
ಬೆಂಗಳೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2013-14 ಹಾಗೂ 2014-15ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದು ಪದವಿ ಹಾಗೂ ಸ್ನಾತಕೋತ್ತರ ತರಗತಿಗಳಲ್ಲಿ ಉತ್ತೀರ್ಣರಾಗಿರುವವರಿಗೆ ಮುಂದಿನ ವ್ಯಾಸಂಗ, ನೇಮಕಾತಿ ಹಾಗೂ ಮುಂಬಡ್ತಿಗೆ ಪರಿಗಣಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ಕಳೆದ ಮೂರು ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿದ್ದ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಸಂತಸ ತಂದಿದೆ.
ಈ ಆದೇಶವು ಯುಜಿಸಿ ಮಾನ್ಯತೆ ಹೊಂದಿರುವ ತಾಂತ್ರಿಕೇತರ ಹಾಗೂ ರಾಜ್ಯದೊಳಗೆ ವ್ಯಾಸಂಗ ಮಾಡಿರುವ ಇನ್‌ಹೌಸ್ ಕೋರ್ಸ್‌ಗಳಿಗೆ ಮಾತ್ರ ಅನ್ವಯವಾಗಲಿದೆ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) 2015ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಮಾನ್ಯತೆ ರದ್ದುಗೊಳಿಸುವ ಪೂರ್ವದಲ್ಲಿ ಪ್ರವೇಶಾತಿ ಪಡೆದು ಉತ್ತೀರ್ಣರಾಗಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರಗಳನ್ನು ಪಡೆಯದೇ ಇರುವ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ, ಅಂಕಪಟ್ಟಿಗಳನ್ನು ವಿತರಿಸಬೇಕು. ತಾಂತ್ರಿಕೇತರ ಕೋರ್ಸ್‌ಗಳ ಹಲವು ಬ್ಯಾಚ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಹಾಗೂ ಕೋರ್ಸ್‌ಗಳನ್ನು ಅಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೂ ಸಹ ವ್ಯಾಸಂಗ ಮುಂದುವರಿಸಲು, ಪದವಿ ಪ್ರಮಾಣ ಪತ್ರಗಳನ್ನು ವಿತರಿಸಲು ಈ ನಿಯಮಾವಳಿಗಳು ಅನ್ವಯವಾಗಲಿವೆ ಎಂದು ಆದೇಶದಲ್ಲಿ ತಿಳಿಸಿದೆ.
ರತ್ನಪ್ರಭಾ ವರದಿ ಅನ್ವಯ ಆದೇಶ:
ಕೆಎಸ್‌ಒಯು ಮಾನ್ಯತೆ ರದ್ದತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತ ಕಾಪಾಡುವ ಸಂಬಂಧ ಆಗಿನ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ಕೆ. ರತ್ನಪ್ರಭಾ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿ ರಚಿಸಿತ್ತು. ಸಮಿತಿಯು ನವೆಂಬರ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಸಮಿತಿ ರಚನೆ ಪ್ರಶ್ನಿಸಿ ರಾಜ್ಯ ಮುಕ್ತ ವಿವಿ ಶಿಕ್ಷಕೇತರ ನೌಕರರ ಸಂಘವು ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿತ್ತು.
ನಂತರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮಿತಿ ವರದಿಯನ್ವಯ ಪ್ರಮಾಣ ಪತ್ರಗಳನ್ನು ವಿತರಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ರತ್ನಪ್ರಭಾ ವರದಿ ಶಿಫಾರಸುಗಳನ್ನು ಅನುಷ್ಠಾನ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಎರಡು ವರ್ಷದ ಅವಧಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕೆಎಸ್‌ಒಯುನಲ್ಲಿ ವ್ಯಾಸಂಗ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.