
ಹೈದರಾಬಾದ್: ಎರಡು ದಿನಗಳ ಹಿಂದೆ ಜಮ್ಮುವಿನ ಸುಂಜ್ವಾನ್’ನಲ್ಲಿ ಸೇನಾ ಕ್ಯಾಂಪ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ 7 ಮಂದಿ ಯೋಧರ ಪೈಕಿ ಐವರು ಮುಸ್ಲಿಮರು, ಎಂದು ಎಐಎಮ್’ಐಎಮ್ ಮುಖ್ಯಸ್ಥ ಮತ್ತು ಸಂಸದ ಅಸಾದುದ್ದೀನ್ ಒವೈಸಿ ಹೇಳಿದ್ದು, ವಿವಾದವನ್ನು ಸೃಷ್ಟಿಸಿದೆ.
ಸೇನಾ ಕ್ಯಾಂಪ್ ಮೇಲೆ ಉಗ್ರರ ದಾಳಿಯನ್ನು ಖಂಡಿಸಿರುವ ಒವೈಸಿ, ‘ತಮ್ಮನ್ನು ತಾವು ರಾಷ್ಟ್ರೀಯವಾದಿಗಳೆಂದು ಹೇಳಿಕೊಳ್ಳುವವರು ಮುಸ್ಲಿಮರ ರಾಷ್ಟ್ರೀಯತೆಯನ್ನು ಪ್ರಶ್ನಿಸುತ್ತಾರೆ. ಸುಂಜ್ವಾನ್ ದಾಳಿಯಲ್ಲಿ ಹುತಾತ್ಮರಾದವರಲ್ಲಿ 5 ಮಂದಿ ಕಾಶ್ಮೀರಿ ಮುಸ್ಲಿಮರು. ಮುಸ್ಲಿಮರ ದೇಶಪ್ರೇಮ ಪ್ರಶ್ನಿಸುವವರು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮುಸ್ಲಿಮರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಾರೆ, ಆದರೆ ಅವರನ್ನು ಪಾಕಿಸ್ತಾನಿಗಳೆಂದು ಕರೆಯುತ್ತಾರೆ, ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉರಿ, ಪಠಾಣ್’ಕೋಟ್, ನಗ್ರೋಟಾದಲ್ಲಿ ಇಂತಹ ದಾಳಿಗಳು ಈ ಹಿಂದೆಯೂ ನಡೆದಿದೆ, ಆದರೆ ಕೇಂದ್ರವು ಅದರಿಂದ ಪಾಠವನ್ನು ಕಲಿತಿಲ್ಲ. ಗುಪ್ತಚರ ವೈಫಲ್ಯಕ್ಕೆ ಯಾರು ಹೊಣೆಗಾರರು? ಎಂದು ಬಿಜೆಪಿ ವಿರುದ್ಧ ಒವೈಸಿ ವಾಗ್ದಾಳಿ ನಡೆಸಿದ್ದಾರೆ.
ಭಾರತೀಯ ಮುಸ್ಲಿಮರನ್ನು ‘ಪಾಕಿಸ್ತಾನಿ’ ಎಂದು ಜರೆಯುವ ಯಾವುದೇ ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ತರಬೇಕು ಎಂದು ಕಳೆದ ವಾರ ಒವೈಸಿ ಲೋಕಸಭೆಯಲ್ಲಿ ಒತ್ತಾಯಿಸಿದ್ದರು.
ಕಳೆದ ವಾರ, ಮುಸ್ಲಿಮರಿಗೆ ಈ ದೇಶದಲ್ಲಿ ಜಾಗವಿಲ್ಲ, ಅವರು ಪಾಕಿಸ್ತಾನಕ್ಕೋ, ಬಾಂಗ್ಲಾ ದೇಶಕ್ಕೋ ಹೋಗಲಿ, ಎಂದು ಬಿಜೆಪಿ ಸಂಸದ ವಿನಯ್ ಕಟಿಯಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.