ಪಿಒಪಿ ಗಣೇಶನ ಮೂರ್ತಿ ಮುಳುಗಿಸಿದರೆ ಕೇಸು?

Published : Aug 22, 2017, 12:44 PM ISTUpdated : Apr 11, 2018, 12:42 PM IST
ಪಿಒಪಿ ಗಣೇಶನ ಮೂರ್ತಿ ಮುಳುಗಿಸಿದರೆ ಕೇಸು?

ಸಾರಾಂಶ

ಗಣೇಶ ಹಬ್ಬ ಆಚರಣೆಗೆ ಮನೆ ಮನೆಗಳಲ್ಲಿ ಹಾಗೂ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲು ರಾಜ್ಯಾದ್ಯಂತ ಭರದ ಸಿದ್ಧತೆಗಳು ನಡೆಯುತ್ತಿದ್ದು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಹಲವು ಮಾರ್ಗದರ್ಶಿ ಸೂತ್ರಗಳನ್ನು  ಸ್ಥಳೀಯ ಆಡಳಿತಕ್ಕೆ ನೀಡಿದೆ.

ಬೆಂಗಳೂರು: ಗಣೇಶ ಹಬ್ಬ ಆಚರಣೆಗೆ ಮನೆ ಮನೆಗಳಲ್ಲಿ ಹಾಗೂ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲು ರಾಜ್ಯಾದ್ಯಂತ ಭರದ ಸಿದ್ಧತೆಗಳು ನಡೆಯುತ್ತಿದ್ದು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಹಲವು ಮಾರ್ಗದರ್ಶಿ ಸೂತ್ರಗಳನ್ನು  ಸ್ಥಳೀಯ ಆಡಳಿತಕ್ಕೆ ನೀಡಿದೆ.
ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ)  ಗಣೇಶಮೂರ್ತಿಯ ಬದಲು ಮಣ್ಣಿನ ಗಣೇಶನ ಪೂಜಿಸುವ ಮೂಲಕ ನಿಸರ್ಗ ಸ್ನೇಹಿಯಾಗಿ ಹಬ್ಬ  ಆಚರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಸಾಂಪ್ರದಾಯಿಕ ಜೇಡಿ ಮಣ್ಣಿನ ಪುಟ್ಟ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವಂತೆ ಮೂರ್ತಿ ತಯಾರಕರಿಗೆ ಸೂಚಿಸಬೇಕು. ಮಣ್ಣಿನ ಮೂರ್ತಿಗಳನ್ನು ಖರೀದಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಬೇಕು. ರಾಸಾಯನಿಕಯುಕ್ತ ಬಣ್ಣ ಬಳಿದಿರುವ ಮೂರ್ತಿಗಳನ್ನು ತಿರಸ್ಕರಿಸಲು ತಿಳಿಸಬೇಕು. ವಿಷಯುಕ್ತ ಮತ್ತು ನೀರಿನಲ್ಲಿ ಕರಗದ ಮೂರ್ತಿಗಳಿಂದ ಜಲಮೂಲಗಳ ಮೇಲಾಗುವ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಬೇಕು ಎಂದು ಮಂಡಳಿ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಿದೆ.
ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಹಬ್ಬಕ್ಕೆ ಮುಂಚೆ, ಹಬ್ಬದ ದಿನ ಹಾಗೂ ನಂತರ ಈ ಮೂರು ಹಂತಗಳಲ್ಲಿ ನೀರನ್ನು ಭೌತಿಕ, ರಾಸಾಯನಿಕ ಪರೀಕ್ಷೆಗೆ ಒಳಪಡಿಸಬೇಕು. ಜಲಪ್ರದೇಶಗಳಲ್ಲಿ ನೀರಿನ ವಿವಿಧ ಗುಣಗಳನ್ನು ವಿಶ್ಲೇಷಿಸಬೇಕು ಎಂದು ಹೇಳಿದೆ.
