ಗೌರಿ ಹತ್ಯೆ ಆಯುಧಕ್ಕೆ ಭೀಮಾ ತೀರ ನಂಟು..?

By Suvarna Web DeskFirst Published Sep 12, 2017, 8:12 AM IST
Highlights

ಗೌರಿ ಹತ್ಯೆಗೆ ಬಳಸಿರುವ ನಾಡ ಪಿಸ್ತೂಲ್ (7.65 ಎಂಎಂ) ಪೂರೈಕೆ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಇಳಿದಿರುವ ಅಧಿಕಾರಿಗಳು, ಪಿಸ್ತೂಲ್ ಮಾರಾಟ ಜಾಲವು ಅತಿ ಹೆಚ್ಚು ಹರಡಿರುವ ಕರ್ನಾಟಕ, ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಹುಡುಕಾಟ ನಡೆಸಿದ್ದಾರೆ.

ಬೆಂಗಳೂರು(ಸೆ.12): ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಕುಖ್ಯಾತ ಭೀಮಾ ತೀರದ ಹಂತಕರು ಬಳಸುವ ಮಾದರಿಯ ಪಿಸ್ತೂಲ್ ಉಪಯೋಗಿಸಲಾಗಿದ್ದು, ಹಂತಕರ ಬೆನ್ನು ಹತ್ತಿರುವ ವಿಶೇಷ ತನಿಖಾ ದಳ (ಎಸ್'ಐಟಿ) ಪಿಸ್ತೂಲ್'ನ ಮೂಲ ಪತ್ತೆಗಾಗಿ ಕೃಷ್ಣಾ ನದಿ ಕಣಿವೆ ಹಾಗೂ ನಾಡಿನ ಕಾರಾಗೃಹಗಳಲ್ಲಿ ತೀವ್ರ ಶೋಧ ನಡೆಸಿದೆ.

ಗೌರಿ ಹತ್ಯೆಗೆ ಬಳಸಿರುವ ನಾಡ ಪಿಸ್ತೂಲ್ (7.65 ಎಂಎಂ) ಪೂರೈಕೆ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಇಳಿದಿರುವ ಅಧಿಕಾರಿಗಳು, ಪಿಸ್ತೂಲ್ ಮಾರಾಟ ಜಾಲವು ಅತಿ ಹೆಚ್ಚು ಹರಡಿರುವ ಕರ್ನಾಟಕ, ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಜತೆಗೆ ಅಕ್ರಮ ಶಸ್ತ್ರಾಸ್ತ್ರ ಮಾರಾಟ ಪ್ರಕರಣದಲ್ಲಿ ಬಂಧಿತರಾಗಿರುವ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ ಆರೋಪಿಗಳನ್ನು ವಿಚಾರಣೆಗೊಳಪಡಿಸಿ ಮತ್ತೊಂದು ತಂಡವು ವಿವರಗಳನ್ನು ಕಲೆಹಾಕುತ್ತಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಮಂಗಳೂರು, ಬೆಂಗಳೂರು ಕೇಂದ್ರ ಕಾರಾಗೃಹ ದಲ್ಲಿರುವ  ದೇಶದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂನ ‘ಡಿ’ ಕಂಪನಿಯ ಯೂಸೆಫ್ ಬಚ್ಚಾ ಖಾನ್, ರಶೀದ್ ಮಲಬಾರಿ ಸಹಚರರು ಹಾಗೂ ವಿಜಯಪುರ ಕೇಂದ್ರ ಕಾರಾಗೃಹದಲ್ಲಿರುವ ಮೂವರು ವಿಚಾರಣಾಧೀನ ಕೈದಿಗಳನ್ನು ಅಧಿಕಾರಿಗಳು ಪ್ರಶ್ನಿಸಿ ಪಿಸ್ತೂಲ್ ಮಾರಾಟ ದಂಧೆ ಬಗ್ಗೆ ವಿವರ ಕಲೆ ಹಾಕಿದ್ದಾರೆ. ಇನ್ನೊಂದು ತಂಡವು ಮೈಸೂರು, ಧಾರವಾಡ, ಬಳ್ಳಾರಿ ಹಾಗೂ ಕಲುಟರ್ಗಿ ಸೆಂಟ್ರಲ್ ಜೈಲುಗಳಿಗೆ ತೆರಳಿ ಅಲ್ಲಿರುವ ಶಸ್ತ್ರಾಸ್ತ್ರ ಸರಬರಾಜುದಾರರನ್ನು ವಿಚಾರಿಸಿದೆ ಎನ್ನಲಾಗಿದೆ.

click me!