ಚಿನ್ನದ ಕಳ್ಳ ಸಾಗಣೆಗೂ ಬಂದಿದೆ ಹೊಸ ಹೊಸ ಐಡಿಯಾ!

By Suvarna Web DeskFirst Published Nov 13, 2017, 12:55 PM IST
Highlights

ತಮಿಳುನಾಡು ಮತ್ತು ಕೇರಳದಲ್ಲಿ ಚಿನ್ನಕ್ಕೆ ಬೇಡಿಕೆ ಜಾಸ್ತಿಯಾಗಿದೆ. ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಚಿನ್ನಕ್ಕೆ ಸ್ಥಳೀಯ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಭಾರತದಲ್ಲಿ ಚಿನ್ನದ ಮೇಲೆ ಶೇ.13ರಷ್ಟು ಸುಂಕ ಮತ್ತು ಜಿಎಸ್‌ಟಿಗೆ ಹೋಲಿಸಿದರೆ ಈ ದೇಶಗಳಲ್ಲಿ ಚಿನ್ನಕ್ಕೆ ಅತ್ಯಲ್ಪ ತೆರಿಗೆ ವಿಧಿಸಲಾಗುತ್ತದೆ.

ಚೆನ್ನೈ(ನ.13): ಪ್ಯಾಂಟಿನ ಕಿಸೆಯಲ್ಲಿ, ಬೂಟಿನ ಒಳಗಡೆ, ಒಳ ಉಡುಪಿನಲ್ಲಿ, ದೇಹದ ಒಳಗೆ ಚಿನ್ನವನ್ನು ಬಚ್ಚಿಟ್ಟು ಕಳ್ಳತನ ಮಾಡುವುದು ಹಳೆಯದಾಯಿತು. ಇದೀಗ ಸ್ಕ್ಯಾನರ್‌ಗಳಿಂದಲೂ ಪತ್ತೆ ಮಾಡಲಾಗದಂತೆ ವಿವಿಧ ರೂಪದಲ್ಲಿ ಚಿನ್ನದ ಸಾಗಣೆ ನಡೆಯುತ್ತಿರುವುದನ್ನು ವಿಮಾನ ನಿಲ್ದಾಣದ ಸುಂಕ ಅಧಿಕಾರಿಗಳು ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ ಸಿಬ್ಬಂದಿ ಪತ್ತೆಹಚ್ಚಿದ್ದಾರೆ.

ಚಿನ್ನವನ್ನು ನೇರವಾಗಿ ಸಾಗಿಸಿದರೆ ಅದು ತಪಾಸಣೆ ವೇಳೆ ಸ್ಕ್ಯಾನರ್‌ನಲ್ಲಿ ಪತ್ತೆಯಾಗುತ್ತದೆ ಎಂಬ ಕಾರಣಕ್ಕೆ ಚಿನ್ನವನ್ನು ಪುಡಿ ಮಾಡಿ ಅಥವಾ ರಾಸಾಯನಿಕದಲ್ಲಿ ಕರಗಿಸಿ ಸಾಗಿಸುವ ವಿಧಾನವನ್ನು ಕಂಡುಕೊಂಡಿರುವುದು ಇತ್ತೀಚೆಗೆ ಚೆನ್ನೈ, ತಿರುಚ್ಚಿ, ಕೊಯಮತ್ತೂರು, ಮದುರೈ ವಿಮಾನಲ್ದಾಣದಲ್ಲಿ ತಪಾಸಣೆಯ ವೇಳೆ ಪತ್ತೆಯಾಗಿದೆ. ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಕಳೆದ ವಾರ ಸುಂಕ ಇಲಾಖೆಯ ಗುಪ್ತಚರ ಘಟಕ ವ್ಯಕ್ತಿಯೊಬ್ಬನನ್ನು ತಪಾಸಣೆ ನಡೆಸಿದ ಸಂದರ್ಭದಲ್ಲಿ 878 ಗ್ರಾಂ ಚಿನ್ನವನ್ನು ಪುಡಿಮಾಡಿ ಅದರಿಂದ ಪೇಸ್ಟ್ ತಯಾರಿಸಿ ಕಾಲಿಗೆ ಬಳಿದುಕೊಂಡಿದ್ದನ್ನು ಪತ್ತೆಹಚ್ಚಲಾಗಿದೆ. ಚಿನ್ನದಪುಡಿಯ ಲೇಪನವನ್ನು ಆತ ಪ್ಲಾಸ್ಟರ್'ನಿಂದ ಮುಚ್ಚಿಕೊಂಡಿದ್ದ. ಹೀಗಾಗಿ ಅನುಮಾನ ಮೂಡುವುದು ಶಕ್ಯವೇ ಇರಲಿಲ್ಲ. ಇನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುಂಕ ಅಧಿಕಾರಿಗಳು ಚಿನ್ನವನ್ನು ನೈಟ್ರಿಕ್ ಮತ್ತು ಹೈಡ್ರೋಕ್ಲೋರಿಕ್ ಆ್ಯಸಿಡ್‌ನ ಮಿಶ್ರಣದಲ್ಲಿ ಕರಗಿಸಿ ಸಾಗಿಸುತ್ತಿದ್ದ ಎರಡು ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.

