ಶಿಮುಲ್‌ ಚುನಾವಣೆಯಲ್ಲಿ ಚಿನ್ನದುಂಗುರ, ಬೆಳ್ಳಿ ಆಮಿಷ!

By Web DeskFirst Published Apr 30, 2019, 7:44 AM IST
Highlights

ಶಿಮುಲ್‌ ಚುನಾವಣೆಯಲ್ಲಿ ಚಿನ್ನದುಂಗುರ, ಬೆಳ್ಳಿ ಆಮಿಷ!| ಹಾಲು ಒಕ್ಕೂಟ ಚುನಾವಣೆಗೆ 1 ಕೋಟಿ ರು.ವರೆಗೂ ವೆಚ್ಚ?| 14 ನಿರ್ದೇಶಕರನ್ನು ಆಯ್ಕೆ ಮಾಡಲು 835 ಮತದಾರರು| 14 ಸ್ಥಾನ: ಶಿವಮೊಗ್ಗ ಹಾಲು ಒಕ್ಕೂಟ ನಿರ್ದೇಶಕರ ಸಂಖ್ಯೆ| 31 ಮಂದಿ: ನಿರ್ದೇಶಕರಾಗಲು ಕಣದಲ್ಲಿದ್ದ ಅಭ್ಯರ್ಥಿಗಳು| 835 ಜನ: ನಿರ್ದೇಶಕರನ್ನು ಆರಿಸಲು ಒಟ್ಟು ಮತದಾರರು

ಶಿವಮೊಗ್ಗ[ಏ.30]: ಹಾಲು ಒಕ್ಕೂಟದ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಭಾರೀ ಗಿಫ್ಟ್‌ಗಳ ಆಮಿಷವೊಡ್ಡುವುದು ಗುಟ್ಟಾಗಿಯೇನೂ ಉಳಿದಿಲ್ಲ. ಅದರಂತೆ ಸೋಮವಾರ ನಡೆದ ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲೂ ಮತದಾರರಿಗೆ ಬಂಗಾರದ ಉಂಗುರ, ಓಲೆ, ಬೆಳ್ಳಿಯ ನಾಣ್ಯದಂಥ ದುಬಾರಿ ಉಡುಗೊರೆಗಳ ಆಮಿಷ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಶಿವಮೊಗ್ಗ ಹಾಲು ಒಕ್ಕೂಟ(ಶಿಮುಲ್‌ಗೆ)ದ ಒಟ್ಟು 14 ಸ್ಥಾನಗಳಿಗೆ (ಒಟ್ಟು 18 ಇದರಲ್ಲಿ ಮೂವರು ಅಧಿಕಾರಿಗಳು, ಒಬ್ಬ ಸದಸ್ಯ ಸರ್ಕಾರದಿಂದ ನಾಮ ನಿರ್ದೇಶಿತ) ನಡೆದ ಚುನಾವಣೆಯಲ್ಲಿ ಒಟ್ಟು 31 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಮತದಾರರನ್ನು ತಮ್ಮತ್ತ ಸೆಳೆಯಲು ಪೈಪೋಟಿಗೆ ಇಳಿದ ವಿವಿಧ ಬಣಗಳು ಒಕ್ಕೂಟದ 835 ಮತದಾರರನ್ನು ಓಲೈಸಲು ಭಾರೀ ಆಮಿಷಗಳನ್ನೊಡ್ಡಿವೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಮತದಾರರಿಗೆ ಬಂಗಾರದ ಉಂಗುರ, ಕಿವಿಯೋಲೆ, ಬೆಳ್ಳಿ ನಾಣ್ಯ, ತಂಬಿಗೆ ಹಾಗೂ 20 ಸಾವಿರ ನಗದಿನ ಆಮಿಷ ನೀಡಲಾಗಿದೆ. ಬೆಳಗ್ಗೆ ಮಾಚೇನಹಳ್ಳಿಯಲ್ಲಿರುವ ಶಿವಮೊಗ್ಗ ಹಾಲು ಒಕ್ಕೂಟ ಕೇಂದ್ರ ಕಚೇರಿಯಲ್ಲಿ ಚುನಾವಣೆ ನಡೆಯುತ್ತಿದ್ದ ವೇಳೆ ಈ ಆಫರ್‌ಗಳ ಮಾತುಗಳದ್ದೇ ಬಿಸಿಬಿಸಿ ಚರ್ಚೆ ನಡೆಯುತ್ತಿತ್ತು. ಅವರು ಇಷ್ಟುಕೊಟ್ಟರಂತೆ, ಇವರು ಅಷ್ಟುಕೊಟ್ಟರಂತೆ ಎಂಬುದೇ ಚರ್ಚೆಯ ಪ್ರಮುಖ ವಿಷಯವಾಗಿತ್ತು. ಕೆಲವರ ಪ್ರಕಾರ ಪ್ರತಿ ಮತದಾರರ ಮೇಲೆ ಸರಿ ಸುಮಾರು 1 ಲಕ್ಷ ರುಪಾಯಿ ಖರ್ಚು ಮಾಡಲಾಗಿದೆ.

