ಎಲ್ಲಾ ಜಾತಿಯ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್’ಟಾಪ್

By Suvarna Web DeskFirst Published Feb 28, 2018, 2:41 PM IST
Highlights

ಕಳೆದ ಎರಡು ವರ್ಷಗಳಲ್ಲಿ ಉನ್ನತ ಶಿಕ್ಷಣ ಪ್ರಗತಿಯಲ್ಲಿ ದೇಶದಲ್ಲಿ ಕರ್ನಾಟಕವೇ ಮುಂದಿದೆ. ಉನ್ನತ ಶಿಕ್ಷಣದ ಪ್ರಗತಿಯಲ್ಲಿ ದೇಶದ ಪ್ರಮಾಣ ಶೇ.24ರಷ್ಟಿದ್ದರೆ, ರಾಜ್ಯ ಶೇ.28ರಷ್ಟು ಪ್ರಮಾಣ ಹೊಂದಿದೆ.

ಬೆಂಗಳೂರು : ಕಳೆದ ಎರಡು ವರ್ಷಗಳಲ್ಲಿ ಉನ್ನತ ಶಿಕ್ಷಣ ಪ್ರಗತಿಯಲ್ಲಿ ದೇಶದಲ್ಲಿ ಕರ್ನಾಟಕವೇ ಮುಂದಿದೆ. ಉನ್ನತ ಶಿಕ್ಷಣದ ಪ್ರಗತಿಯಲ್ಲಿ ದೇಶದ ಪ್ರಮಾಣ ಶೇ.24ರಷ್ಟಿದ್ದರೆ, ರಾಜ್ಯ ಶೇ.28ರಷ್ಟು ಪ್ರಮಾಣ ಹೊಂದಿದೆ.

ಮುಂದಿನ ಐದು ವರ್ಷದಲ್ಲಿ ಶೇ.40ಕ್ಕೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ಉನ್ನತ ಶಿಕ್ಷಣ ಇಲಾಖೆ ವತಿಯಿಂದ 2017-18ನೇ ಸಾಲಿನಲ್ಲಿ ಪ್ರಥಮ ವರ್ಷದ ಪದವಿ ಹಾಗೂ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಒಂದು ದಶಕದ ಕೆಲಸವನ್ನು ಐದೇ ವರ್ಷದಲ್ಲಿ ಮಾಡಿದೆ. ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಥಾಪಿಸಲಾಗಿದೆ. 16 ರೆಸಿಡೆನ್ಷಿಯಲ್ ಕಾಲೇಜುಗಳ ಪೈಕಿ 10 ಕಾಲೇಜುಗಳನ್ನು ಈಗಾಗಲೇ ಆರಂಭಿಸಲಾಗಿದ್ದು, ಉಳಿದ ಆರು ಕಾಲೇಜುಗಳನ್ನು ಹೈದರಾಬಾದ್ ಕರ್ನಾಟಕದಲ್ಲಿ ಆರಂಭಿಸಲಾಗುವುದು.  ಪ್ರತಿ ಕಾಲೇಜುಗಳಿಗೆ ತಲಾ 25 ಕೋಟಿ ನೀಡಲಾಗುತ್ತಿದ್ದು, ಸದ್ಯದಲ್ಲಿಯೇ ಸಚಿವ ಸಂಪುಟ ಒಪ್ಪಿಗೆ ನೀಡಲಿದೆ. ಮುಂದಿನ ದಿನಗಳಲ್ಲಿ ತಾಲೂಕಿಗೊಂದು ವಸತಿ ಕಾಲೇಜು ಆರಂಭಿಸಲಾಗುವುದು ಎಂದು ತಿಳಿಸಿದರು.

ಸದ್ಯ ೫೭೮ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗುತ್ತಿದೆ. ಮುಂದಿನ ಒಂದು ತಿಂಗಳಿನಲ್ಲಿ ಗುತ್ತಿಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಎಲ್ಲ ವಿದ್ಯಾರ್ಥಿಗಳಿಗೂ ಪ್ರಾಂಶುಪಾಲರ ಮೂಲಕ ಲ್ಯಾಪ್‌ಟಾಪ್ ವಿತರಿಸಲಾಗುತ್ತದೆ. ಕಳೆದ ವರ್ಷ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗಕ್ಕೆ ಸೇರಿದ 31,782 ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‌ಟಾಪ್ ವಿತರಿಸಲಾಗಿತ್ತು. ಈ ಬಾರಿ 1.5 ಲಕ್ಷ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ಹೇಳಿದರು.

ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ಎಲ್ಲ ಕ್ಷೇತ್ರಗಳಿಗಿಂತ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಅದರಂತೆ ಲ್ಯಾಪ್‌ಟಾಪ್ ವಿತರಿಸುವ ಮೂಲಕ ಸರ್ಕಾರವು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 20 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಟಿ.ಬಿ. ಜಯಚಂದ್ರ, ಮೇಯರ್ ಸಂಪತ್‌ರಾಜ್ ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

click me!