ನವೆಂಬರ್‌ನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್’ಟಾಪ್: ಸಿಎಂ ಸಿದ್ದರಾಮಯ್ಯ

By Suvarna Web DeskFirst Published Sep 23, 2017, 3:34 PM IST
Highlights

ಪದವಿ ಹಂತದ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ನವೆಂಬರ್‌ನಲ್ಲಿ ಗುಣಮಟ್ಟದ ಲ್ಯಾಪ್‌ಟಾಪ್‌ಗಳನ್ನು ಉಚಿತವಾಗಿ ವಿತರಣೆ ಮಾಡಲು ನಿರ್ಧರಿಸಿದ್ದು, 1.96 ಲಕ್ಷ ಮಕ್ಕಳಿಗೆ ಇದರ ಪ್ರಯೋಜನವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬಳ್ಳಾರಿ: ಪದವಿ ಹಂತದ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ನವೆಂಬರ್‌ನಲ್ಲಿ ಗುಣಮಟ್ಟದ ಲ್ಯಾಪ್‌ಟಾಪ್‌ಗಳನ್ನು ಉಚಿತವಾಗಿ ವಿತರಣೆ ಮಾಡಲು ನಿರ್ಧರಿಸಿದ್ದು, 1.96 ಲಕ್ಷ ಮಕ್ಕಳಿಗೆ ಇದರ ಪ್ರಯೋಜನವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶುಕ್ರವಾರ ನಗರದ ಕಿತ್ತೂರುರಾಣಿ ಚನ್ನಮ್ಮ ಪ್ರೌಢಶಾಲೆ ಮೈದಾನದಲ್ಲಿ ಜರುಗಿದ ವೀರಶೈವ ವಿದ್ಯಾವರ್ಧಕ ಸಂಘದ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಾನು ಬಡತನದಲ್ಲಿ ಓದಿ ಬಂದಿದ್ದೇನೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಸ್ಥಿತಿಗತಿ ಏನೆಂಬುದು ನನಗೆ ಗೊತ್ತು. ಈ ಕಾರಣಕ್ಕಾಗಿಯೇ ವಿದ್ಯಾಸಿರಿ ಸೇರಿದಂತೆ ಅನೇಕ ಶಿಕ್ಷಣಮುಖಿ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಇದೀಗ ಲ್ಯಾಪ್‌ಟಾಪ್‌ಗಳನ್ನು ನೀಡುವ ಮೂಲಕ ಶ್ರೀಮಂತ ಮಕ್ಕಳಿಗೆ ಬಡ ಮಕ್ಕಳು ಸಹ ಶೈಕ್ಷಣಿಕ ಸ್ಪರ್ಧೆಯೊಡ್ಡುವಂತಾಗಬೇಕು. ಲ್ಯಾಪ್‌ಟಾಪ್ಗಳಿಂದ ಜಾಗತಿಕ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದ್ದು, ಇದು ವಿದ್ಯಾರ್ಥಿಗಳ ಶೈಕ್ಷಣಿಕ ಸಮಗ್ರ ಪ್ರಗತಿಗೆ ನೆರವಾಗಲಿದೆ ಎಂಬ ಆಶಯದಿಂದ ಮಕ್ಕಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ನೀಡುವ ನಿಲುವು ತೆಗೆದುಕೊಂಡಿರುವೆ. ಹಾಗಂತ ಇವು ತೋರಿಕೆಗಾಗಿ ನೀಡುವ ಲ್ಯಾಪ್‌ಟಾಪ್ ಅಲ್ಲ. ಅತ್ಯಂತ ಗುಣಮಟ್ಟದ ಬ್ರಾಂಡೆಡ್ ಕಂಪನಿಯ ಲ್ಯಾಪ್‌ಟಾಪ್ಗಳನ್ನೇ ನೀಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಬಸವಣ್ಣನ ಪರಂಪರೆ ನಮ್ಮದು: ಬಸವಾದಿ ಶರಣರ ಪರಂಪರೆ ನಮ್ಮ ರಾಜ್ಯಕ್ಕಿದೆ. ಅಮೆರಿಕ, ರಷ್ಯಾ ಸೇರಿದಂತೆ ಅನೇಕ ಮುಂದುವರಿದ ರಾಷ್ಟ್ರಗಳು ಯೋಚನೆಯೇ ಮಾಡದ ಆ ದಿನಗಳಲ್ಲಿಯೇ ಬಸವಣ್ಣನವರು ಜಾತ್ಯತೀತ ಸಮಾಜದ ಕನಸು ಹೊತ್ತಿದ್ದರು. ಜಾತಿ ವ್ಯವಸ್ಥೆ ಸೇರಿದಂತೆ ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಆಂದೋಲನ ಮಾಡಿದರು.