ಪ್ರತಿಯೊಬ್ಬ ಅಭ್ಯರ್ಥಿ ಗೆಲ್ಲಲು ಸುಮಾರು 150 ಮತಗಳು ಪಡೆಯಬೇಕಿತ್ತು. ಇದಕ್ಕಾಗಿ ಲಕ್ಷಗಟ್ಟಲೆ ಹಣ ವೆಚ್ಚ ಮಾಡಿರುವುದು ಸಹಕಾರಿ ವಲಯದಲ್ಲಿ ಅಚ್ಚರಿ ಮತ್ತು ವಿಷಾದ ಹುಟ್ಟುಹಾಕಿದೆ.

ಮಾರಾಮಾರಿ: ಆಫರ್‌ಗಳ ವಿಚಾರ ಚರ್ಚೆಗೆ ಬರುತ್ತಿದ್ದಂತೆ ಕೆಲ ಮತದಾರರು ಮಾತ್ರ ತಮಗೆ ಆ ವಸ್ತು ಸಿಕ್ಕಿಲ್ಲ, ಹಣ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದುದೂ ಕಂಡು ಬಂತು. ಇನ್ನೊಂದೆಡೆ ಇದೇ ವಿಚಾರವಾಗಿ ಒಕ್ಕೂಟದ ಕಚೇರಿ ಎದುರುಗಡೆಯೇ ವಾಗ್ಯುದ್ಧ ಆರಂಭಗೊಂಡು ನಂತರ ಅದು ಕೈಕೈ ಮಿಲಾಯಿಸುವವರೆಗೂ ಹೋದ ಪ್ರಸಂಗವೂ ನಡೆಯಿತು. ಈ ಚುನಾವಣೆಯಲ್ಲಿ ಕನಿಷ್ಠ 50 ಲಕ್ಷದಿಂದ ಕೋಟಿ ರುಪಾಯಿ ವರೆಗೂ ಖರ್ಚು ಆಗಿರಬಹುದು ಎಂದು ಸದ್ಯ ಚರ್ಚೆಯಾಗುತ್ತಿರುವ ವಿಚಾರ.

ಮೈತ್ರಿಗೆ ಗೆಲುವು, ಬಿಜೆಪಿಗೆ ಸೋಲು

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳನ್ನೊಳಗೊಂಡ ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಮಂಡಳಿ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಆರ್‌.ಎಂ. ಮಂಜುನಾಥಗೌಡರ (ಮೈತ್ರಿಕೂಟ) ಬಣ ಜಯಭೇರಿ ಬಾರಿಸಿದೆ. ಒಕ್ಕೂಟದ ಒಟ್ಟು 14 ಸ್ಥಾನಗಳಿಗೆ ಸೋಮವಾರ ಚುನಾವಣೆಯಲ್ಲಿ ಮಂಜುನಾಥಗೌಡರ ಬಣದಿಂದ 11 ಮಂದಿ ಗೆದ್ದರೆ, ಶಿವಮೊಗ್ಗ, ಸಾಗರ ಮತ್ತು ಚಿತ್ರದುರ್ಗದಲ್ಲಿ ಬಿಜೆಪಿ ಬೆಂಬಲಿತ ತಲಾ ಒಬ್ಬ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಒಟ್ಟಾರೆ ಬಿಜೆಪಿಯ ಸಹಕಾರ ಭಾರತಿಗೆ ತೀವ್ರ ಮುಖಭಂಗ ಉಂಟಾಗಿದೆ.

click me!