
ಗೋಣಿಕೊಪ್ಪಲು(ನ. 04): ಸ್ವತಂತ್ರ ಭಾರತದ ಮೊತ್ತಮೊದಲ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರಿಗೆ ಭಾರತ ರತ್ನ ಪ್ರಶಸ್ತಿ ದೊರೆಯಬೇಕೆಂದು ಹಾಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅಭಿಪ್ರಾಯಪಟ್ಟಿದ್ದಾರೆ. ಬೇರೆಯವರಿಗೆಲ್ಲಾ ಭಾರತ ರತ್ನ ಸಿಕ್ಕಿರುವಾಗ ಕಾರ್ಯಪ್ಪಗೆ ಯಾಕೆ ಸಿಗಬಾರದು ಎಂದು ಸೇನಾ ಮುಖ್ಯಸ್ಥರು ಕೇಳಿದ್ದಾರೆ.
ಇಲ್ಲಿಯ ಕಾವೇರಿ ಕಾಲೇಜಿನಲ್ಲಿ ನಡೆದ ಜನರಲ್ ತಿಮ್ಮಯ್ಯ ಮತ್ತು ಜನರಲ್ ಕಾರ್ಯಪ್ಪನವರ ಪುತ್ಥಳಿಗಳ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಪಿನ್ ರಾವತ್, ತಾನು ಕಾರ್ಯಪ್ಪನವರಿಗೆ ಭಾರತ ರತ್ನ ದೊರಕಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ. ಫೀಲ್ಡ್ ಮಾರ್ಷಲ್ ಜನರಲ್ ತಿಮ್ಮಯ್ಯ(ಎಫ್'ಎಂಸಿಜಿಟಿ) ವೇದಿಕೆಯ ಪರವಾಗಿ ಕರ್ನಲ್ ಕೆ.ಸಿ.ಸುಬ್ಬಯ್ಯನವರು ಭಾರತದ ಚೊಚ್ಚಲ ಸೇನಾ ಮುಖ್ಯಸ್ಥರಿಗೆ ಭಾರತ ರತ್ನಕ್ಕಾಗಿ ಶಿಫಾರಸು ಮಾಡುವಂತೆ ಮಾಡಿಕೊಂಡ ಮನವಿಗೆ ಜ| ಬಿಪಿನ್ ರಾವತ್ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ,
'ಕೊಡವ ನಾಡಿನಿಂದ ಇನ್ನಷ್ಟು ಸೇನಾಮುಖ್ಯಸ್ಥರು ಸಿಗಲಿ':
"ಇದೊಂದು ಐತಿಹಾಸಿಕ ದಿನ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ತುಂಬಾ ಹೆಮ್ಮೆ ಎನಿಸುತ್ತದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸ್ವಾತಂತ್ರ ಸಂದರ್ಭ ದೇಶದ ಸೈನ್ಯದ ವಿಚಾರದಲ್ಲಿ ಪ್ರಮುಖ ನಿರ್ಧಾರಕರಾಗಿ ಉತ್ತಮ ಕಾರ್ಯ ಮಾಡಿದ್ದರು. ಇನ್ನು ಜನರಲ್ ತಿಮ್ಮಯ್ಯ ಐಕಾನಿಕ್ ಲೀಡರ್. ಇಂತಹ ಮಹಾನ್ ವ್ಯಕ್ತಿಗಳ ಪ್ರತಿಮೆ ಅನಾವರಣ ಅವಕಾಶ ದೊರೆತಿರುವುದು ನಿಜಕ್ಕೂ ಸಂತಸ ತಂದಿದೆ. ಕೊಡಗು ಜಿಲ್ಲೆಯಿಂದ ಅಂತಹ ಸೇನಾನಿಗಳು ಮತ್ತೆ ಹುಟ್ಟಿ ಬರಲಿ ಎಂದು ಪ್ರಾರ್ಥಿಸುತ್ತೇನೆ," ಎಂದು ಭಾರತೀಯ ಸೇನಾ ಮುಖ್ಯಸ್ಥರು ಹೇಳಿದ್ದಾರೆ.
ಯೋಧರ ಕುಟುಂಬ ಚೆನ್ನಾಗಿರಬೇಕು:
"ಮಡಿದ ಯೋಧರ ಕುಟುಂಬ, ಮಾಜಿ ಸೈನಿಕರಿಗೆ ಹಾಗೂ ಅವರ ಕುಟುಂಬಕ್ಕೆ ಗೌರವ ಮತ್ತು ರಕ್ಷೆ ನೀಡದಿದ್ದರೆ ದೇಶದ ರಕ್ಷಣಾ ವ್ಯವಸ್ಥೆ ಉತ್ತಮವಾಗಿರಲು ಸಾಧ್ಯವಿಲ್ಲ. ಮಾಜಿ ಸೈನಿಕರು ಮತ್ತವರ ಕುಟುಂಬ ತಮಗಾಗಿಯೇ ಇರುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಮಾಜಿ ಸೈನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವಲ್ಲಿ ಕೆಲವು ಆಸ್ಪತ್ರೆಗಳು ವಿಫಲವಾಗಿವೆ. ಯಾವುದೇ ಸಮಸ್ಯೆ ಇದ್ದರೂ ಸೇನಾ ಮುಖ್ಯ ಕಛೇರಿಗೆ ಬನ್ನಿ. ನಿಮ್ಮೊಂದಿಗೆ ನಾವಿದ್ದೇವೆ," ಎಂದು ಜ| ರಾವತ್ ಭರವಸೆ ನೀಡಿದ್ದಾರೆ. ಜನರಲ್ ತಿಮ್ಮಯ್ಯ ಮ್ಯೂಸಿಯಂ ಗೆ ಭೂಮಿ ಸೇನಾ ವತಿಯಿಂದ 10 ಲಕ್ಷ ಅನುದಾನ ನೀಡಲಾಗುವುದು ಎಂದೂ ಅವರು ಘೋಷಿಸಿದ್ದಾರೆ.
