
ಮಂಗಳೂರು [ಆ.1]: ಹೊಯ್ಗೆ ಬಜಾರ್‌ನಲ್ಲಿ ಪತ್ತೆಯಾದ ಕಾಫಿ ಉದ್ಯಮಿ ಸಿದ್ಧಾರ್ಥ ಅವರ ಶವವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಬುಧವಾರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸಾವಿಗೆ ಕಾರಣವಾದ ಅಂಶಗಳು ಮರಣೋತ್ತರ ವರದಿ ವಿಶ್ಲೇಷಣೆಯಲ್ಲಿ ವರದಿ 30 ದಿನದೊಳಗೆ ಬಹಿರಂಗವಾಗಲಿದೆ.
ವೆನ್ಲಾಕ್ ಆಸ್ಪತ್ರೆ ಶವಾಗಾರದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಫೊರೇನ್ಸಿಕ್ ತಜ್ಞ ಡಾ.ಪ್ರತೀಕ್ ರಸ್ತೋಗಿ ಹಾಗೂ ವೆನ್ಲಾಕ್ ಆಸ್ಪತ್ರೆಯ ಫೆäರೇನ್ಸಿಕ್ ತಜ್ಞೆ ಡಾ.ಕೆ.ಎಸ್.ರಶ್ಮಿ ಅವರು ಶವದ ಮರಣೋತ್ತರ ಪರೀಕ್ಷೆ ನಡೆಸಿದರು. ಸುಮಾರು 2 ಗಂಟೆಗಳ ಕಾಲ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಸಾಮಾನ್ಯವಾಗಿ ಆತ್ಮಹತ್ಯೆಯಂತಹ ಪ್ರಕರಣಗಳಲ್ಲಿ ಮರಣೋತ್ತರ ಪರೀಕ್ಷೆ ನಡೆಸುವುದು ಕಡಿಮೆ. ಆದರೆ ಸಿದ್ಧಾರ್ಥರ ಮೇಲೆ ಐಟಿ ದಾಳಿ, ಅಧಿಕಾರಿಗಳ ಒತ್ತಡದ ಆರೋಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮರಣೋತ್ತರ ಪರೀಕ್ಷೆ ವರದಿ ಸಲ್ಲಿಕೆಗೆ 30 ದಿನಗಳ ಅವಧಿ ಇರುತ್ತದೆ. ಇದು ವಿಶೇಷ ಪ್ರಕರಣವಾದ ಹಿನ್ನೆಲೆಯಲ್ಲಿ ಆದಷ್ಟುಶೀಘ್ರ ಮರಣೋತ್ತರ ವರದಿಯನ್ನು ವೆನ್ಲಾಕ್ ಆಸ್ಪತ್ರೆ ಅಧೀಕ್ಷಕರಿಗೆ ಸಲ್ಲಿಸುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಮರಣೋತ್ತರ ಪರೀಕ್ಷೆ ವೇಳೆ ಅಲ್ಲಿದ್ದವರು ಈ ಸಾವು ಹೇಗೆ ಸಂಭವಿಸಿರುವ ಸಾಧ್ಯತೆ ಇದೆ ಎಂದು ಫೊರೇನ್ಸಿಕ್ ತಜ್ಞರನ್ನು ಪ್ರಶ್ನಿಸಿದ್ದರು. ಆದರೆ, ನಿಯಮ ಪ್ರಕಾರ ಅಂತಹ ಯಾವುದೇ ಮಾಹಿತಿಯನ್ನು ತಜ್ಞರು ಬಹಿರಂಗವಾಗಿ ನೀಡುವಂತಿಲ್ಲ. ಹಾಗಾಗಿ ಮರಣೋತ್ತರ ಪರೀಕ್ಷಾ ವರದಿಯಲ್ಲಿ ನೀಡುವುದಾಗಿ ತಜ್ಞರು ಉತ್ತರಿಸಿದರು ಎಂದು ಹೇಳಲಾಗಿದೆ.
ಸಿದ್ಧಾರ್ಥರ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶವದ ಹಣೆಯಲ್ಲಿ ಕಂಡುಬಂದಿರುವ ಗಾಯದ ಗುರುತು ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸ್ಪಷ್ಟವಾಗಲಿದೆ. ಈ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ.
- ಡಾ.ರಾಜೇಶ್ವರಿ ದೇವಿ, ಹಿರಿಯ ಅಧೀಕ್ಷಕಿ, ವೆನ್ಲಾಕ್ ಆಸ್ಪತ್ರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.