
ಪಣಜಿ[ನ.11]: ಹೊರರಾಜ್ಯದಿಂದ ಸರಬರಾಜಾಗುತ್ತಿರುವ ಮೀನಿನಲ್ಲಿ ವಿಷಕಾರಿ ಫಾರ್ಮಾಲಿನ್ ರಾಸಾಯನಿಕ ಅಂಶವಿದೆ ಎಂಬ ಕಾರಣ ಮುಂದೊಡ್ಡಿ ಗೋವಾ ಸರ್ಕಾರ ಆರು ತಿಂಗಳ ಕಾಲ ಮೀನು ಆಮದಿಗೆ ನಿಷೇಧ ಹೇರಿದೆ. ನ.12ರ ಸೋಮವಾರದಿಂದ ಈ ನಿಷೇಧ ಜಾರಿಗೆ ಬರಲಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರ ಮೀನುಗಾರರ ಮೇಲೆ ಗದಾಪ್ರಹಾರ ಮಾಡಿದಂತಾಗಿದೆ.
ಮೀನು ಕೆಡದಂತೆ ರಕ್ಷಿಸಲು ಹೊರರಾಜ್ಯದ ಮೀನುಗಾರರು ಫಾರ್ಮಾಲಿನ್ ರಾಸಾಯನಿಕ ಸಿಂಪಡಿಸಿ, ಗೋವಾಕ್ಕೆ ಸರಬರಾಜು ಮಾಡುತ್ತಿದ್ದಾರೆ. ಇದು ವಿಷಕಾರಿ ರಾಸಾಯನಿಕವಾಗಿದ್ದು, ಮೀನು ಸೇವಿಸುವವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣವೊಡ್ಡಿ ಕಳೆದ ಆಗಸ್ಟ್‌ನಲ್ಲಿ ಗೋವಾ ಸರ್ಕಾರ ಹೊರರಾಜ್ಯದ ಮೀನು ಆಮದಿಗೆ ನಿಷೇಧ ಹೇರಿತ್ತು. ಬಳಿಕ ಹಿಂಪಡೆದಿತ್ತು. ಇದೀಗ ಆರು ತಿಂಗಳ ಕಾಲ ಹೊಸದಾಗಿ ನಿಷೇಧ ಜಾರಿಗೊಳಿಸುತ್ತಿದೆ.
ಮೀನಿನ ಗುಣಮಟ್ಟಪರೀಕ್ಷೆಗೆ ಗೋವಾದಲ್ಲಿ ಪ್ರಯೋಗಾಲಯ ತೆರೆಯಲಾಗುತ್ತಿದೆ. ಆರು ತಿಂಗಳಲ್ಲಿ ಆ ಲ್ಯಾಬ್ ತಲೆ ಎತ್ತಲಿದ್ದು, ಅಲ್ಲಿವರೆಗೂ ಹೊರರಾಜ್ಯದ ಮೀನುಗಳಿಗೆ ಅವಕಾಶವಿಲ್ಲ. ಆನಂತರ ಆಮದು ಮಾಡಿಕೊಳ್ಳಲಾಗುವುದು ಎಂದು ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಶನಿವಾರ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಿಂದಲೇ ಗೋವಾಕ್ಕೆ ನಿತ್ಯ 200ರಿಂದ 300 ಟನ್ ಮೀನು ಸರಬರಾಜಾಗುತ್ತಿದೆ. ಇದಲ್ಲದೆ ಗೋವಾ ಮಗ್ಗುಲಲ್ಲೇ ಇರುವ ಉತ್ತರ ಕನ್ನಡದಿಂದಲೂ ಸಾಕಷ್ಟುಮೀನು ಹೋಗುತ್ತಿದೆ. ಗೋವಾದ ನಿಷೇಧದಿಂದ ರಾಜ್ಯದ ಮೀನುಗಾರರಿಗೆ ಹೊಡೆತ ಬಿದ್ದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