ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಆಗ್ರಹ ಸೇರಿದಂತೆ ಲಿಂಗಾಯತ ಸಭೆಯಲ್ಲಿ ಬಂದ 5 ನಿರ್ಣಯಗಳು

By Suvarna Web DeskFirst Published Aug 10, 2017, 4:46 PM IST
Highlights

ವೀರಶೈವವನ್ನು ಬಿಟ್ಟು ಲಿಂಗಾಯತಕ್ಕೆ ಮಾತ್ರ ಪ್ರತ್ಯೇಕ ಧರ್ಮಮಾನ್ಯತೆ ನೀಡಬೇಕೆಂದು ಕೋರುವುದು; ಬಸವಣ್ಣ ಹಾಗೂ ನಂತರದ ಬಸವಾದಿ ಶರಣರು ಹೇಳಿದ ವಚನಗಳೇ ಲಿಂಗಾಯತರ ಧರ್ಮಗ್ರಂಥ; ಈ ವಚನಗಳನ್ನು ವೀರಶೈವದ ಹೆಸರಿನಲ್ಲಿ ಆ ಸಮುದಾಯದವರು ಬಳಸಿಕೊಳ್ಳಬಾರದು ಎಂಬಿತ್ಯಾದಿ ನಿರ್ಣಯಗಳು ಇದರಲ್ಲಿ ಒಳಗೊಂಡಿವೆ.

ಬೆಂಗಳೂರು(ಆ. 10): ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಆಗ್ರಹ ಮಾಡುವುದು ಸೇರಿದಂತೆ ಐದು ಪ್ರಮುಖ ನಿರ್ಣಯಗಳನ್ನು ಲಿಂಗಾಯತ ಸಮಾಲೋಚನಾ ಸಭೆಯಲ್ಲಿ ಕೈಗೊಳ್ಳಲಾಗಿದೆ. ನೀರಾವರಿ ಸಚಿವ ಎಂಬಿ ಪಾಟೀಲ್ ನೇತೃತ್ವದಲ್ಲಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ಐದು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ವೀರಶೈವವನ್ನು ಬಿಟ್ಟು ಲಿಂಗಾಯತಕ್ಕೆ ಮಾತ್ರ ಪ್ರತ್ಯೇಕ ಧರ್ಮಮಾನ್ಯತೆ ನೀಡಬೇಕೆಂದು ಕೋರುವುದು; ಬಸವಣ್ಣ ಹಾಗೂ ನಂತರದ ಬಸವಾದಿ ಶರಣರು ಹೇಳಿದ ವಚನಗಳೇ ಲಿಂಗಾಯತರ ಧರ್ಮಗ್ರಂಥ; ಈ ವಚನಗಳನ್ನು ವೀರಶೈವದ ಹೆಸರಿನಲ್ಲಿ ಆ ಸಮುದಾಯದವರು ಬಳಸಿಕೊಳ್ಳಬಾರದು ಎಂಬಿತ್ಯಾದಿ ನಿರ್ಣಯಗಳು ಇದರಲ್ಲಿ ಒಳಗೊಂಡಿವೆ.

ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ನಡೆದ ಈ ಲಿಂಗಾಯತ ಸಮಾಲೋಚನಾ ಸಭೆಯಲ್ಲಿ ಬೇಲಿ ಮಠದ ಶಿವರುದ್ರ ಸ್ವಾಮೀಜಿ, ನಾಗನೂರು ಮಠದ ಡಾ. ಸಿದ್ದರಾಮ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮೀಜಿ, ಬಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದೇವರು, ಚಿಂತಕ ರಂಜಾನ್ ದರ್ಗಾ ಸೇರಿದಂತೆ ಹಲವರು ಭಾಗಿಯಾಗಿದ್ದರು. ಆದರೆ, ಬಿಜೆಪಿಯ ಲಿಂಗಾಯತ ಮುಖಂಡರು ಗೈರಾಗಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್'ನ ಲಿಂಗಾಯತ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದು ವಿಶೇಷ.

Latest Videos

ಸಭೆ ಕೈಗೊಂಡ 5 ನಿರ್ಣಯಗಳು:

1) ಬಸವಣ್ಣನವರು ಮತ್ತು ಬಸವಾದಿ ಶರಣರು ಸ್ಥಾಪಿಸಿದ ಐತಿಹಾಸಿಕ ಲಿಂಗಾಯತ ಧರ್ಮ, ಸಿದ್ಧಾಂತ ಮತ್ತು ವಚನಗಳನ್ನು ದಯವಿಟ್ಟು ವೀರಶೈವದ ಹೆಸರಿನಲ್ಲಿ ಬಳಸಿಕೊಳ್ಳಬಾರದು.

