
ಬೆಂಗಳೂರು : ಅರಣ್ಯ ಉತ್ಪನ್ನಗಳ ಕಳವು ಮತ್ತು ಸ್ವಾರ್ಥಕ್ಕಾಗಿ ವನ್ಯಜೀವಿಗಳ ಸಂತತಿ ನಾಶ ಮಾಡುತ್ತಿರುವವರ ವಿರುದ್ಧ ಸುಮಾರು 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೂ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಈ ಪ್ರಕರಣಗಳು ವಿಲೇವಾರಿಯಾಗುತ್ತಿಲ್ಲ. ಪರಿಣಾಮ ಅರಣ್ಯ ಸಂಪತ್ತು ನಾಶ ಮಾಡುವವರಿಗೆ ಮತ್ತಷ್ಟು ಪ್ರೇರಣೆ ಸಿಕ್ಕಂತಾಗಿದೆ.
ಅರಣ್ಯ ಉತ್ಪನ್ನಗಳಾದ ಶ್ರೀಗಂಧ ಸೇರಿದಂತೆ ವಿವಿಧ ಮರಗಳ ಕಳವು, ಕಾಡು ಪ್ರಾಣಿ ಮತ್ತು ಪಕ್ಷಿಗಳ ಹತ್ಯೆ, ಅರಣ್ಯ ಭೂಮಿ ಒತ್ತುವರಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ನ್ಯಾಯಾಲಯಗಳಿಗೆ ಎಫ್‌ಐಆರ್ ಸಲ್ಲಿಕೆಯಾಗಿವೆ. ಆದರೆ, ಆರೋಪ ಪಟ್ಟಿಸಲ್ಲಿಕೆಯಾಗದ ಪರಿಣಾಮ ಪ್ರಕರಣಗಳು ವಿಲೇವಾರಿಯಾಗದೆ ಉಳಿದಿವೆ.
ಅರಣ್ಯ ಇಲಾಖೆಯಲ್ಲಿನ ಅಪರಾಧ ಪ್ರಕರಣಗಳನ್ನು ಅರಣ್ಯ ರಕ್ಷಕರಿಂದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳವರೆಗಿನ ಅಧಿಕಾರಿಗಳು ದಾಖಲು ಮಾಡಿಕೊಳ್ಳುತ್ತಾರೆ. ಆದರೆ, ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮಾತ್ರ ಆರೋಪ ಪಟ್ಟಿಸಲ್ಲಿಕೆ ಮಾಡುತ್ತಾರೆ. ಇದು ಪ್ರಕರಣಗಳ ವಿಳಂಬಕ್ಕೆ ಕಾರಣವಾಗುತ್ತಿದೆ. ಅಲ್ಲದೆ, ಪ್ರಕರಣ ದಾಖಲಾದ ಮೂರು ತಿಂಗಳಲ್ಲಿ ಆರೋಪ ಪಟ್ಟಿಸಲ್ಲಿಕೆಯಾದಲ್ಲಿ ಮಾತ್ರ ನ್ಯಾಯಾಲಯಗಳು ವಿಚಾರಣೆ ನಡೆಸುತ್ತವೆ. ಇಲ್ಲದಿದ್ದರೆ ಅಂತಹ ಪ್ರಕರಣಗಳು ‘ಬಾಕಿಯುಳಿದ ಪ್ರಕರಣಗಳ’ ಪಟ್ಟಿಗೆ ಸೇರುತ್ತವೆ.
ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ವಲಯದ ವ್ಯಾಪ್ತಿಯ ಸುಮಾರು 4ರಿಂದ 8 ಶಾಖೆಗಳಲ್ಲಿನ ನೆಡುತೋಪುಗಳ ನಿರ್ವಹಣೆ ಮಾಡಬೇಕು. ಜೊತೆಗೆ ಆಡಳಿತಾತ್ಮಕ ವಿಚಾರಗಳನ್ನು ನೋಡಿಕೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡಬೇಕು. ಈ ಒತ್ತಡಗಳಿಂದ ಅರಣ್ಯ ಅಪರಾಧಗಳ ತನಿಖೆ ನಡೆಸಿ ಆರೋಪ ಪಟ್ಟಿಸಲ್ಲಿಕೆಗೆ ವಿಳಂಬವಾಗುತ್ತಿದೆ. ಹೆಚ್ಚು ಪ್ರಕರಣಗಳು ವಿಚಾರಣಾ ಹಂತದಲ್ಲಿಯೇ ಉಳಿದುಕೊಳ್ಳುವಂತಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸುತ್ತಾರೆ.
