ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ : ಕಟ್ಟೆಚ್ಚರ

By Web DeskFirst Published Aug 12, 2018, 8:05 AM IST
Highlights

ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಈ ನಿಟ್ಟಿನಲ್ಲಿ ಕಾವೇರಿ ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. 

ಬೆಂಗಳೂರು :  ಕಾವೇರಿ ಕಣಿವೆ ಸೇರಿದಂತೆ ಕೇರಳದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಪ್ರಮಾಣದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ಕಣಿವೆಯ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರಿಗೆ ಮತ್ತು ಪ್ರವಾಸಿಗರಿಗೆ ಪ್ರವಾಹ ಮುನ್ಸೂಚನೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ (ಕೆಎಸ್‌ಎನ್‌ಡಿಎಂಸಿ) ಜಿ.ಎಸ್‌. ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

ರಾಜ್ಯವಿಪತ್ತು ನಿರ್ವಹಣಾ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅವರು, ಆ.14 ವರೆಗೂ ಮಳೆ ಮುಂದುವರೆಯಲಿದ್ದು, ಮಲೆನಾಡು ಮತ್ತು ಕರಾವಳಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ. ಈಗಾಗಲೇ ಮುನ್ನೆಚ್ಚರಿಕೆ ವಹಿಸುವಂತೆ ಮೈಸೂರು ಪ್ರಾಂತ್ಯದ ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹಾಗೂ ಕೃಷಿ ಇಲಾಖೆಯ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. 

ಕೆ.ಆರ್‌.ಎಸ್‌ ಹಾಗೂ ಕಬಿನಿ ಜಲಾಶಯಗಳಿಂದ 1.40 ಲಕ್ಷ ಕ್ಯುಸೆಕ್ಸ್‌ ನೀರನ್ನು ಹರಿಬಿಡಲಾಗಿದ್ದು, ಕಾವೇರಿ ಕಣಿವೆಯ ಪಾತ್ರದ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇನ್ನು ಎರಡ್ಮೂರು ದಿನ ಮಳೆ ಮುಂದುವರೆಯಲಿದ್ದು ನದಿ ನೀರಿನ ಮಟ್ಟಹೆಚ್ಚಾಗುವ ಸಾಧ್ಯತೆಗಳಿವೆ. ಹಾಗಾಗಿ, ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ವಾರಾಂತ್ಯವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನದಿ ವೀಕ್ಷಣೆಗೆ ಹೋಗುವ ಸಾಧ್ಯಗಳಿದೆ. ಈ ವೇಳೆ ಎಚ್ಚರಿಕೆಯಿಂದ ಇರಬೇಕು. ಸೆಲ್ಫಿ ತೆಗೆದುಕೊಳ್ಳುವುದು, ನದಿಯಲ್ಲಿ ಈಜುವುದಕ್ಕೆ ಹೋಗದಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

click me!