ಹೊಸ ವರ್ಷ ಜನಿಸಿದ 24 ಹೆಣ್ಣು ಮಗುವಿಗೆ ತಲಾ 5 ಲಕ್ಷ ಗಿಫ್ಟ್‌!

By Web DeskFirst Published Dec 27, 2018, 9:50 AM IST
Highlights

2019ರ ಜನವರಿ 1 ರಂದು (ಡಿಸೆಂಬರ್‌ 31ರ ಮಧ್ಯರಾತ್ರಿ 12ರ ನಂತರ) ಬಿಬಿಎಂಪಿಯ 24 ಹೆರಿಗೆ ಆಸ್ಪತ್ರೆಗಳಲ್ಲಿ ಜನಿಸಿದ ಮೊದಲ ಹೆಣ್ಣುಮಕ್ಕಳಿಗೆ ತಲಾ 5 ಲಕ್ಷ ಠೇವಣಿ ಇಡಲಾಗುವುದು ಎಂದು ಮೇಯರ್ ಘೋಷಿಸಿದ್ದಾರೆ. 

ಬೆಂಗಳೂರು : ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 24 ಹೆರಿಗೆ ಆಸ್ಪತ್ರೆಗಳಲ್ಲಿ 2019ರ ಹೊಸ ವರ್ಷದ ದಿನ ಸಹಜ ಹೆರಿಗೆ ಮೂಲಕ ಜನಿಸಿದ ಮೊದಲ 24 ಹೆಣ್ಣುಮಕ್ಕಳಿಗೆ ತಲಾ 5 ಲಕ್ಷ ಠೇವಣಿ ಇಡುವುದಾಗಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಘೋಷಿಸಿದ್ದಾರೆ.

ಪಾಲಿಕೆ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಮೇಯರ್‌ ಸಂಪತ್‌ರಾಜ್‌ ಅವರು ಹೊಸ ವರ್ಷದ ದಿನ ಪಾಲಿಕೆಯ ಯಾವುದೇ ಹೆರಿಗೆ ಆಸ್ಪತ್ರೆಯಲ್ಲಿ ಜನಿಸಿದ ಮೊದಲ ಹೆಣ್ಣು ಮಗುವಿಗೆ ‘ಪಿಂಕ್‌ ಬೇಬಿ’ ಯೋಜನೆಯಡಿ 5 ಲಕ್ಷ ರು. ಠೇವಣಿ ಇಡುವ ಕಾರ್ಯವಾಗಿತ್ತು. ಈ ಯೋಜನೆಯನ್ನು ಬರುವ ಹೊಸ ವರ್ಷಕ್ಕೂ ಮುಂದುವರೆಸಲು ತೀರ್ಮಾನಿಸಲಾಗಿದ್ದು, 2019ರ ಜನವರಿ 1 ರಂದು (ಡಿಸೆಂಬರ್‌ 31ರ ಮಧ್ಯರಾತ್ರಿ 12ರ ನಂತರ) ಬಿಬಿಎಂಪಿಯ 24 ಹೆರಿಗೆ ಆಸ್ಪತ್ರೆಗಳಲ್ಲಿ ಜನಿಸಿದ ಮೊದಲ ಹೆಣ್ಣುಮಕ್ಕಳಿಗೆ ತಲಾ 5 ಲಕ್ಷ ಠೇವಣಿ ಇಡಲಾಗುವುದು ಎಂದರು.

‘ಪಿಂಕ್‌ ಬೇಬಿ’ ಯೋಜನೆಗಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 1.20 ಕೋಟಿ ರು. ಅನುದಾನ ಮೀಸಲಿಡಲಾಗಿದೆ. ಪ್ರತಿ ಆಸ್ಪತ್ರೆಯಲ್ಲಿ ಮೊದಲು ಜನಿಸಿದ ಮಕ್ಕಳಿಗೆ ಮಾತ್ರ ಇದು ಅನ್ವಯ. ಒಂದು ವೇಳೆ ವರ್ಷದ ಮೊದಲ ದಿನ ಯಾವುದೇ ಹೆಣ್ಣುಮಗು ಸಹಜ ಹೆರಿಗೆ ಮೂಲಕ ಜನಿಸದಿದ್ದರೆ 2ನೇ ತಾರೀಖಿನಂದು ಜನಿಸಿದ ಹೆಣ್ಣು ಮಗುವಿಗೆ ಈ ಸೌಲಭ್ಯ ದೊರೆಯಲಿದೆ. ಒಂದು ವೇಳೆ ಅವಳಿ ಜವಳಿ ಮಕ್ಕಳಾದರೆ ಅದರಲ್ಲೂ ಮೊದಲು ಜನಿಸಿದ ಮಗುವಿಗೆ ಠೇವಣಿ ಇಡಲಾಗುವುದು. ಠೇವಣಿಯನ್ನು ಆ ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ವಿವಾಹದ ಸಂದರ್ಭದಲ್ಲಿ ಬಳಸಬಹುದು ಎಂದು ಸ್ಪಷ್ಟಪಡಿಸಿದರು.

ಪಿಂಕ್‌ ಬೇಬಿ ಯೋಜನೆಯ ಸೌಲಭ್ಯ ಪಡೆಯಲು ಪಾಲಿಕೆ ಹೆರಿಗೆ ಆಸ್ಪತ್ರೆಗಳಲ್ಲಿ ಯಾವುದೇ ಬಲವಂತದ ಹೆರಿಗೆ ಅಥವಾ ಮತ್ಯಾವುದೇ ಅಚಾತುರ್ಯಗಳಿಗೆ ಅವಕಾಶ ನೀಡದಂತೆ ವೈದ್ಯಾಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಮೊದಲ ಮಗು ಹುಟ್ಟಿದ ಸಮಯವನ್ನು ಖಚಿತ ಮಾಹಿತಿಯೊಂದಿಗೆ ಪಾಲಿಕೆಗೆ ನೀಡಬೇಕು ಎಂದು ಸೂಚಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

click me!