ಬಂಡೀಪುರ ಅಭಯಾರಣ್ಯಕ್ಕೆ ಬೆಂಕಿ ಹಚ್ಚಿದ್ದು ಎನ್‌ಜಿಒ?

By Web DeskFirst Published Mar 13, 2019, 8:03 AM IST
Highlights

ಬಂಡೀಪುರ ಅಭಯಾರಣ್ಯಕ್ಕೆ ಬೆಂಕಿ ಹಚ್ಚಿದ್ದು ಎನ್‌ಜಿಒ?  ತನಿಖೆ ನಂತರ ಅರಣ್ಯ ಇಲಾಖೆಗೆ ಸಂಶಯ: ಸಾಕ್ಷ್ಯ ಸಂಗ್ರಹ | ಒಂದೆಡೆ ಬೆಂಕಿ ನಂದಿಸುತ್ತಿದ್ದಾಗ ಇನ್ನೊಂದೆಡೆ ಹಚ್ಚುತ್ತಿದ್ದರು!

ಬೆಂಗಳೂರು (ಮಾ. 13):  ಅರಣ್ಯ ಸಂಪತ್ತು ರಕ್ಷಿಸುವುದಾಗಿ ಹೋರಾಡುತ್ತಿರುವ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಸದಸ್ಯರೇ ಬಂಡೀಪುರ ಅಭಯಾರಣ್ಯದಲ್ಲಿನ ಕಾಡ್ಗಿಚ್ಚಿಗೆ ಕಾರಣರಾಗಿದ್ದಾರೆ ಎಂದು ಅರಣ್ಯ ಇಲಾಖೆ ಸಂಶಯ ವ್ಯಕ್ತಪಡಿಸಿದೆ.

ಬಂಡೀಪುರ ಅರಣ್ಯದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಗೆ ಕಾರಣ ಪತ್ತೆಹಚ್ಚಲು ಇಲಾಖೆ ತನಿಖೆ ನಡೆಸುತ್ತಿದ್ದು, ತನಿಖೆ ವೇಳೆ ಎನ್‌ಜಿಒಗಳ ಕೈವಾಡ ಇರುವುದು ಗೊತ್ತಾಗಿದೆ. ಇದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಕಿಗೆ ಕಾರಣ ಹುಡುಕುತ್ತಿರುವ ಇಲಾಖೆಯ ಅಧಿಕಾರಿಗಳು, ಅರಣ್ಯದ ಸುತ್ತಮುತ್ತಲ ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಲ ಗ್ರಾಮಸ್ಥರು ಎನ್‌ಜಿಒ ಸದಸ್ಯರು ಬೆಂಕಿಗೆ ಕಾರಣರಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಅಂಶದ ಆಧಾರದಲ್ಲಿ ತನಿಖೆ ಮುಂದುವರೆಸಿದ್ದೇವೆ. ಈ ಬಗ್ಗೆ ಸೂಕ್ತ ದಾಖಲೆಗಳನ್ನು ಕಲೆ ಹಾಕುತ್ತಿದ್ದು, ಸಾಕ್ಷ್ಯಾಧಾರಗಳು ಲಭ್ಯವಾದ ಬಳಿಕ ಆರೋಪಿತರ ಹೆಸರನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.

ಅರಣ್ಯದಲ್ಲಿ ಕಾಣಿಸಿಕೊಳ್ಳುವ ಕಾಡ್ಗಿಚ್ಚು ಒಂದು ಕಡೆಯಿಂದ ಮತ್ತೊಂದು ಹರಡುತ್ತದೆ. ಆದರೆ, ಇತ್ತೀಚೆಗೆ ಕಂಡುಬಂದಿರುವ ಬೆಂಕಿ ಅರಣ್ಯದ ಮಧ್ಯಭಾಗದ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡಿದೆ. ಈ ಅಂಶ ಹೆಲಿಕಾಪ್ಟರ್‌ ಮೂಲಕ ನಡೆದ ಸಮೀಕ್ಷೆಯಿಂದ ಗೊತ್ತಾಗಿದೆ. ಇದನ್ನು ಪರಿಗಣಿಸಿದಲ್ಲಿ ಕಾಡಿಗೆ ಉದ್ದೇಶಪೂರ್ವಕವಾಗಿ ಬೆಂಕಿ ಹೆಚ್ಚಿರುವುದು ತಿಳಿಯುತ್ತದೆ. ಬಂಡೀಪುರದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅರಣ್ಯ ಇಲಾಖೆ ಇಬ್ಬಂದಿ ಹಾಗೂ ಸಾವಿರಾರು ಸ್ವಯಂ ಸೇವಕರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಆದರೆ, ಮತ್ತೊಂದು ಕಡೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿತ್ತು. ಅಧಿಕಾರಿಗಳ ಮೇಲಿನ ಸೇಡಿನಿಂದಾಗಿ ಅರಣ್ಯ ಸಂಪತ್ತನ್ನು ನಾಶ ಮಾಡಿದ್ದಾರೆ ಎಂದು ಅವರು ವಿವರಿಸಿದರು.

-

ಫೋಟೋ ತೆಗೆಯಲು

ಬಿಡದ್ದಕ್ಕೆ ಸೇಡು?

ಬಂಡೀಪುರದಲ್ಲಿ ವನ್ಯಜೀವಿಗಳ ಛಾಯಾಚಿತ್ರಗಳನ್ನು ತೆಗೆಯಲು ಕೆಲವು ಎನ್‌ಜಿಒ ಸದಸ್ಯರು ಅನುಮತಿ ಕೋರಿದ್ದರು. ಆದರೆ, ಅರಣ್ಯ ಅಧಿಕಾರಿಗಳು ಅವಕಾಶ ನೀಡಿರಲಿಲ್ಲ. ಇದರಿಂದಾಗಿ ಆಕ್ರೋಶದಿಂದ ಸದಸ್ಯರು ಇಲಾಖೆಯ ಅಧಿಕಾರಿಗಳ ಕಣ್ತಪ್ಪಿಸಿ ಅರಣ್ಯಕ್ಕೆ ಪ್ರವೇಶಿಸಿ ಬೆಂಕಿ ಹಚ್ಚಿರಬಹುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

click me!