ಓಲಾ – ಊಬರ್’ನಲ್ಲಿ ಪ್ರಯಾಣಿಸುವವರಿಗೆ ಒಂದು ಗುಡ್ ನ್ಯೂಸ್

By Suvarna Web DeskFirst Published Jan 8, 2018, 8:29 AM IST
Highlights

ನಗರದಲ್ಲಿ ಸಂಚರಿಸುವ ಮೊಬೈಲ್ ಆ್ಯಪ್ ಆಧಾರಿತ ಓಲಾ, ಉಬರ್ ಸೇರಿದಂತೆ ಹಲವು ಕಂಪನಿಗಳ ಟ್ಯಾಕ್ಸಿಗಳಿಗೆ ಸಾರಿಗೆ ಇಲಾಖೆಯು ಕನಿಷ್ಠ ಮತ್ತು ಗರಿಷ್ಠ ಪ್ರಯಾಣ ದರ ನಿಗದಿಗೊಳಿಸಿದ್ದು, ಶೀಘ್ರದಲ್ಲೇ ಸರ್ಕಾರ ನೂತನ ದರ ಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ

ಬೆಂಗಳೂರು (ಜ.08): ನಗರದಲ್ಲಿ ಸಂಚರಿಸುವ ಮೊಬೈಲ್ ಆ್ಯಪ್ ಆಧಾರಿತ ಓಲಾ, ಉಬರ್ ಸೇರಿದಂತೆ ಹಲವು ಕಂಪನಿಗಳ ಟ್ಯಾಕ್ಸಿಗಳಿಗೆ ಸಾರಿಗೆ ಇಲಾಖೆಯು ಕನಿಷ್ಠ ಮತ್ತು ಗರಿಷ್ಠ ಪ್ರಯಾಣ ದರ ನಿಗದಿಗೊಳಿಸಿದ್ದು, ಶೀಘ್ರದಲ್ಲೇ ಸರ್ಕಾರ ನೂತನ ದರ ಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ.

ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಟ್ಯಾಕ್ಸಿ ಬಳಕೆದಾರರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಟ್ಯಾಕ್ಸಿ ಸೇವಾ ಕಂಪನಿಗಳು ಹೆಚ್ಚಿನ ದರ ವಸೂಲಿ ಮಾಡುತ್ತಿವೆ ಎಂದು ಪ್ರಯಾಣಿಕರು ಸಾರಿಗೆ ಇಲಾಖೆಗೆ ದೂರು ನೀಡಿದ್ದರು.

ಅಂತೆಯೆ ಕಂಪನಿಗಳು ಕಡಿಮೆ ಕಮಿಷನ್ ನೀಡುತ್ತಿವೆ ಎಂದು ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರು ಆರೋಪಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಾರಿಗೆ ಇಲಾಖೆ ಸಚಿವರು, ಟ್ಯಾಕ್ಸಿಗಳಿಗೆ ಕನಿಷ್ಠ ಮತ್ತು ಗರಿಷ್ಠ ದರ ನಿಗದಿಗೆ ಸಾರಿಗೆ ಆಯುಕ್ತರಿಗೆ ಸೂಚಿಸಿದ್ದರು. ಇದೀಗ ಸಾರಿಗೆ ಇಲಾಖೆಯು ದರ ನಿಗದಿ ಮಾಡಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.

ಇದಕ್ಕೂ ಮೊದಲು ದರ ನಿಗದಿ ಸಂಬಂಧ ಸಾರಿಗೆ ಇಲಾಖೆಯು ಎಸಿ ಟ್ಯಾಕ್ಸಿಗೆ ಪ್ರತಿ ಕಿ.ಮೀ.ಕನಿಷ್ಠ 12 ರು. ಹಾಗೂ ನಾನ್ ಎಸಿಗೆ ಪ್ರತಿ ಕಿ.ಮೀ.ಗೆ ಕನಿಷ್ಠ 10 ರು. ನಿಗದಿಗೊಳಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಟ್ಯಾಕ್ಸಿ ಚಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಟ್ಯಾಕ್ಸಿ ಚಾಲಕರು ಮತ್ತು ಕಂಪನಿಗಳ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸುವಂತೆ ಸರ್ಕಾರ ಸೂಚಿಸಿತ್ತು.

ಅದರಂತೆ ಈಗ ಸಾರಿಗೆ ಇಲಾಖೆ ಹೊಸ ಪ್ರಸ್ತಾವನೆ ಸಿದ್ಧಪಡಿಸಿದ್ದು, ಸಾರಿಗೆ ಸಚಿವರು ಅನುಮೋದಿಸಿದ್ದಾರೆ. ಹಾಗಾಗಿ ಶೀಘ್ರದಲ್ಲೇ ನೂತನ ದರ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಸಾರಿಗೆ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.

click me!