ತೇಲುವ ಸೌರಪಾರ್ಕ್ ನಾಳೆ ಉದ್ಘಾಟನೆ

By Suvarna Web DeskFirst Published Dec 3, 2017, 1:57 PM IST
Highlights

ಕೇರಳದ ವಯನಾಡು ಜಲಾಶಯದ ಮೇಲೆ ದೇಶದ ಅತಿದೊಡ್ಡ ಸೌರಪಾರ್ಕ್ ನಿರ್ಮಾಣ

ತಿರುವನಂತಪುರಂ: ಸೌರಪಾರ್ಕ್ ಉದ್ಘಾಟನೆಗೆ ಇತ್ತ ಕರ್ನಾಟಕದ ಪಾವಗಡ ಸಿದ್ಧಗೊಳ್ಳುತ್ತಿರುವಾಗಲೇ, ಅತ್ತ ಭಾರತದ ಅತಿದೊಡ್ಡ ತೇಲುವ ಸೌರ ವಿದ್ಯುತ್ ಘಟಕವೊಂದು ಕೇರಳದಲ್ಲಿ ಸಿದ್ಧಗೊಂಡಿದ್ದು ಸೋಮವಾರ ಉದ್ಘಾಟನೆಗೆ ಸಜ್ಜಾಗಿದೆ.

ಕೇರಳದ ವಯನಾಡ್‌ನ ಬಾಣಾಸುರ್ ಸಾಗರ ಜಲಾಶಯದ ಮೇಲೆ ದೇಶದಲ್ಲೇ ಅತಿದೊಡ್ಡ ತೇಲುವ ಸೌರ ವಿದ್ಯುತ್ ಉತ್ಪಾದನಾ ಘಟಕವನ್ನು ನಿರ್ಮಿಸಲಾಗಿದೆ. ಜಲಾಶಯದ 6000 ಚದರ ಮೀಟರ್ ನೀರಿನ ಮೇಲಿನ ಈ ಸೌರ ವಿದ್ಯುತ್ ಘಟಕದಿಂದ 500 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹಾಕಿಕೊಳ್ಳಲಾಗಿದೆ. ಸೌರ ವಿದ್ಯುತ್ ಘಟಕಕ್ಕೆ 260 ವ್ಯಾಟ್ ಸಾಮರ್ಥ್ಯದ 1938 ಸೌರ ಫಲಕಗಳನ್ನು ಅಳವಡಿಸಲಾಗಿದ್ದು, 30 ಕಿಲೋವ್ಯಾಟ್‌ನ 17 ಇನ್ವರ್ಟರ್‌ಗಳನ್ನು ಬಳಸಲಾಗಿದೆ.

9.25 ಕೋಟಿ ರು. ವೆಚ್ಚದ ಈ ಯೋಜನೆಯಲ್ಲಿ, ಜಲಾಶಯದ ನೀರಿನ ಮಟ್ಟ ಏರಿಳಿತವಾದಂತೆ ಅದಕ್ಕೆ ತಕ್ಕಂತೆ ಸೌರ ಫಲಕಗಳು ಸಮತೋಲನ ಕಾಯ್ದುಕೊಳ್ಳುವ ಲಂಗರು ಯಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಸೌರ ಘಟಕದಿಂದ ವಾರ್ಷಿಕ 7.5 ಲಕ್ಷ ಯುನಿಟ್‌ನಷ್ಟು ವಿದ್ಯುತ್ ಉತ್ಪಾದನೆಯಾಗಲಿದ್ದು, ಅದನ್ನು ಕೆ.ಎಸ್.ಇ.ಬಿ.ಗೆ ಪೂರೈಸಲಾಗುತ್ತದೆ.

ತಿರುವನಂತಪುರಂ ಮೂಲದ ಆ್ಯಡ್‌ಟೆಕ್ ಸಿಸ್ಟಮ್ಸ್ ಲಿಮಿಟೆಲ್ ಬಾಣಾಸುರ್ ಸಾಗರ ಜಲಾಶಯದ ಮೇಲೆ ಸೌರ ವಿದ್ಯುತ್ ಉತ್ಪಾದನಾ ಘಟಕವನ್ನು ನಿರ್ಮಿಸಿದೆ. 2016ರ ಮಾರ್ಚ್‌ನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು.

ಪಶ್ಚಿಮ ಬಂಗಾಳದ ರಾಜರಾತ್‌ನಲ್ಲಿ ನಿರ್ಮಾಣಗೊಂಡಿರುವ 10 ಕಿಲೋವ್ಯಾಟ್‌ನ ಸೌರ ವಿದ್ಯುತ್ ಘಟಕ ಭಾರತದ ಮೊದಲ ತೇಲುವ ಸೌರ ವಿದ್ಯುತ್ ಘಟಕ ಎನಿಸಿಕೊಂಡಿದೆ. ಇದೇ ರೀತಿ ಗುಜರಾತಿನ ನರ್ಮದಾ ನದಿಯ ಕಾಲುವೆಗಳಿಗೆ ಸೌರ ಫಲಕಗಳನ್ನು ಅಳವಡಿಸಿ ಅದರಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ಇನ್ನು ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಕೃಷ್ಣಾ ನದಿಯ ಕಾಲುವೆ ವೇಳೆ ಸೌರ ಫಲಕಗಳನ್ನು ಅಳವಡಿಸಿ 1 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಚಾಲನೆ ನೀಡಲಾಗಿತ್ತು. ಕರ್ನಾಟಕದ ಪಾವಗಡದಲ್ಲಿ 13000 ಎಕರೆ ಪ್ರದೇಶದಲ್ಲಿ 14800 ಕೋಟಿ ರು. ವೆಚ್ಚದಲ್ಲಿ 2000 ಮೆಗಾವ್ಯಾಟ್ ಸೌರವಿದ್ಯುತ್ ಉತ್ಪಾದನಾ ಘಟಕ ನಿರ್ಮಿಸಿದ್ದು, ವಿದ್ಯುತ್ ಉತ್ಪಾದನೆಗೆ ಸಜ್ಜಾಗಿದೆ.

 

click me!