ಗೂಗಲ್, ಫೇಸ್‌ಬುಕ್, ಟ್ವೀಟರ್ ಕೂಡ ಇನ್ನು ತೆರಿಗೆ ಕಟ್ಟಬೇಕು?| ತೆರಿಗೆ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಚಿಂತನೆ
ನವದೆಹಲಿ[ಆ.01]: ದೇಶದಲ್ಲಿ ಭಾರಿ ಜನಪ್ರಿಯವಾಗಿರುವ ಹಾಗೂ ಅಪಾರ ಲಾಭ ಗಳಿಸುತ್ತಿರುವ ಗೂಗಲ್, ಫೇಸ್‌ಬುಕ್ ಹಾಗೂ ಟ್ವೀಟರ್‌ನಂತಹ ಜಾಗತಿಕ ಡಿಜಿಟಲ್ ಕಂಪನಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಈ ಕಂಪನಿಗಳು ವಾರ್ಷಿಕ 20 ಕೋಟಿ ರು.ಗಿಂತ ಅಧಿಕ ಆದಾಯ ಗಳಿಸಿದರೆ ಅಥವಾ 5 ಲಕ್ಷಕ್ಕಿಂತ ಹೆಚ್ಚು ಬಳಕೆದಾರರನ್ನು ಹೊಂದಿದ್ದರೆ ತೆರಿಗೆ ಪಾವತಿಸಬೇಕು ಎಂದು ಸೂಚಿಸುವ ನಿಟ್ಟಿನಲ್ಲಿ ಆಲೋಚನೆಗಳು ನಡೆಯುತ್ತಿವೆ.
ಡಿಜಿಟಲ್ ಕಂಪನಿಗಳಿಗಾಗಿ ತೆರಿಗೆ ವಿಧಿಸುವ ಉದ್ದೇಶದಿಂದಲೇ 2018ನೇ ಸಾಲಿನ ಹಣಕಾಸು ಬಜೆಟ್‌ನಲ್ಲಿ ಗಮನಾರ್ಹ ಆರ್ಥಿಕ ಉಪಸ್ಥಿತಿ ಎಂಬ ಹೊಸ ಪರಿಕಲ್ಪನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಡೇಟಾ ಅಥವಾ ಸಾಫ್ಟ್‌ವೇರ್ ಡೌನ್‌ಲೋಡ್ ಸೇರಿದಂತೆ ಯಾವುದೇ ಸರಕು, ಸೇವೆ ಅಥವಾ ಆಸ್ತಿ ವಹಿವಾಟನ್ನು ಭಾರತೀಯೇತರ ವ್ಯಕ್ತಿಗಳು ಭಾರತದಲ್ಲಿ ನಡೆಸಿದರೆ, ಆ ವಹಿವಾಟಿನ ಮೊತ್ತ ನಿರ್ದಿಷ್ಟಮಿತಿಯನ್ನು ದಾಟಿದರೆ ಅದನ್ನು ಗಮನಾರ್ಹ ಆರ್ಥಿಕ ಉಪಸ್ಥಿತಿ ಎಂದು ಬಣ್ಣಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ.
ಭಾರತೀಯ ಗ್ರಾಹಕರಿಗೆ ಜಾಹೀರಾತುಗಳನ್ನು ನೀಡಿ ಅಪಾರ ಆದಾಯ ಹಾಗೂ ಲಾಭವನ್ನು ಗಳಿಸುವ ಡಿಜಿಟಲ್ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಅತ್ಯಲ್ಪ ತೆರಿಗೆ ಪಾವತಿಸುತ್ತಿವೆ. ಹೊಸ ಬಗೆಯ ತೆರಿಗೆಯಿಂದ ಸರ್ಕಾರದ ಬೊಕ್ಕಸಕ್ಕೂ ಹೆಚ್ಚಿನ ಆದಾಯ ಬರಲಿದೆ ಎಂದು ಹೇಳಿವೆ.