2) ಬಸವಾದಿ ಶರಣರ ತತ್ವಗಳ ಪ್ರಚಾರ ಮತ್ತು ಪ್ರಸಾರಕ್ಕಾಗಿ ಸ್ಥಾಪಿಸಲಾದ ವಿರಕ್ತ ಮಠಗಳಲ್ಲಿನ ಪೂಜ್ಯರು ದಯವಿಟ್ಟು ಲಿಂಗಾಯತ ಹೆಸರು ಮತ್ತು ತತ್ವಸಿದ್ದಾಂತವನ್ನು ಯುದ್ಧೋಪಾದಿಯಲ್ಲಿ ಲೋಕಕ್ಕೆ ಅರುಹಬೇಕು. ಒಂದು ವೇಳೆ ಈ ತತ್ವವನ್ನು ಲೋಕಕ್ಕೆ ಪೂರೈಸಲು ಒಪ್ಪದಿದ್ದರೆ ದಯವಿಟ್ಟು ಪೀಠ ತ್ಯಜಿಸಬೇಕು. ಬಸವ ತತ್ವ ಪ್ರಸಾರಕ್ಕಾಗಿ ತಮ್ಮ ಬದುಕನ್ನೇ ಸಮರ್ಪಣೆ ಮಾಡಿದ ಪೂಜ್ಯರಿಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಈ ಮೂಲಕ ಕಳಕಳಿಯ ಮನವಿ ಮಾಡುತ್ತೇವೆ.

3) ಈ ಸಭೆಯು ಲಿಂಗಾಯತ ಧರ್ಮಕ್ಕೆ 'ಸ್ವತಂತ್ರ ಧರ್ಮ' ಎಂದು ಮಾನ್ಯತೆ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸುತ್ತದೆ.

4) ಲಿಂಗಾಯತವನ್ನು ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಸ್ಥಾಪಿಸಿದರೆಂದು ಒಮ್ಮತದಿಂದ ಈ ಸಭೆ ನಿರ್ಣಯಿಸುತ್ತದೆ. ವಚನಗಳೇ ಈ ಧರ್ಮದ ಧರ್ಮ ಗ್ರಂಥ.

5) ಅಖಿಲ ಭಾರತ ವೀರಶೈವ ಮಹಾಸಭೆಯು 1941ನೇ ಇಸವಿಯಲ್ಲಿ ದಾವಣಗೆರೆಯಲ್ಲಿ ಮಹಾಸಭೆಯ ಅಧಿವೇಶನ ಕರೆಯಲಾಗಿತ್ತು. ಅಲ್ಲಿ ಒಮ್ಮತದಿಂದ 'ಅಖಿಲ ಭಾರತ ಲಿಂಗಾಯತ ಮಹಾಸಭೆ' ಎಂದು ಹೆಸರು ಬದಲಾಯಿಸಲು ನಿರ್ಣಯ ಕೈಗೊಂಡಿತ್ತು. ಮತ್ತು ಲಿಂಗಾಯತ ಸ್ವತಂತ್ರ ಧರ್ಮವೆಂದು ಘೋಷಣೆ ಮಾಡಿತ್ತು. ಆದರೆ ಅದು ಇನ್ನೂ ನೆನೆಗುದಿಗೆ ಬಿದ್ದಿರುವುದು ವಿಷಾದದ ಸಂಗತಿ. ಬೆಳಗಾವಿಯ ನಾಗನೂರ ಪೀಠಾಧ್ಯಕ್ಷರು, ಭಾಲ್ಕಿಯ ಅಂದಿನ ಪಟ್ಟದ್ದೇವರು ಈ ನಿರ್ಣಯವನ್ನು ಜಾರಿಗೊಳಿಸುವಂತೆ ಅನೇಕ ಬಾರಿ ಒತ್ತಡ ತಂದಿದ್ದರು. ಅದು ಇನ್ನೂ ಜಾರಿಗೊಳ್ಳದೆ ಇರುವುದರಿಂದ ನಾವು ಈ ವೇದಿಕೆಯ ಮುಖಾಂತರ ಅದನ್ನು ಜಾರಿಗೆ ತರುವಂತೆ ಆಗ್ರಹಿಸುತ್ತೇವೆ.

click me!