ಜಲಮೂಲಗಳಲ್ಲಿ ಪರಿಸರಕ್ಕೆ ಹಾನಿಕಾರವಾದ ಪಿಒಪಿ ಗಣೇಶಮೂರ್ತಿಗಳನ್ನು ವಿಸರ್ಜನೆ ಮಾಡಿದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು. ಈಗಾಗಲೇ ಇದರ ಬಗ್ಗೆ ಅರಿವು, ಜಾಗೃತಿ ಮೂಡಿಸಲಾಗುತ್ತಿದೆ. ಇದನ್ನು ಮೀರಿ ಪರಿಸರಕ್ಕೆ ಹಾನಿ ಉಂಟು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. 
- ರಂಗರಾವ್, ಸದಸ್ಯ ಕಾರ್ಯದರ್ಶಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ಪ್ರತಿಯೊಂದು ಊರಿನಲ್ಲೂ ಗಣೇಶನ ಮೂರ್ತಿಗಳ ವಿಸರ್ಜನೆ ಕುರಿತು ಪೊಲೀಸರು, ಸರ್ಕಾರೇತರ ಸಂಘ-ಸಂಸ್ಥೆಗಳು ಮತ್ತು ಧಾರ್ಮಿಕ ಸಮುದಾಯಗಳ ಸಮನ್ವಯ ಸಮಿತಿ ರಚಿಸಬೇಕು. ಗಣೇಶಮೂರ್ತಿ ವಿಸರ್ಜನೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಕೆರೆ-ಬಾವಿಗಳಲ್ಲಿ ಮೂರ್ತಿ ವಿಸರ್ಜಿಸುವಾಗ ಗಣೇಶನಿಗೆ ಪೂಜೆ ಮಾಡಿದ ಪೂಜಾ ವಸ್ತುಗಳನ್ನು ಪ್ರತ್ಯೇಕ ವಿಲೇವಾರಿಗೆ ತಾತ್ಕಾಲಿಕ ಹೊಂಡಗಳು ಹಾಗೂ ತೊಟ್ಟಿಗಳನ್ನು ನಿರ್ಮಿಸಬೇಕು. ಇವುಗಳನ್ನು ಪರೀಕ್ಷೆಗೆ ಒಳಪಡಿಸಿ, ಸಂಸ್ಕರಣೆ ನಂತರವೇ ಅದರ ನೀರನ್ನು ಕೆರೆ-ನದಿಗಳಿಗೆ ಬಿಡಬೇಕು. ಅಲಂಕಾರಕ್ಕೆ ಬಳಸಿದ ವಸ್ತುಗಳನ್ನು ಪ್ರತ್ಯೇಕಗೊಳಿಸಿ ಮರುಬಳಕೆ ಅಥವಾ ಜೈವಿಕ ಕರಗಿಸುವಿಕೆಗೆ ಮುಂದಾಗಬೇಕು. ಕರಗದ ವಸ್ತುಗಳನ್ನು 24 ತಾಸಿನಲ್ಲಿ ವಿಲೇವಾರಿ ಮಾಡಬೇಕು ಎಂದು ಮಾರ್ಗದರ್ಶಿ ಸೂತ್ರಗಳಲ್ಲಿ ತಿಳಿಸಿದೆ.
ಸ್ಥಳೀಯ ಆಡಳಿತ ಹಬ್ಬದ ದಿನಗಳಲ್ಲಿ ಸಂಚಾರಿ ವಿಸರ್ಜನಾ ತೊಟ್ಟಿಗಳ ವ್ಯವಸ್ಥೆ ಮಾಡಬೇಕು. ಅವುಗಳನ್ನು ನಿರ್ದಿಷ್ಟ ಸ್ಥಳಗಳಲ್ಲಿ ನಿಲ್ಲಿಸಬೇಕು. ಯಾವ ದಿನಾಂಕ, ಯಾವ ಜಾಗದಲ್ಲಿ ಈ ಸಂಚಾರ ತೊಟ್ಟಿ ನಿಂತಿರುತ್ತದೆ ಎಂದು ಮೊದಲೇ ವೇಳಾಪಟ್ಟಿ ಸಿದ್ಧಪಡಿಸಿ ಸ್ಥಳೀಯವಾಗಿ ಪ್ರಚಾರ ಮಾಡಬೇಕು ಎಂದೂ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದೆ.
(ಸಾಂದರ್ಭಿಕ ಚಿತ್ರ)
 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!