ಇಸ್ರೋ ಸಾಧನೆಗೆ ಪಾಕ್‌ನ ಮಹಿಳಾ ಗಗನಯಾತ್ರಿ ಸಲೀಂ ಬಹುಪರಾಕ್| ದೈತ್ಯ ಸಾಹಸ ಎಂದು ಬಣ್ಣಿಸಿದ್ದಾರೆ
ಕರಾಚಿ[ಸೆ.10]: ಭಾರತದ ಚಂದ್ರಯಾನ-2 ಯೋಜನೆ ಹಾಗೂ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಂ ಲ್ಯಾಂಡರ್ ಅನ್ನು ಇಳಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪ್ರಯತ್ನಕ್ಕೆ ಪಾಕಿಸ್ತಾನದ ಮೊದಲ ಮಹಿಳಾ ಗಗನ ಯಾತ್ರಿ ನಮ್ರೀನಾ ಸಲೀಂ ಅಭಿನಂದನೆ ಸಲ್ಲಿಸಿದ್ದಾರೆ. ಮಾತ್ರವಲ್ಲ ಇದೊಂದು ದೈತ್ಯ ಸಾಹಸ ಎಂದು ಬಣ್ಣಿಸಿದ್ದಾರೆ.
ಕರಾಚಿ ಮೂಲದ ಡಿಜಿಟಲ್ ವಿಜ್ಞಾನ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸುವ ಇಸ್ರೋದ ಐತಿಹಾಸಿಕ ಪ್ರಯತ್ನವನ್ನು ನಾನು ಅಭಿನಂದಿಸುತ್ತೇನೆ. ಚಂದ್ರಯಾನ-2 ದಕ್ಷಿಣ ಏಷ್ಯಾದಲ್ಲೇ ದೈತ್ಯ ಸಾಹಸವಾಗಿದ್ದು, ಜಾಗತಿಕ ಬಾಹ್ಯಾಕಾಶ ಉದ್ಯಮ ಇದರಿಂದ ಹೆಮ್ಮೆ ಪಡುವಂತಾಗಿದೆ. ದಕ್ಷಿಣ ಏಷ್ಯಾವಲಯದಲ್ಲಿ ಇಂಥ ಬಾಹ್ಯಾಕಾಶ ಬೆಳವಣಿಗೆ ಯಾವ ರಾಷ್ಟ್ರ ಮುನ್ನಡೆಸಿದರೂ ಗಮನಾರ್ಹವೇ. ಭೂಮಿಯಲ್ಲಿ ನಮ್ಮನ್ನು ಬೇರೆ ಮಾಡುವ, ಅತಿಕ್ರಮಿಸುವ ಎಲ್ಲಾ ವಿಚಾರಗಳು ಬಾಹ್ಯಾಕಾಶದಲ್ಲಿ ನಮ್ಮನ್ನು ಒಂದುಗೂಡಿಸುತ್ತದೆ. ಅಲ್ಲಿ ಯಾವ ರಾಜಕೀಯವೂ ಇರುವುದಿಲ್ಲ ಎಂದು ಇಸ್ರೋ ಸಾಧನೆಯನ್ನು ಹಾಡಿ ಹೊಗಳಿದ್ದಾರೆ.
ಉದ್ಯಮಿ ಬ್ರಾನ್ಸನ್ ಒಡೆತನದ ವರ್ಜಿನ್ ಗ್ಯಾಲಕ್ಟಿಕ್ ಸಂಸ್ಥೆ ಮೂಲಕ ಬಾಹ್ಯಾಕಾಶ ಯಾನಗೈದ ಮೊದಲ ಪಾಕಿಸ್ತಾನಿ ಎಂಬ ಹೆಗ್ಗಳಿಕೆಗೆ ಸಲೀಂ ಪ್ರಾತ್ರವಾಗಿದ್ದಾರೆ.