ಅಕ್ವಾರೇಜಿಯಾ ಎಂದು ಕರೆಯುವ ಈ ದ್ರವರೂಪದ ಚಿನ್ನವನ್ನು ಜನಪ್ರಿಯ ಡಿಟರ್ಜೆಂಟ್ ಬಾಟಲಿಗಳಲ್ಲಿ ತುಂಬಿ ಸಾಗಿಸಲಾಗುತ್ತಿತ್ತು. ಈ ರೀತಿ ಹೊಸ ವಿಧಾನದ ಮೂಲಕ ಸಾಗಿಸಿದ ಚಿನ್ನ ಸಣ್ಣ ಪ್ರಮಾಣದ್ದಾಗಿದೆ. ಸುಮಾರು 20 ಲಕ್ಷ ರು. ಮೌಲ್ಯದವರೆಗಿನ ಚಿನ್ನ ಈ ರೀತಿ ಕಳ್ಳಸಾಗಣೆಯಾಗುತ್ತದೆ. ಚಿನ್ನದ ಸ್ಮಗ್ಲಿಂಗ್‌ಗೆ ಚಿನ್ನದ ಮೇಲಿನ ವ್ಯಾಮೋಹ ಮತ್ತು ಭಾರತದಲ್ಲಿನ ಕಟ್ಟುನಿಟ್ಟಿನ ಕಾನೂನು. ಭಾರತದಲ್ಲಿ ವಿದೇಶದಿಂದ ಚಿನ್ನ ಸಾಗಣೆಗೆ ಕಠಿಣ ನಿರ್ಬಂಧನೆಗಳನ್ನು ವಿಧಿಸಲಾಗಿದ್ದು, ವಿದೇಶದಲ್ಲಿ 6 ತಿಂಗಳು ನೆಲೆಸಿದವರು ಮಾತ್ರ 1 ಕೆ.ಜಿ. ಚಿನ್ನವನ್ನು ತರಬಹುದಾಗಿದೆ. ಘೋಷಿಸಿಕೊಂಡು ತರುವ ಈ ಚಿನ್ನಕ್ಕೆ ಶೇ.10ರಷ್ಟು ವಿದೇಶಿ ವಿನಿಮಯ ತೆರಿಗೆ ನೀಡಬೇಕು. ವಿದೇಶದಲ್ಲಿ ನೆಲಸದವರು ತರುವ ಘೋಷಿತ ಚಿನ್ನಕ್ಕೆ ಶೇ.3ರಷ್ಟು ಜಿಎಸ್‌ಟಿ ಸೇರಿ ಶೇ.36ರಷ್ಟು ಸುಂಕವನ್ನು ನೀಡಬೇಕು.

