ಕೆಎಸ್ಆರ್ಟಿಸಿ ನೌಕರರಿಗೆ ಗುಡ್ ನ್ಯೂಸ್

By Suvarna Web DeskFirst Published Dec 30, 2017, 10:07 AM IST
Highlights

ಹೊಸ ವರ್ಷದ ಕೊಡುಗೆಯಾಗಿ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳ ನಿವೃತ್ತ ನೌಕರರು ಹಾಗೂ ಅಧಿಕಾರಿಗಳಿಗೆ ನಿಗಮದ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಬಸ್ ಪಾಸ್ ಮತ್ತು ಅಧಿಕಾರಿಗಳಿಗೆ ರಾಜಹಂಸ ಮತ್ತು ಹವಾನಿಯಂತ್ರಿತ ಬಸ್‌ಗಳಲ್ಲಿ ಶೇ.50ರಷ್ಟು ರಿಯಾಯಿತಿ ದರದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು (ಡಿ.30): ಹೊಸ ವರ್ಷದ ಕೊಡುಗೆಯಾಗಿ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳ ನಿವೃತ್ತ ನೌಕರರು ಹಾಗೂ ಅಧಿಕಾರಿಗಳಿಗೆ ನಿಗಮದ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಬಸ್ ಪಾಸ್ ಮತ್ತು ಅಧಿಕಾರಿಗಳಿಗೆ ರಾಜಹಂಸ ಮತ್ತು ಹವಾನಿಯಂತ್ರಿತ ಬಸ್‌ಗಳಲ್ಲಿ ಶೇ.50ರಷ್ಟು ರಿಯಾಯಿತಿ ದರದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಕಳೆದ ಬುಧವಾರ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿ ನಿರ್ದೇಶಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಸೌಲಭ್ಯ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯವ್ಯ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಸೇರಿದ 1988 ಜ.1 ಮತ್ತು ನಂತರದಲ್ಲಿ ನಿವೃತ್ತಿಯಾದ ಮತ್ತು ಮುಂದೆ ನಿವೃತ್ತಿಯಾಗುವ ನೌಕರರ ಮತ್ತು ಆತನ ಪತ್ನಿ ಅಥವಾ ಪತಿಗೆ ಮಾತ್ರ ಅನ್ವಯವಾಗಲಿದೆ.

 ಇದರ ಪ್ರಕಾರ ವಾರ್ಷಿಕ 500 ರು. (ಸಂಸ್ಕರಣಾ ವೆಚ್ಚ) ಪಾವತಿಸಿ ಉಚಿತ ಬಸ್ ಪಾಸ್ ಪಡೆದು ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಸಂಚರಿಸಬಹುದು. ಅಂತೆಯೆ ನಾಲ್ಕು ನಿಗಮಗಳ ನಿವೃತ್ತ ಅಧಿಕಾರಿಗಳಿಗೆ (ದರ್ಜೆ 2 ಮತ್ತು ಮೇಲ್ಪಟ್ಟು) ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣದ ಜೊತೆಗೆ ನಿವೃತ್ತ ನೌಕರರಿಗೆ ಮತ್ತು ಅವರ ಪತ್ನಿ ಅಥವಾ ಪತಿಗೆ ರಾಜಹಂಸ ಮತ್ತು ಹವಾನಿಯಂತ್ರಿತ ಬಸ್‌ಗಳಲ್ಲಿ ಟಿಕೆಟ್ ದರದ ಶೇ.50 ರಿಯಾಯಿತಿ ನೀಡಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಸಾರಿಗೆ ಸೌಲಭ್ಯಕ್ಕೆ ಕ್ರಮ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ 7.71 ಲಕ್ಷ ಮೌಲ್ಯದ 2.05 ಎಕರೆ ನಿವೇಶನ ಹಾಗೂ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಅರಣ್ಯ ಇಲಾಖೆಗೆ ಸೇರಿದ 1.06 ಎಕರೆ ನಿವೇಶನ ಮತ್ತು ಪಟ್ಟಣ ಪಂಚಾಯಿತಿಗೆ ಸೇರಿದ 13 ಗುಂಟೆ ನಿವೇಶನ ಸೇರಿದಂತೆ ಒಟ್ಟು 42.55 ಲಕ್ಷ ರು. ಭರಿಸಿ ಪಡೆಯಲು ತೀರ್ಮಾನಿಸಲಾಗಿದೆ ಎಂದು ನಿಗಮದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

click me!