
ಚಿಕ್ಕಮಗಳೂರು (ನ.14): ಜಿಲ್ಲೆಯ ಎಡಪಂಥೀಯ ತೀವ್ರಗಾಮಿಗಳ ಶರಣಾಗತ ಸಮಿತಿಯ ಮುಂದೆ ನಾಲ್ವರು ನಕ್ಸಲಯರು ಸೋಮವಾರ ಶರಣಾಗತಿಯಾಗಿದ್ದಾರೆ. ಈ ಸಂಖ್ಯೆ ಈವರೆಗೆ 10 ಕ್ಕೆ ಏರಿದೆ.
ನಿಲ್ಗುಳಿ ಪದ್ಮನಾಭ, ರಿಜ್ವಾನಾ ಬೇಗಂ, ಭಾರತಿ ಹಾಗೂ ರಾಜು ಎಂಬುವವರು ಜಿಲ್ಲಾ ಎಡಪಂಥೀಯ ತೀವ್ರಗಾಮಿಗಳ ಶರಣಾಗತ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಜಿ. ಸತ್ಯವತಿ, ಸಮಿತಿಯ ಸಂಯೋಜಕರು ಆಗಿರುವ ಜಿಲ್ಲಾ ರಕ್ಷಣಾಧಿಕಾರಿ ಅಣ್ಣಾಮಲೈ ಎದುರು ಹಾಜರಾದರು.
ತಾವುಗಳು ಶರಣಾಗತಿಯಾಗಿದ್ದು ನಕ್ಸಲ್ ಪ್ಯಾಕೇಜ್‌ಗಾಗಿ ಬಂದಿಲ್ಲ, ಸಮಾಜಮುಖಿ ಕಾರ್ಯದಲ್ಲಿ ತೊಡಗಬೇಕೆಂಬ ಉದ್ದೇಶದಿಂದ ಮುಖ್ಯವಾಹಿನಿಗೆ ಬಂದಿದ್ದೇವೆಂದು ಶರಣಾಗತಿಯಾದ ನಾಲ್ವರು ಸಮಿತಿಯ ಹಾಗೂ ಮಾಧ್ಯಮದ ಎದುರು ಹೇಳಿದರು.
ನಿಲ್ಗುಳಿ ಪದ್ಮನಾಭ್, ಕಳೆದ 14 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದು, ಆತನ ವಿರುದ್ಧ 2002 ರಿಂದ 2010 ರವರೆಗೆ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಕ್ಸಲೀಯರು ನಡೆಸಿರುವ ಕೃತ್ಯಗಳಿಗೆ ಸಂಬಂಧಿಸಿದಂತೆ ಒಟ್ಟು 19 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ತಲಾ ೯ ಕೇಸುಗಳಿದ್ದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಕೇಸ್ ದಾಖಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಅಣ್ಣಾಮಲೈ ಸುದ್ದಿಗಾರರಿಗೆ ತಿಳಿಸಿದರು.
ರಿಜ್ವಾನಾ ಬೇಗಂ ಅಲಿಯಾಸ್, ಕಲ್ಪನಾ ಅಲಿಯಾಸ್ ನಿರ್ಮಲ ವಿರುದ್ಧ ಚಿಕ್ಕಮಗಳೂರು ಹಾಗೂ ರಾಯಚೂರು ಜಿಲ್ಲೆಯಲ್ಲಿ ಒಟ್ಟು ೨ ಕೇಸುಗಳಿವೆ. ಇನ್ನುಳಿದಂತೆ ಭಾರತಿ ಹಾಗೂ ರಾಜು ಅಲಿಯಾಸ್ ಪರಶುರಾಂ ನಕ್ಸಲಿಯರು ನಡೆಸಿರುವ ಯಾವುದೇ ಕೃತ್ಯಗಳಲ್ಲಿ ಭಾಗಿಯಾಗಿರುವುದಿಲ್ಲ.
ಈ ನಾಲ್ವರಲ್ಲಿ ನಿಲ್ಗುಳಿ ಪದ್ಮನಾಭ್ ಹಾಗೂ ರಿಜ್ವಾನಾ ಬೇಗಂ ವಿರುದ್ಧ ಕೇಸುಗಳಿರುವುದರಿಂದ ವಶಕ್ಕೆ ತೆಗೆದುಕೊಂಡು ನ್ಯಾಯಾಲಯ ಮುಂದೆ ಹಾಜರುಪಡಿಸಲಾಗುವುದು. ಭಾರತಿ ಹಾಗೂ ರಾಜು ಅವರನ್ನು ಈ ಕ್ಷಣದಲ್ಲೇ ಬಿಡುಗಡೆಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಅವಶ್ಯಕತೆ ಇದ್ದರೆ ತನಿಖೆಗೆ ಸಹಕರಿಸಬೇಕೆಂದು ತಿಳಿಸಲಾಗಿದೆ ಎಂದು ಎಸ್ಪಿ ಹೇಳಿದರು.
ನಿಲ್ಗುಳಿ ಪದ್ಮನಾಭ್ ಹಾಗೂ ರಿಜ್ವಾನಾ ಬೇಗಂ ವಿರುದ್ಧ ದಾಖಲಾಗಿರುವ ಪ್ರಕರಣಗಳು ಈ ಹಿಂದೆ ಬಂಧಿತರಾಗಿದ್ದ ನಕ್ಸಲಿಯರ ವಿರುದ್ಧವು ದಾಖಲಾಗಿದ್ದು, ಅವರೆಲ್ಲರೂ ಬಿಡುಗಡೆಯಾಗಿದ್ದಾರೆ. ಅದುದರಿಂದ ಇವರು ಸಹ ಆದಷ್ಟು ಬೇಗ ಬಿಡುಗಡೆಯಾಗುವ ವಿಶ್ವಾಸವಿದೆ.
ಇನ್ನು ಕೆಲವು ಕೇಸುಗಳು ಸರ್ಕಾರವೇ ಹಿಂಪಡೆಯಲು ವಿವೇಚನೆಗೆ ಬಿಟ್ಟಿರುವುದರಿಂದ ರಾಜ್ಯಮಟ್ಟದಲ್ಲಿರುವ ನಕ್ಸಲ್ ಶರಣಾಗತಿ ಸಮಿತಿಯ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗು ವುದು ಎಂದು ನಕ್ಸಲ್ ಶರಣಾಗತಿ, ಪುನರ್ ವಸತಿ ವಾಪಸಾತಿ ರಾಜ್ಯ ಸಮಿತಿ ಸದಸ್ಯರಾದ ಎ.ಕೆ. ಸುಬ್ಬಯ್ಯ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.