ಕೇಂದ್ರ ಸರ್ಕಾರದ ವಿರುದ್ಧ ಶಂಕರ ಬಿದರಿ ಆಕ್ರೋಶ

By Kannadaprabha NewsFirst Published Oct 4, 2019, 9:36 AM IST
Highlights

ಪ್ರವಾಹ ಪೀಡಿತ ಜನರಿಗೆ ಸ್ಪಂದಿಸದ ಸಂಸದರನ್ನು ಆಯ್ಕೆ ಮಾಡಿದ್ದಕ್ಕೆ ನಮಗೆ ನಾವೇ ಚಪ್ಪಲಿಯಲ್ಲಿ ಹೊಡೆದುಕೊಳ್ಳಬೇಕು ಎಂದು ನಿವೃತ್ತ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಶಂಕರ ಬಿದರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

ಬೆಂಗಳೂರು [ಅ.04]: ನೆರೆಯಿಂದಾಗಿ ನಲುಗಿರುವ ಉತ್ತರ ಕರ್ನಾಟಕದ ಜನರಿಗೆ ಸ್ಪಂದಿಸದ ಸಂಸದರನ್ನು ಆಯ್ಕೆ ಮಾಡಿದ್ದಕ್ಕೆ ನಮಗೆ ನಾವೇ ಚಪ್ಪಲಿಯಲ್ಲಿ ಹೊಡೆದುಕೊಳ್ಳಬೇಕು ಎಂದು ನಿವೃತ್ತ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಶಂಕರ ಬಿದರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಪ್ರವಾಹದಿಂದ ಸಂತ್ರಸ್ತರಾದವರಿಗೆ ನೆರವು ನೀಡದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ನಗರದ ಭಾಷ್ಯಂ ವೃತ್ತದಲ್ಲಿ ‘ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ’ ಆಯೋಜಿಸಿದ್ದ ಬೃಹತ್‌ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಕಳೆದ 70 ವರ್ಷಗಳಲ್ಲಿ ಈ ರೀತಿಯ ಪ್ರವಾಹ ಯಾವತ್ತೂ ಆಗಿಲ್ಲ. ಹಿಂದೆಂದೂ ಕಾಣದ ರೀತಿಯಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದಾಗಿ ನೂರಾರು ಸಂತ್ರಸ್ತರು ಬೀದಿಪಾಲಾಗಿದ್ದಾರೆ. ಪ್ರವಾಹವಾಗಿ ಇಷ್ಟುದಿನಗಳು ಕಳೆದರೂ ಪರಿಹಾರ ನೀಡದೆ ಕೇಂದ್ರ ಸರ್ಕಾರ ಏನು ಮಾಡುತ್ತಿದೆ, ನಮ್ಮ ಸಂಸದರು ಏನು ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಕೇಂದ್ರ ಯಾವುದೇ ರೀತಿಯ ಪರಿಹಾರ ನೀಡಿಲ್ಲ. ಇದು ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದಕ್ಕೂ ಮುನ್ನ ‘ಉತ್ತರ ಕರ್ನಾಟಕ ಉಳಿಸಿ’ ಘೋಷಣೆಯೊಂದಿಗೆ ರಾಜಾಜಿನಗರದ ಭಾಷ್ಯಂ ವೃತ್ತದಿಂದ ರಾಮಮಂದಿರ ಮಾರ್ಗವಾಗಿ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಿತು. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರಹಾಕಿದರು. ಮಹಾಸಂಸ್ಥೆ ಅಧ್ಯಕ್ಷ ಶಿವಕುಮಾರ್‌ ಮೇಟಿ ಇದ್ದರು.

click me!