ತಮಿಳುನಾಡು ಮತ್ತು ಕೇರಳದಲ್ಲಿ ಚಿನ್ನಕ್ಕೆ ಬೇಡಿಕೆ ಜಾಸ್ತಿಯಾಗಿದೆ. ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಚಿನ್ನಕ್ಕೆ ಸ್ಥಳೀಯ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಭಾರತದಲ್ಲಿ ಚಿನ್ನದ ಮೇಲೆ ಶೇ.13ರಷ್ಟು ಸುಂಕ ಮತ್ತು ಜಿಎಸ್‌ಟಿಗೆ ಹೋಲಿಸಿದರೆ ಈ ದೇಶಗಳಲ್ಲಿ ಚಿನ್ನಕ್ಕೆ ಅತ್ಯಲ್ಪ ತೆರಿಗೆ ವಿಧಿಸಲಾಗುತ್ತದೆ. ಕಳ್ಳಸಾಗಣೆ ಮಾಡಲಾದ ಚಿನ್ನದ ಒಟ್ಟಾರೆ ಲಾಭವನ್ನು ಲೆಕ್ಕಹಾಕಿದರೆ ಅದು ಚಿನ್ನಾಭರಣ ಮಾರಾಟಗಾರರಿಗಿಂತ ಶೇ.50ರಷ್ಟು ಅಧಿಕವಾಗಿದೆ ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳ್ಳಸಾಗಣೆ ವಿಧಾನಗಳು

ಚಿನ್ನದ ಹಲ್ಲು, ಶರ್ಟ್ ಅಥವಾ ಪ್ಯಾಂಟ್‌ಗೆ ಚಿನ್ನ ಗುಂಡಿ, ಹಾರ್ಡ್‌ವೇರ್ ಉತ್ಪನ್ನಗಳ ಒಳಗೆ ಯಾವುದಾದರೂ ಉಪಕರಣದ ರೂಪದಲ್ಲಿ, ಜೇನುತುಪ್ಪದಲ್ಲಿ ಕರಗಿಸಿ, ಹೊಟ್ಟೆಯಲ್ಲಿ ಅಡಗಿಸಿ ಕೊಟ್ಟುಕೊಂಡು, ಶೂ ಅಥವಾ ಚಪ್ಪಲಿಯಲ್ಲಿ ಅಡಗಿಸಿ, ಒಳವಸ್ತ್ರದಲ್ಲಿ ಅಡಗಿಸಿ, ಬ್ಯಾಗ್‌ನ ಗುಂಡಿ ಅಥವಾ ಬ್ಯಾಗ್‌ನ ಒಳಚೀಲದಲ್ಲಿ ಸೇರಿಸಿ, ಗ್ರೀಸ್‌ಗೆ ಮಿಕ್ಸ್ ಮಾಡಿ, ಆಸಿಡ್‌ನಲ್ಲಿ ಕರಗಿಸಿ ತರಲಾಗುತ್ತದೆ.

ಆ್ಯಸಿಡ್‌ನಲ್ಲಿ ಕರಗಿಸಿ ಸ್ಮಗ್ಲಿಂಗ್

ನೈಟ್ರಿಕ್ ಮತ್ತು ಹೈಡ್ರೋಕ್ಲೋರಿಕ್ ಆ್ಯಸಿಡ್‌ನ ಮಿಶ್ರಣದಲ್ಲಿ ಚಿನ್ನ ಕರಗಿಸಲಾಗುತ್ತದೆ. ಆಕ್ವಾ ರೆಜಿಯಾ ಎಂದು ಕರೆಯುವ ಈ ದ್ರವ ರೂಪದ ಚಿನ್ನವನ್ನು ಸೋಪಿನ ಲೇಬಲ್ ಹಾಕಿ ಬಾಟಲಿಗಳಲ್ಲಿ ಸಾಗಿಸಲಾಗುತ್ತದೆ. ಸ್ಲಗ್ಲಿಂಗ್ ಬಳಿಕ ಈ ದ್ರವವನ್ನು ಕಾಯಿಸಿದಾಗ, ದ್ರವ ಆವಿಯಾಗಿ, ಚಿನ್ನ ಪೌಡರ್ ರೂಪದಲ್ಲಿ ಉಳಿದುಕೊಳ್ಳುತ್ತದೆ. ನಂತರ ಅದನ್ನು ಗುಂಡಿನ ರೂಪಕ್ಕೆ ಮಾರ್ಪಡಿಸಲಾಗುತ್ತದೆ. ಹೀಗೆ ಇಡೀ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ 12-15 ತಾಸು ಬೇಕು.

click me!