ಅರಣ್ಯ ಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ 41,300ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಬಾಕಿಯಿವೆ. ಅಲ್ಲದೆ, ಶ್ರೀಗಂಧ ಕಳವು ಸೇರಿದಂತೆ ವಿವಿಧ ಮರಗಳ ಕಳವು ಆರೋಪದ 23,150ಕ್ಕೂ ಹೆಚ್ಚು ಪ್ರಕರಣಗಳು ಸೇರಿ ಒಟ್ಟು 64,500ಕ್ಕೂ ಪ್ರಕರಣಗಳು ಬಾಕಿಯಿವೆ. ಅಲ್ಲದೆ, ಪ್ರಸ್ತುತ ಬಾಕಿಯಿರುವ ಪ್ರಕರಣಗಳಲ್ಲಿ ಶೇ.90 ಹಳೆಯ ಪ್ರಕರಣಗಳಾಗಿವೆ. ಈ ಪ್ರಕರಣಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುವ ಸಂಬಂಧ ಯಾವ ಅಧಿಕಾರಿಗಳೂ ಆಸಕ್ತಿ ತೋರುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಪೊಲೀಸ್ ಇಲಾಖೆಯಲ್ಲಿ ವಿಭಿನ್ನ:
ಅರಣ್ಯ ಇಲಾಖೆಯ ಸಿಬ್ಬಂದಿಯೂ ಪೊಲೀಸ್ ಇಲಾಖೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ, ಪೊಲೀಸ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಥವಾ ನಿಯೋಜಿತ ಅಧಿಕಾರಿ (ಸ್ಟೇಷನ್ ಹೆಡ್ ಆಫೀಸರ್) ಠಾಣಾ ಪ್ರಭಾರಾಧಿಕಾರಿಯಾಗಿರುತ್ತಾರೆ. ಠಾಣೆಯಲ್ಲಿ ದಾಖಲಾಗುವ ಪ್ರಕರಣಗಳನ್ನು ಈ ಅಧಿಕಾರಿಗಳು ವಿಚಾರಣೆ ನಡೆಸಬಹುದಾಗಿದೆ. ಜೊತೆಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಬಹುದಾಗಿದೆ. ಆದರೆ, ಅರಣ್ಯ ಇಲಾಖೆಯಲ್ಲಿ ಈ ಅವಕಾಶ ಇಲ್ಲ. ಆದ್ದರಿಂದ ಪ್ರಕರಣಗಳ ವಿಲೇವಾರಿಗೆ ವಿಳಂಬವಾಗುತ್ತಿದೆ.
ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿರುವ ಪ್ರಕಣಗಳನ್ನು ಈಗಾಗಲೇ ಪರಿಶೀಲಿಸಲಾಗಿದೆ. ಇವುಗಳ ವಿಲೇವಾರಿ ಆಗದೇ ಇರುವುದರಿಂದ ಆರೋಪಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಈ ಸಂಬಂಧ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಶೀಘ್ರ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
- ಪುನಾಟಿ ಶ್ರೀಧರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
ಅರಣ್ಯ ಇಲಾಖೆಯಲ್ಲಿ ಬಾಕಿಯಿರುವ ಪ್ರಕರಣಗಳು
(ಅತಿಕ್ರಮಣ ಹೊರತುಪಡಿಸಿ)
ಬೆಂಗಳೂರು 8,445
ಬೆಳಗಾವಿ 2,487
ಬಳ್ಳಾರಿ 2,584
ಚಾಮರಾಜನಗರ 2,526
ಚಿಕ್ಕಮಗಳೂರು 9,597
ಧಾರವಾಡ 1,523
ಹಾಸನ 2,381
ಕಲ್ಬುರ್ಗಿ 1,273
ಕೆನರಾ 20,744
ಕೊಡಗು 2,000
ಮಂಗಳೂರು 4,717
ಮೈಸೂರು 2,727
ಶಿವಮೊಗ್ಗ 7,105.
ರಮೇಶ್ ಬನ್ನಿಕುಪ್ಪೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.