ಅಯ್ಯಪ್ಪಗೆ ಜೀವಮಾನ ಸಾಧನೆ ಪ್ರಶಸ್ತಿ:
ಕೊಡಗು ಜಿಲ್ಲೆಯ ಮಾಜಿ ಸೇನಾನಿಗಳು, ಯೋಧರ ಕುಟುಂಬ ವರ್ಗದವರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಎನ್'ಸಿಸಿ ಕೆಡೆಟ್ಸ್, ಸಾರ್ವಜನಿಕರು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ವತಿಯಿಂದ ವರ್ಷಂಪ್ರತಿ ನೀಡುವ ಜೀವಮಾನ ಸಾಧನೆ ಪ್ರಶಸ್ತಿಯನ್ನು ಕೆಕೆ ಅಯ್ಯಪ್ಪ ಅವರಿಗೆ ಪ್ರದಾನ ಮಾಡಲಾಯಿತು.
ಪೀಚೆಕತ್ತಿ ಗಿಫ್ಟ್:
ಇದೇ ಸಂದರ್ಭದಲ್ಲಿ, ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಗೆ ಕೊಡವ ಸಾಂಪ್ರದಾಯಿಕ ಪೀಚೆಕತ್ತಿ ನೀಡಿ ಗೌರವಿಸಲಾಯಿತು. ಸೇನಾ ಮುಖ್ಯಸ್ಥರ ಭೇಟಿ ಹಿನ್ನೆಲೆ ಗೋಣಿಕೊಪ್ಪ ಪಟ್ಟಣ ಹಾಗೂ ಕಾರ್ಯಕ್ರಮದ ಸ್ಥಳದಲ್ಲಿ ಎಂಇಜಿ ಸೇನಾ ಸಿಬ್ಬಂದಿಯವರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಹೆಲಿಪ್ಯಾಡ್ ಹಾಗೂ ಸೇನಾ ಮುಖ್ಯಸ್ಥರು ಸಂಚರಿಸುವ ಮಾರ್ಗದಲ್ಲಿ ಶಸ್ತ್ರಸಜ್ಜಿತ ಯೋಧರಿಂದ ವಿಶೇಷ ಭದ್ರತೆ ಏರ್ಪಟ್ಟಿತು.
ದೇಶದಲ್ಲೇ ಮೊದಲು:
ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪದ ಕಾವೇರಿ ಕಾಲೇಜಿನ ಆವರಣದಲ್ಲಿ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಇಬ್ಬರು ಸೇನಾನಿಗಳ ಪ್ರತಿಮೆಗಳನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ನಿರ್ಮಾಣ ಮಾಡಿದೆ. ದೇಶದಲ್ಲೇ ಮೊದಲ ಬಾರಿಗೆ ಇಬ್ಬರು ಸೇನಾನಿಗಳ ಪ್ರತಿಮೆ ಒಂದೇ ಕಡೆ ಇರುವ ಖ್ಯಾತಿಗೆ ಕೊಡಗು ಜಿಲ್ಲೆ ಪಾತ್ರವಾಗಿದೆ.
ಇದಕ್ಕೂ ಮುನ್ನ, ಸೇನಾ ವಿಶೇಷ ಹೆಲಿಕಾಪ್ಟರ್ ಮೂಲಕ ಪಾಲಿಬೆಟ್ಟ ಸಮೀಪದ ಖಾಸಗಿ ಹೆಲಿಪ್ಯಾಡ್'ನಲ್ಲಿ ಜ| ಬಿಪಿನ್ ರಾವತ್ ಅವರು ಬೆಳಗ್ಗೆ 10:35ಕ್ಕೆ ಬಂದಿಳಿದರು. ಝೆಡ್ ಪ್ಲಸ್ ಭದ್ರತೆಯಲ್ಲಿ 10:50ಕ್ಕೆ ಕಾರ್ಯಕ್ರಮ ಆಯೋಜಿಸಿದ್ದ ಸ್ಥಳಕ್ಕಾಗಮಿಸಿದ ಸೇನಾ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜನರಲ್ ತಿಮ್ಮಯ್ಯ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಕುಟುಂಬದ ಸದಸ್ಯರೊಂದಿಗೆ ಸೇನಾ ಮುಖ್ಯಸ್ಥರು ಉಭಯ ಕುಶಲೋಪರಿ ವಿಚಾರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.