ಕಣ್ಣಿನ ಆಪರೇಷನ್‌: ನೆರೆ ಸಂತ್ರಸ್ತರ ಬಳಿ ಹೋಗಲಾಗದ್ದಕ್ಕೆ ಸಿದ್ದು ಬೇಸರ

By Web DeskFirst Published Aug 8, 2019, 10:28 AM IST
Highlights

ಕಣ್ಣಿನ ಆಪರೇಷನ್‌: ನೆರೆ ಸಂತ್ರಸ್ತರ ಬಳಿ ಹೋಗಲಾಗದ್ದಕ್ಕೆ ಸಿದ್ದು ಬೇಸರ| ನಾನೀಗ ಉತ್ತರ ಕರ್ನಾಟಕದ ಜನರ ಜೊತೆ ಇರಬೇಕಿತ್ತು ಎಂದು ಟ್ವೀಟ್‌| ವೈದ್ಯರು ವಿಶ್ರಾಂತಿಗೆ ಹೇಳಿದ್ದಾರೆ; ಆದರೂ ಎಲ್ಲ ವ್ಯವಸ್ಥೆ ನೋಡಿಕೊಳ್ಳುವೆ

ಬೆಂಗಳೂರು[ಆ.08]: ಕಣ್ಣಿನ ಪೊರೆಯ ಸಮಸ್ಯೆ ನಿವಾರಣೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು,ಈ ಕಾರಣಕ್ಕಾಗಿ ಉತ್ತರ ಕರ್ನಾಟಕ ಭಾಗದ ಪ್ರವಾಹ ಸಂತ್ರಸ್ತರ ಬವಣೆಗೆ ಸ್ಪಂದಿಸಲು ಖುದ್ದಾಗಿ ತೆರಳಲು ಸಾಧ್ಯವಾಗದೇ ಇರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ನಾನು ಉತ್ತರ ಕರ್ನಾಟಕದ ಜನತೆಯ ಜತೆ ಇರಬೇಕಾಗಿತ್ತು. ಆದರೆ, ವೈದ್ಯರ ಸಲಹೆ ಮೇರೆಗೆ ಕೆಲವು ದಿನಗಳ ಕಾಲದ ವಿಶ್ರಾಂತಿ ಪಡೆಯಬೇಕಾಗಿದೆ. ನನ್ನ ಕ್ಷೇತ್ರ ಬಾದಾಮಿಯಲ್ಲಿ ಸಹ ಪ್ರವಾಹ ಭೀತಿ ಎದುರಾಗಿದ್ದು, ಯಾವ ತೊಂದರೆಯೂ ಆಗದ ರೀತಿಯಲ್ಲಿ ಸುವ್ಯವಸ್ಥೆ ಕಲ್ಪಿಸುವ ಹೊಣೆ ನನ್ನದು. ಅದನ್ನು ನಿಭಾಯಿಸುವೆ ಎಂದು ಹೇಳಿದ್ದಾರೆ.

ನವಿಲುತೀರ್ಥ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುವುದರಿಂದ ಮಲಪ್ರಭಾ ನದಿ ದಡದ ಗ್ರಾಮಗಳಲ್ಲಿ ಪ್ರವಾಹ ಉಂಟಾಗಲಿದೆ. ಆದ್ದರಿಂದ ಗ್ರಾಮಸ್ಥರು ಸುರಕ್ಷಿತ ತಾಣಕ್ಕೆ ತೆರಳಬೇಕೆಂದು ಮನವಿ ಮಾಡುತ್ತಿದ್ದೇನೆ. ಉಂಟಾಗಬಹುದಾದ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಹಾಗೂ ಸಂತ್ರಸ್ತರಿಗೆ ಪರಿಹಾರ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ಮಳೆಯಬ್ಬರಕ್ಕೆ ತತ್ತರಿಸಿದ ಕರ್ನಾಟಕ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸ್ಥಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಈಗಾಗಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಸುರಕ್ಷಿತ ತಾಣಕ್ಕೆ ತೆರಳುವವರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಅಧಿಕಾರಿಗಳ ತಂಡ ಸಜ್ಜಾಗಿದೆ. ಈ ಸಂಬಂಧ ಬಾದಾಮಿ ತಹಸೀಲ್ದಾರ್‌, ಬಾಗಲಕೋಟೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಲಿದ್ದೇನೆ ಎಂದು ಹೇಳಿದರು.

ಇದೇ ವೇಳೆ ಇಂತಹ ಸಂಧರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಪ್ರವಾಹ ಸಂತ್ರಸ್ತರ ಜೊತೆ ಇರಬೇಕಾಗಿತ್ತು. ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯಬೇಕಾಗಿದೆ. ಆದಾಗ್ಯೂ ಪ್ರವಾಹದ ಸಂದರ್ಭವನ್ನು ಎದುರಿಸಲು ಈಗಾಗಲೇ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಕ್ಷೇತ್ರದ ಜನತೆಗೆ ಯಾವ ತೊಂದರೆಯೂ ಆಗದ ರೀತಿಯಲ್ಲಿ ಸುವ್ಯವಸ್ಥೆ ಕಲ್ಪಿಸುವ ಹೊಣೆ ನನ್ನದು ಎಂದರು.

click me!