ಜನರಲ್ಲಿ ಜಾಗೃತಿ ಮೂಡಿಸುವ ಬಹುದೊಡ್ಡ ಕಾರ್ಯ ಕೈಗೊಂಡರು. ಬಸವಣ್ಣನವರು ಮಾಡಿದ ಕಾರ್ಯ ನಿಜಕ್ಕೂ ಅವಸ್ಮರಣೀಯ. ಬಸವಣ್ಣನವರ ಆಶಯದಂತೆಯೇ 100 ವರ್ಷಗಳ ಹಿಂದೆ ಸ್ಥಾಪನೆಗೊಂಡ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘ ಜಾತಿ, ಧರ್ಮ ಎನ್ನದೆ ಎಲ್ಲ ಸಮುದಾಯಗಳಿಗೆ ಅನ್ನ, ಅಕ್ಷರ ಹಾಗೂ ಆಶ್ರಯ ನೀಡುವ ಕೆಲಸ ಮಾಡಿದೆ. ವೀರಶೈವ ವಿದ್ಯಾವರ್ಧಕ ಸಂಘದಿಂದ ಈವರೆಗೆ ಸಹಸ್ರಾರು ಮಕ್ಕಳು ವಿದ್ಯಾವಂತರಾಗಿದ್ದು, ಇದೊಂದು ಚಾರಿತ್ರಿಕ ಸಂಗತಿ ಎಂದು ಶ್ಲಾಘಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಗೆಯ ಜನಮುಖಿ ಚಿಂತನೆಯ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಕೂಡ ಅಗತ್ಯ ನೆರವು ನೀಡಲು ಬದ್ಧವಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ,

ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣ ಪ್ರಗತಿ ಕಡಿಮೆ ಇದ್ದು, ಉನ್ನತ ಶಿಕ್ಷಣ ಪ್ರವೇಶಿಸುವವರ ಸಂಖ್ಯೆ ಹೆಚ್ಚಿಸುವ ದಿಸೆಯಲ್ಲಿ ಸರ್ಕಾರದಿಂದ 11 ರೆಸಿಡೆನ್ಸಿಯಲ್ ಕಾಲೇಜುಗಳನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ತಿಳಿಸಿದರು. ಅನುದಾನಿತ ಕಾಲೇಜುಗಳಲ್ಲಿ 17 ವರ್ಷಗಳಿಂದ ಬೋಧಕ ಸಿಬ್ಬಂದಿಯನ್ನು ಭರ್ತಿ ಮಾಡುವ ಕೆಲಸವಾಗಿಲ್ಲ. ಇದೀಗ ಚಾಲನೆ ನೀಡಿದ್ದೇವೆ.

ಇದರಿಂದ ಬೋಧಕರ ಕೊರತೆ ನೀಗಲಿದ್ದು, ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಉಜ್ಜಯಿನಿ ಪೀಠದ ಸಿದ್ಧಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹಾಗೂ ಕೊಟ್ಟೂರುಸ್ವಾಮಿ ಮಠದ ಡಾ. ಸಂಗನಬಸವ ಸ್ವಾಮಿಗಳು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ರುದ್ರಪ್ಪ ಪಾಟೀಲ್, ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ರಾಜ್ಯಾಧ್ಯಕ್ಷ ಎನ್. ತಿಪ್ಪಣ್ಣ, ಮಾಜಿ ಸಂಸದ ಕೋಳೂರು ಬಸವನಗೌಡ, ವಿಪ ಸದಸ್ಯ ಕೆ.ಸಿ. ಕೊಂಡಯ್ಯ, ಮಾಜಿ ಸಚಿವ ಎಂ. ದಿವಾಕರಬಾಬು, ವೀ.ವಿ.ಸಂಘದ ಅಧ್ಯಕ್ಷ ಅಲ್ಲಂ ಬಸವರಾಜ್, ಕಾರ್ಯದರ್ಶಿ ಉಡೇದ ಬಸವರಾಜ್ ಮತ್ತಿತರರಿದ್ದರು. ವಿಪ ಸದಸ್ಯ ಅಲ್ಲಂ ವೀರಭದ್ರಪ್ಪ ಕಾರ್ಯಕ್ರಮ ನಿರ್ವಹಿಸಿದರು.

ಇನ್ನು ನಾನು ಪದವಿ ಓದುವ ದಿನಗಳಲ್ಲಿ ಹಾಸ್ಟೆಲ್ ಸೌಲಭ್ಯ ಇರಲಿಲ್ಲ. ರೂಂ ಮಾಡಿಕೊಂಡು, ನಾನೇ

ಅಡುಗೆ ಮಾಡಿಕೊಂಡು, ಹೋಟೆಲ್‌ನಿಂದ ಸಾಂಬಾರ್ ತಂದುಕೊಂಡು ಉಂಡು ಕಾಲೇಜಿಗೆ ಹೋಗುತ್ತಿದ್ದೇನು. ಇದನ್ನು ನೆನಪಿಸಿಕೊಂಡೇ ವಿದ್ಯಾಸಿರಿ ಯೋಜನೆ ಜಾರಿಗೆ ತಂದೆ ಎಂದು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಡವ ಹಾಗೂ ಶ್ರಿ ಮಂತರು ಎಂಬ ಬೇಧ ಪುಟ್ಟ ಮಕ್ಕಳಲ್ಲಿ ಬರಬಾರದು ಎಂಬ ಕಾರಣಕ್ಕಾಗಿಯೇ ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ ಅನೇಕ ಕಾರ್ಯಕ್ರಮ ಕೊಟ್ಟೆ ಎಂದರು.

click me!