
ಲಖನೌ(ಫೆ.24): ಚುನಾವಣೆಯಲ್ಲಿ ಗೆಲ್ಲಲು ರಾಜಕೀಯ ಪಕ್ಷಗಳು ಅಥವಾ ರಾಜಕೀಯ ನಾಯಕರು ಯಾವುದೇ ವಾಮ ಮಾರ್ಗ ಅನುಸರಿಸಲು ಸಿದ್ಧ ಎಂಬುದಕ್ಕೆ ಉತ್ತರಪ್ರದೇಶದಲ್ಲಿ ಹೊಸದೊಂದು ಸಾಕ್ಷಿ ನೀಡಿದೆ.
ಸಾಮಾನ್ಯವಾಗಿ ಚುನಾವಣೆಯಲ್ಲಿ ನಕಲಿ ಮತ ತಡೆಯಲು ಕೈ ಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಗುತ್ತದೆ. ಆದರೆ, ಉತ್ತರ ಪ್ರದೇಶ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಕೆಲ ಮತದಾರರು ನಕಲಿ ಕೈ ಬೆರಳನ್ನು ಅಳವಡಿಸಿಕೊಂಡು ಮತ ಚಲಾಯಿಸುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಖಾಸಗಿ ಟೀವಿ ವಾಹಿನಿಯೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಉತ್ತರ ಪ್ರದೇಶ ಚುನಾವಣೆಯ ವೇಳೆ ನಕಲಿ ಬೆರಳಿನ ದಂಧೆ ಬಯಲಾಗಿದೆ. ದೆಹಲಿ ಮೂಲದ ಶಂಬುಕುಮಾರ್ ಎನ್ನುವವರು ತಮ್ಮ ಕೃತಕ ಅಂಗ ತಯಾರಿಕಾ ಕಂಪನಿಗೆ ಪ್ರಮುಖ ರಾಜಕೀಯ ಪಕ್ಷವೊಂದು ಭಾರೀ ಪ್ರಮಾಣದಲ್ಲಿ ನಕಲಿ ಬೆರಳು ಪೂರೈಸಲು ಆರ್ಡರ್ ನೀಡಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ನಕಲಿ ಬೆರಳು ಬಳಸಿದ್ದೇ ಆದಲ್ಲಿ ಒಂದೇ ಮತದಾರ ವಿವಿಧ ಮತಗಟ್ಟೆಗಳಲ್ಲಿ ಹಲವಾರು ಬಾರಿ ಮತಚಲಾಯಿಸಲು ಸಾಧ್ಯವಾಗುತ್ತದೆ. ದೆಹಲಿಯ ವಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು ಹೇಳಿರುವ ಪ್ರಕಾರ, ಕೃತಕವಾಗಿ ಸಂಯೋಜಿಸಿದ 10 ಕೈಬೆರಳುಗಳನ್ನು ತಯಾರಿಸಲು 1.10 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನು ಧರಿಸಿದರೆ ಸಾಮಾನ್ಯ ಕೈ ಬೆರಳಿನಂತೆಯೇ ತೋರುತ್ತದೆ. ಚುನಾವಣಾ ಅಧಿಕಾರಿಗಳು ಮತದಾರ ಕೃತಕ ಕೈ ಬೆರಳು ಅಳವಡಿಸಿಕೊಂಡಿದ್ದನ್ನು ಪತ್ತೆ ಮಾಡುವುದು ಕಷ್ಟಕರ. ಬೆರಳಿಗೆ ಶಾಹಿ ಹಾಕುವಾಗಲೂ ವ್ಯತ್ಯಾಸ ಗೊತ್ತಾಗುವುದಿಲ್ಲ. ಒಂದು ಕೃತಕ ಬೆರಳು ಬಳಸಿ 5 ಸಲ ಮತಹಾಕಬಹುದಾಗಿದೆ ಎಂಬ ಸಂಗತಿ ರಹಸ್ಯ ಕಾರ್ಯಾಚರಣೆಯಿಂದ ಬಹಿರಂಗಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.