ಸಂಸದರ ನಿಧಿ ಕಬಳಿಸಲು ಕೇಂದ್ರ ಸಚಿವರ ಸಹಿ ಫೋರ್ಜರಿ!

By Web DeskFirst Published Oct 20, 2018, 9:17 AM IST
Highlights

ಸಂಸದರ ನಿಧಿ ಕಡತ ನಿರ್ವಾಹಕ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಪ್ರಧಾನ ಕಾರ್ಯದರ್ಶಿ ಸೇರಿಕೊಂಡು ಕೇಂದ್ರ ಸಚಿವರ ಸಹಿಯನ್ನೇ ಫೊರ್ಜರಿ ಮಾಡಿ ಹಣ ಲಪಟಾಯಿಸಿದ್ದಾರೆ. 

ವಿಜಯಪುರ :  ಜಿಲ್ಲಾಧಿಕಾರಿಗಳ ಸಂಸದರ ನಿಧಿ ಕಡತ ನಿರ್ವಾಹಕ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಪ್ರಧಾನ ಕಾರ್ಯದರ್ಶಿ ಸೇರಿಕೊಂಡು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರ ಹೆಸ​ರಿನ​ಲ್ಲಿಯೇ ನಕಲಿ ಲೆಟರ್‌ಪ್ಯಾಡ್‌ ಸೃಷ್ಟಿಸಿ, ಫೋರ್ಜರಿ ಸಹಿ ಮಾಡಿ .26 ಲಕ್ಷ ವಂಚಿಸಿರುವ ಪ್ರಕರಣ ತಡ​ವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯಪುರದ ಕಾಶಿನಾಥ ಗಂಗಾರಾಮ ರಾಠೋಡ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಸಂಸದರ ನಿಧಿ ಕಡತ ನಿರ್ವಾಹಕ ಗಲಗಲಿ ಬಂಧಿತ ಆರೋಪಿಗಳು. ವಿಜಯಪುರ ಸಂಸದರೂ ಆಗಿರುವ ರಮೇಶ ಜಿಗಜಿಣಗಿ ಅವರ ಲೆಟರ್‌ಪ್ಯಾಡನ್ನು ನಕಲು ಮಾಡಿ, ಅವರಂತೆಯೇ ಸಹಿ ಮಾಡಿ ನಕಲಿ ದಾಖಲಾತಿ ಸೃಷ್ಟಿಸಿ ಶಿಕ್ಷಣ ಸಂಸ್ಥೆಯೊಂದಕ್ಕೆ ಸಂಬಂಧಿಸಿದ ಆರು ಕಾಮಗಾರಿಗಳಿಗೆ ಸಂಸದರ ನಿಧಿಯಿಂದ ಹಣ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ದೂರು ನೀಡಲಾ​ಗಿದೆ. ತಮ್ಮ ಹೆಸರಿನಲ್ಲಿಯೇ ನಕಲಿ ಲೆಟರ್‌ ಪ್ಯಾಡ್‌, ಸಹಿ ಸೃಷ್ಟಿಮಾಡಿ ಸರ್ಕಾರಕ್ಕೆ ವಂಚಿಸಿ​ರುವ ಪ್ರಕರಣದಿಂದಾಗಿ ಸ್ವತಃ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರೇ ದಿಗ್ಭ್ರಮೆಗೊಂಡಿ​ದ್ದಾರೆ.

ಅನುದಾನ ಪರಿಶೀಲನೆ ವೇಳೆ ಬೆಳಕಿಗೆ:

ಕೆಲವು ಗ್ರಾಮಸ್ಥರು ಕೇಂದ್ರ ಸಚಿವ ಜಿಗಜಿಣಗಿ ಅವರ ಬಳಿ ಬಂದು ತಮ್ಮ ಊರಿಗೆ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಂಜೂರಾಗಿರುವ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ ಎಂದು ಸಮಸ್ಯೆ ಹೇಳಿಕೊಂಡಿದ್ದಾರೆ. ಆಗ ಜಿಗಜಿಣಗಿ ಅವರು ತಮ್ಮ ಆಪ್ತ ಸಹಾಯಕನನ್ನು ಕರೆದು ಅನುದಾನ ಮಂಜೂರಾತಿ, ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪಡೆದುಕೊಂಡು ಬರುವಂತೆ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ತಮ್ಮ ಸಂಸದರ ಅನುದಾನದಲ್ಲಿ ಮಂಜೂರು ಮಾಡಿದ ಹಣ ಬೇರೆ ಬೇರೆ ಕಾಮಗಾರಿಗಳಿಗೆ ಮಂಜೂರಾಗಿರುವುದು ಪತ್ತೆಯಾಗಿದೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ​ದಾಗ 2006ರಿಂದ ಇಲ್ಲಿ​ಯ​ವ​ರೆಗೆ ನಕಲಿ ಲೆಟರ್‌ಪ್ಯಾಡ್‌ ಬಳಕೆ ಮಾಡಿದ ವಿಷಯ ಬೆಳಕಿಗೆ ಬಂದಿದೆ. ಇದ​ರಿಂದ ಸುಮಾರು ಆರು ಕಾಮಗಾರಿಗಳಲ್ಲಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ವಿಷಯ ಗೊತ್ತಾಗಿದೆ. ತಕ್ಷಣ ಕೇಂದ್ರ ಸಚಿವರ ಆಪ್ತ ಸಹಾಯಕರು ಅ.17ರಂದು ವಿಜಯಪುರ ಗಾಂಧಿಚೌಕ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

click me!