
ತೈವಾನ್(ಸೆ.4): ಈ ಜಗತ್ತೇ ಒಂದು ವಿಸ್ಮಯಗಳ ಆಗರ. ಇಲ್ಲಿ ದಿನಕ್ಕೊಂದು ವಿಸ್ಮಯ, ಅಪರೂಪದಲ್ಲೇ ಅಪರೂಪ ಎನಿಸುವಂತ ಅದೆಷ್ಟೋ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ವಿಚಿತ್ರ ಘಟನೆಗಳು ಮಾನವನ ಗಮನ ಸೆಳೆಯುತ್ತಾ, ಈ ಘಟನಾವಳಿಗಳಿಗೆ ಕಾರಣ ಹುಡುಕಲು ಆತನನ್ನು ಪ್ರೇರೆಪಿಸುತ್ತಲೇ ಇರುತ್ತದೆ.
ಅದರಂತೆ 9 ವರ್ಷಗಳ ಹಿಂದೆ ಹಿಂದೂ ಮಹಾಸಾಗರದಲ್ಲಿ ಕಳೆದು ಹೋಗಿದ್ದ ಬೃಹತ್ ಹಡಗೊಂದು, ಇದೀಗ ದಿಢೀರನೇ ಕಾಣಿಸಿಕೊಂಡಿದೆ. ಈ ಮೂಲಕ ನೌಕಾಯಾನ ಜಗತ್ತನ್ನೇ ದಿಗ್ಭ್ರಾಂತಗೊಳಿಸಿದೆ ಈ ಹಡಗು.
ಹೌದು, ಸ್ಯಾಮ್ ರಾಟುಲ್ಯಾಂಗಿ PB 1600 ಎಂಬ ಸರಕು ಸಾಗಾಣಿಕೆ ಹಡಗು 2009 ರಲ್ಲಿ ತೈವಾನ್ ಸಮೀಪ ಹಿಂದೂ ಮಹಾಸಾಗರದಲ್ಲಿ ಕಾಣೆಯಾಗಿತ್ತು. ಇಂಡೋನೇಷಿಯಾಗೆ ಸೇರಿದ ಈ ಹಡಗು ತೈವಾನ್ ಗೆ ತೆರಳುವ ಸಂದರ್ಭದಲ್ಲಿ ಕಾಣೆಯಾಗಿತ್ತು. ಅಂದಿನಿಂದ ಈ ಹಡಗಿಗಾಗಿ ಅದೆಷ್ಟೇ ಶೋಧ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಆದರೆ ಕಳೆದ ವಾರ ಈ ಬೃಹತ್ ಹಡಗು ಮಯನ್ಮಾರ್ ಬಳಿ ಕಾಣಿಸಿಕೊಂಡಿದ್ದು, ಸಾಗರ ತಜ್ಞರನ್ನು ಅಚ್ಚರಿಗೆ ತಳ್ಳಿದೆ. ಅಚ್ಚರಿ ಎಂದರೆ ಈ ಹಡಗು ಪತ್ತೆ ಮಾಡಿದ ಮೀನುಗಾರರು ಒಳಗೆ ಹೋಗಿ ನೋಡಿದಾಗ ಯಾರೂ ಇರಲಿಲ್ಲ.
ಅಂದರೆ ಕಳೆದ 9 ವರ್ಷಗಳಿಂದ ಈ ಹಡಗು ಸಿಬ್ಬಂದಿಯೇ ಇಲ್ಲದೇ ಸಾಗರದಲ್ಲಿ ಏಕಾಂಗಿಯಾಗಿ ಸಂಚರಿಸಿದೆ. ಅಲ್ಲದೇ ಈ ಹಡಗಿನ ಸಿಬ್ಬಂದಿ ಎಲ್ಲಿದ್ದಾರೆ ಎಂಬುದೇ ಇದೀಗ ಎಲ್ಲರ ಮುಂದಿರುವ ಪ್ರಶ್ನೆ.
ಈ ಹಡಗು ಈಗಲೂ ಚಾಲನೆಗೆ ಶಕ್ತವಾಗಿದ್ದು, ಇದು 9 ವರ್ಷಗಳ ಕಾಲ ಎಲ್ಲಿತ್ತು ಎಂಬ ಪ್ರಶ್ನೆ ಸಾಗರ ತಜ್ಞರನ್ನು ಕಾಡುತ್ತಿದ್ದು, ಇದಕ್ಕೆ ಗೋಸ್ಟ್ ಶಿಪ್(ರಾಕ್ಷಸ ಹಡಗು) ಎಂದು ಹೆಸರಿಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.