
ಬೆಂಗಳೂರು : ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ 3.61 ಕೋಟಿ ಪಡೆದು ನೂರಾರು ಜನರಿಗೆ ವಂಚಿಸಿದ ಆರೋಪದ ಮೇರೆಗೆ ಜಯನಗರದ ಹರೀಂ ಟೂರ್ಸ್ ಮಾಲಿಕ ಹಾಗೂ ಆತನ ಇಬ್ಬರು ಪುತ್ರ ಸೇರಿದಂತೆ ಆರು ಮಂದಿಯನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಟೂರ್ಸ್ ಏಜೆನ್ಸಿ ಮಾಲಿಕ ಸಿಗ್ಬತ್‌ವುಲ್ಲಾ ಷರೀಫ್, ಅವರ ಮಕ್ಕಳಾದ ರೆಹಮಾನ್, ರಿಜ್ವಾನ್, ಏಜೆಂಟರ್‌ಗಳಾದ ತೌಸಿಫ್, ಮಹಮ್ಮದ್ ಮಾಮ್ಜ್ ಹಾಗೂ ಉಮೇರ್ ಬಂಧಿತರು. ಈ ವಂಚನೆ ಸಂಬಂಧ ದಿನಗಳ ಹಿಂದೆ ಆರೋಪಿಗಳ ವಿರುದ್ಧ ಪೊಲೀಸ್ ಆಯುಕ್ತರಿಗೆ ಮೈಸೂರಿನ ಎನ್.ಆರ್. ಮೊಹಲ್ಲಾ ನಿವಾಸಿ ಅರಾಫತ್ ಶಫಿ ದೂರು ನೀಡಿದ್ದರು.
ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತ ಟಿ.ಸುನೀಲ್ ಕುಮಾರ್ ಅವರು ಆರೋಪಿಗಳ ವಿರುದ್ಧ ತನಿಖೆ ನಡೆಸುವಂತೆ ತಿಲಕನಗರ ಠಾಣೆ ಪೊಲೀಸರಿಗೆ ಸೂಚಿಸಿದ್ದರು. ಈ ಆದೇಶ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು, ಮೊಬೈಲ್ ಕರೆಗಳ ವಿವರ ಆಧರಿಸಿ ಮುಂಬೈ ಹಾಗೂ ಅಜ್ಮೇರಾದಲ್ಲಿ ತಲೆಮರೆಸಿಕೊಂಡಿದ್ದ ಷರೀಫ್ ಹಾಗೂ ಆತನ ತಂಡವನ್ನು ಬಂಧಿಸಿ ಕರೆ ತಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಹದಿನೈದು ವರ್ಷಗಳಿಂದ ಷರೀಫ್ ಅವರು, ಜಯನಗರದಲ್ಲಿ ಟೂರ್ಸ್ ಏಜೆನ್ಸಿ ನಡೆಸುತ್ತಿದ್ದಾರೆ. ಇತ್ತೀಚಿಗೆ ರಿಯಾಯ್ತಿ ದರದಲ್ಲಿ ಧಾರ್ಮಿಕ ಕ್ಷೇತ್ರವಾದ ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಜಯನಗರ ಸುತ್ತಮುತ್ತ ಪ್ರಚಾರ ಮಾಡಿದ್ದರು. ಇದನ್ನು ನಂಬಿದ ಕೆಲ ಸ್ಥಳೀಯರು, ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ತಮ್ಮ ಸಂಬಂಧಿಕರಿಗೂ ವಿಚಾರ ತಿಳಿಸಿದ್ದರು.
ಕೊನೆಗೆ ಸೌಲಭ್ಯ ಪಡೆಯಲು 113 ಮಂದಿ ತಲಾ 3.20 ಲಕ್ಷ ಹಾಗೂ ತಮ್ಮ ಪಾಸ್‌ಪೋಟ್ ಗರ್ಳನ್ನು ಏಜೆನ್ಸಿಗೆ ಕೊಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ಹಣ ಪಡೆದ ಬಳಿಕ ಆರೋಪಿಗಳು, ಸಾರ್ವಜನಿಕರ ಸಂಪರ್ಕದಿಂದ ದೂರವಾಗಿದ್ದಾರೆ. ಯಾತ್ರೆ ಬೇಡ ಕೊನಗೆ ತಾವು ನೀಡಿದ ಹಣ ಮರಳಿಸುವಂತೆ ಕೇಳಿದರೆ ಜನರಿಗೆ ಷರೀಫ್ ತಂಡವು ಧಮ್ಕಿ ಹಾಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಂಚನೆ ಕೃತ್ಯ ಬೆಳಕಿಗೆ ಬಂದ ಕೂಡಲೇ ಆರೋಪಿಗಳು ಏಜೆನ್ಸಿ ಬಾಗಿಲು ಬಂದ್ ಮಾಡಿ ಮುಂಬೈ ಹಾಗೂ ಅತ್ಮೇರಾಗೆ ಹೋಗಿ ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ಆಗ್ನೇಯ ವಿಭಾಗದ ಡಿಸಿಪಿ ರಚಿಸಿದ್ದರು. ಅಂತಿಮವಾಗಿ ಮೊಬೈಲ್ ಕರೆ ವಿವರ ಆಧರಿಸಿ ಬುಧವಾರ ಬೆಳಗ್ಗೆ ಆರೋಪಿಗಳನ್ನು ಪತ್ತೆ ಮಾಡಲಾಯಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.