ್ದುಲ್ಲಾ ಪುತ್ರ, ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ, ಮತ್ತೊಬ್ಬ ಮಾಜಿ ಸಿಎಂ ಮೆಹಬೂಬ ಮುಫ್ತಿ ಸೇರಿದಂತೆ ಕಣಿವೆ ರಾಜ್ಯದ ಹಲವಾರು ರಾಜಕಾರಣಿಗಳನ್ನು ಆ.5ರಿಂದಲೂ ಗೃಹಬಂಧನದಲ್ಲಿಡಲಾಗಿದೆ.

ಕಾಂಗ್ರೆಸ್‌ ಖಂಡನೆ:

ಫಾರೂಕ್‌ ಅಬ್ದುಲ್ಲಾ ಅವರ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದನ್ನು ಕಾಂಗ್ರೆಸ್‌ ಖಂಡಿಸಿದೆ. ಏಕತೆ ಹಾಗೂ ಸಮಗ್ರತೆಗಾಗಿ ಹೋರಾಡಿದ ನಾಯಕರನ್ನು ಜೈಲಿಗೆ ಕಳುಹಿಸುತ್ತಿರುವುದು ದೇಶದ ದೌರ್ಭಾಗ್ಯ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಟೀಕಿಸಿದ್ದಾರೆ.

click me!