
ಬೆಂಗಳೂರು (ಏ.21): ಕ್ಯಾನ್ಸರ್ ಪೀಡಿತರ ಕಷ್ಟಕೋಟಲೆಗಳು ಒಂದೆರೆಡಲ್ಲ. ಚಿಕಿತ್ಸೆಗೆಂದು ಆಸ್ಪತ್ರೆ ಮೆಟ್ಟಿಲು ಹತ್ತಿದರೆ ಲಕ್ಷಗಟ್ಟಲೆ ಹಣ ಖರ್ಚು ಮಾಡಬೇಕಾಗುತ್ತದೆ. ವರ್ಷಗಳ ಕಾಲ ಟ್ರೀಟ್ಮೆಂಟ್ ತೆಗೆದುಕೊಳ್ಳುವಷ್ಟರಲ್ಲಿ ಅವರ ಅರ್ಧ ಜೀವನವೇ ಕಳೆದು ಹೋಗಿರುತ್ತದೆ. ಅಂತಹ ರೋಗಿಗಳ ಬಾಳಿನಲ್ಲಿ ಮಂದಹಾಸ ಮೂಡಿಸುವ ಕಾಲ ಬಂದೊದಗಿದೆ. ಯಾವುದೇ ತಂಟೆತಕರಾರಿಲ್ಲದೆ ಕ್ಯಾನ್ಸರ್ ಪೀಡಿತರಿಗೆ ಬಡ್ಡಿ ರಹಿತ ಸಾಲ ನೀಡಲು ಫೈನಾನ್ಸ್ ಕಂಪನಿಯೊಂದು ಮುಂದಾಗಿದೆ.
ಕ್ಯಾನ್ಸರ್ ಎಂಬ ಕಾಯಿಲೆ ಮನುಷ್ಯನನ್ನು ಹಿಂಡಿ ಹಿಪ್ಪೆಯಾಗಿಸುತ್ತದೆ. ಯಾವುದೇ ಸುಳಿವಿಲ್ಲದೆ ಮನುಷ್ಯನ ಮೇಲೆರಗುವ ಈ ಕಾಯಿಲೆಯಿಂದ ಪಾರಾಗಲು ಲಕ್ಷಗಟ್ಟಲೆ ಹಣ ಸುರಿಯಬೇಕಾಗುತ್ತದೆ. ಒಮ್ಮೆ ಕ್ಯಾನ್ಸರ್ ಬಂತೆಂದರೆ ವರ್ಷಗಳ ಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಚಿಕಿತ್ಸೆ ದುಬಾರಿ ಇರುವ ಕಾರಣ ಬಡ ಮತ್ತು ಮಧ್ಯಮ ವರ್ಗದವರು ನರಳಾಡುವ ಪರಿಸ್ಥಿತಿ ಸರ್ವೆ ಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿ ಮಧ್ಯೆ ಕ್ಯಾನ್ಸರ್ ಪೀಡಿತರ ಸಹಾಯಕ್ಕಾಗಿ ಮೊಟ್ಟ ಮೊದಲ ಬಾರಿಗೆ ಬಡ್ಡಿ ರಹಿತ ಸಾಲ ನೀಡಲು ಸಿಲಿಕಾನ್ ಸಿಟಿಯ ಹೆಚ್ಸಿಜಿ ಆಸ್ಪತ್ರೆ ಯೋಜನೆಯೊಂದನ್ನು ಪ್ರಾರಂಭಿಸಿದೆ. ಅದೇ ಕ್ಯಾನ್ಸರ್ ಪೀಡಿತರಿಗಾಗಿ ಬಡ್ಡಿ ರಹಿತ ಸಾಲದ ಯೋಜನೆ.
ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಇಂಥದೊಂದು ಯೋಜನೆಯನ್ನು ಪ್ರಕಟಿಸಲಾಗಿದೆ. ನಗರದ ಹೆಚ್ಸಿಜಿ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ಫೈನ್ಯಾನ್ಸ್ ಕ್ಯಾನ್ಸರ್ ಪೀಡಿತರಿಗೆ ಬಡ್ಡಿ ರಹಿತ ಸಾಲ ನೀಡಲು ಮುಂದಾಗಿದೆ. ಕ್ಯಾನ್ಸರ್ ಪೀಡಿತರು 5 ಲಕ್ಷದ ವರೆಗೆ ಸಾಲ ಪಡೆಯಬಹುದಾಗಿದೆ. ಒಂದು ವರ್ಷಗಳ ಕಾಲ ಒಂದೇ ಒಂದು ರೂಪಾಯಿ ಬಡ್ಡಿ ನೀಡಬೇಕಿಲ್ಲ..ಬದಲಿಗೆ ವರ್ಷದೊಳಗೆ ಇಎಂಐ ರೂಪದಲ್ಲಿ ಸಾಲ ತೀರಿಸಬಹುದಾಗಿದೆ. ಇಂತಹ ವಿಶಿಷ್ಠ ಯೋಜನೆ ಕ್ಯಾನ್ಸರ್ ಪೀಡಿತರಲ್ಲಿ ಸಂತಸ ಉಂಟುಮಾಡಿದೆ.
ಆರೋಗ್ಯ ಫೈನಾನ್ಸ್ ಅಗತ್ಯವಿರುವ ರೋಗಿಗಳಿಗೆ ಮೊದಲ 12 ತಿಂಗಳಿಗೆ ಬಡ್ಡಿ ರಹಿತ ಆರೋಗ್ಯ ಸೇವಾ ಹಣಕಾಸಿನ ನೆರವನ್ನು ನೀಡುತ್ತದೆ. ಒಂದು ವೇಳೆ ಲೋನ್ ಅವಧಿ ಒಂದು ವರ್ಷ ಮೀರಿದರೆ ಕನಿಷ್ಠ ಬಡ್ಡಿ ದರ ಅಂದರೇ ಶೇಕಡ 6ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ. ಕನಿಷ್ಠ ಕೆವೈಸಿ ದಾಖಲೆ ಇದ್ದರೆ ಲೋನ್ ಸೌಲಭ್ಯವನ್ನು ನೀಡಲಾಗುತ್ತದೆ. ಒಂದು ವೇಳೆ ಅಗತ್ಯ ದಾಖಲೆಗಳು ಇಲ್ಲದಿದ್ದರೂ ಕೆಲ ಪ್ರಶ್ನೆಗಳನ್ನು ಕೇಳಿ ಪೀಡತರಿಗೆ ಹಣ ಅಗತ್ಯವಿದೆಯಾ ಎಂದು ತಿಳಿದು ಅವರಿಗೂ ಸಾಲ ನೀಡಲಾಗುತ್ತದೆ. ಸಾಲ ತೀರಿಸಲು ರೋಗಿಗಳಿಗೆ ಎರಡು ವರ್ಷ ಕಾಲಾವಕಾಶ ನೀಡಲಾಗುತ್ತೆ. ಒಂದು ವೇಳೆ ಸಾಲ ತೀರಿಸಲಾಗದಿದ್ದಲ್ಲಿ ಇನ್ನು ಹೆಚ್ಚು ಕಾಲಾವಕಾಶ ನೀಡಲಾಗುತ್ತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.