
ಹಾಸನ[ಆ.24]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸಿಎಂ ಆಗುವ ಕನಸನ್ನು ಬಹಿರಂಗವಾಗಿ ಬಿಚ್ಚಿಟ್ಟಿದ್ದಾರೆ.
ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಾಡ್ಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇನ್ನೊಂದು ಸಲ ಬರ್ತೀನಿ ಅಂದುಕೊಂಡಿದ್ದೇನೆ. ಜನ ಆಶೀರ್ವಾದ ಮಾಡ್ತಾರೆ. ಇನ್ನೊಂದು ಸಲ ಸಿಎಂ ಆಗುವುದಕ್ಕೆ ಜನರು ಆಶೀರ್ವದಿಸುತ್ತಾರೆಂದು ನಂಬಿಕೆಯಿದೆ ಎಂದು ಹೇಳಿದರು.
ಈ ಚುನಾವಣೆಯಲ್ಲೂ ಅಧಿಕಾರ ಸಿಗುತ್ತೆ, ಕೆಲಸ ಮಾಡೋಣ ಎಂದುಕೊಂಡಿದ್ದೆ. ಆದರೆ ಸಾಧ್ಯವಾಗಲಿಲ್ಲ.ಕಾರ್ಯವನ್ನು ಹಂತಹಂತವಾಗಿ ಮಾಡಬೇಕು. ಒಂದೇ ಸಾರಿ ಕೆಲಸ ಮಾಡಿದರೆ ಕೆಲವರ ಕಣ್ಣು ಕೆಂಪಾಗಿಸುತ್ತೆ. ಸೋತಿದ್ದೇವೆಂದು ಎದೆಗುಂದಲ್ಲ.ಹೆದರಲ್ಲ. ಯಾವತ್ತೂ ಹೆದರಿ ಕುಳಿತೇ ಇಲ್ಲ. ರಾಜಕಾರಣದಲ್ಲಿ ಹೆದರಿಕೊಳ್ಳಲೂಬಾರದು ಎಂದು ಸಿದ್ದರಾಮಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜಕಾರಣ ನಿಂತ ನೀರಲ್ಲ
ರಾಜಕಾರಣ ಎಂದೂ ನಿಂತ ನೀರು ಅಲ್ಲ, ಕೆರೆ ನೀರೂ ಅಲ್ಲ ಅದು ಹರಿಯುವ ನೀರು. ರಾಜಕಾರಣದಲ್ಲಿ ಬದಲಾವಣೆ ಆಗಲೇಬೇಕು. ಬದಲಾವಣೆ ಆಗುತ್ತೆ. ಚಕ್ರ ಉರುಳಿದರೆ ಮೇಲುಗಡೆ ಇರುವವರು ಕೆಳಗಡೆ ಬರಲೇಬೇಕು. ಕೆಳಗಡೆ ಇರುವವರು ಮೇಲುಗಡೆ ಬರಬೇಕು ಎಂದು ಪರೋಕ್ಷವಾಗಿ ತಾವು ಮುಖ್ಯಮಂತ್ರಿ ಆಗುವ ಆಶಯ ವ್ಯಕ್ತಪಡಿಸಿದರು.
ಜಾತಿ ರಾಜಕಾರಣ ಬಹಳ ಅಪಾಯಕಾರಿ
ಮತ್ತೆ ಸಿದ್ದರಾಮಯ್ಯ ಸಿಎಂ ಆಗಬಾರದು ಅಂತಾ ಎಲ್ಲಾ ವಿರೋಧಿ ಶಕ್ತಿಗಳು ಒಂದಾದರು. ಆದರೂ ಪರವಾಗಿಲ್ಲ. ಆದರೆ ನಾನು 5 ವರ್ಷದಲ್ಲಿ ಎಲ್ಲಾ ಜಾತಿ ಬಡವರಿಗೆ ಅಕ್ಕಿ ಕೊಟ್ಟಿದ್ದೀನಿ. ಒಂದು ಜಾತಿಗೆ ಕೊಟ್ಟಿದ್ದೀವಾ, ಮಕ್ಕಳಿಗೆ ಹಾಲು ಒಂದು ಜಾತಿ ಕೊಟ್ಟಿದ್ದೀವಾ, ಕ್ಷೀರ ಭಾಗ್ಯ ಪಶು ಭಾಗ್ಯ ಒಂದು ಜಾತಿಗೆ ಕೊಟ್ಟಿದ್ದೀವಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಇನ್ನೊಂದು ಸಾರಿ ಬರ್ತೀನಿ ಅಂತಾ ಅಂದುಕೊಂಡಿದ್ದೀನಿ ಜನ ನನಗೆ ಆಶೀರ್ವಾದ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.